ಹರಪನಹಳ್ಳಿ: 2025-26ನೇ ಸಾಲಿನಲ್ಲಿ ತಾಲೂಕಿನ ಎಲ್ಲ ಗ್ರಾಪಂ ತೆರಿಗೆ ವಸೂಲಾತಿಯಲ್ಲಿ ಶೇ.100ರಷ್ಟು ಗುರಿ ತಲುಪುವ ಮೂಲಕ ಹರಪನಹಳ್ಳಿ ತಾಲೂಕು ಎರಡನೇ ಬಾರಿಗೆ ವಿಜಯನಗರ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಿದೆ ಎಂದು ತಾಪಂ ಇಒ ವೈ.ಎಚ್. ಚಂದ್ರಶೇಖರ್ ತಿಳಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, ಜಿಪಂ ಸಿಇಒ ಸೂಚನೆಯಂತೆ ಉಪ ಕಾರ್ಯದರ್ಶಿ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ತೆರಿಗೆ ವಸೂಲಾತಿಗಾಗಿ ವಿಶೇಷ ಅಭಿಯಾನದಡಿ ನಮ್ಮ ಎಲ್ಲ ಗ್ರಾಪಂ ಸಿಬ್ಬಂದಿ ಸಹಕಾರದೊಂದಿಗೆ ಈ ಸಾಲಿನಲ್ಲಿ ₹4.96 ಕೋಟಿ ತೆರಿಗೆ ಸಂಗ್ರಹ ಮಾಡಿ ಉತ್ತಮ ಸಾಧನೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.

2024-25ನೇ ಸಾಲಿನಲ್ಲಿಯೂ ಹರಪನಹಳ್ಳಿ ತಾಲೂಕು ಶೇ.90.04 ಸಾಧನೆ ಮಾಡುವ ಮೂಲಕ ಮೊದಲ ಸ್ಥಾನ ಪಡೆದಿತ್ತು. ನಮ್ಮ ಈ ಸಾಧನೆಗೆ ಅಂದು ಸ್ಥಳೀಯ ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ತೆರಿಗೆ ವಸೂಲಾತಿಗೆ ಶ್ರಮಿಸಿದ ಗ್ರಾಪಂ ಹಾಗೂ ತಾಪಂ ಸಿಬ್ಬಂದಿ ಸನ್ಮಾನಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ.

ತೆರಿಗೆ ವಸೂಲಾತಿಗಾಗಿ ತಾಲೂಕಿನಲ್ಲಿ ವಿಶೇಷ ಕಾರ್ಯಪಡೆ ಜೊತೆಗೆ ಜಿಪಂನಿಂದ ಒಬ್ಬರನ್ನು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ತೆರಿಗೆ ಎನ್ನುವುದು ಕೇವಲ ಹಣವಲ್ಲ, ಅದು ಗ್ರಾಮದ ಅಭಿವೃದ್ಧಿಗೆ ಹಾಕುವ ಬಂಡವಾಳ ಎಂಬ ಘೋಷವಾಕ್ಯವನ್ನು ನಮ್ಮ ಸಿಬ್ಬಂದಿ ಜನರಿಗೆ ಮನವರಿಕೆ ಮಾಡಿ ತೆರಿಗೆ ವಸೂಲಾತಿಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.

ಸಂಗ್ರಹವಾದ ತೆರಿಗೆ ಹಣವನ್ನು ಗ್ರಾಮದ ರಸ್ತೆ, ಚರಂಡಿ ಮತ್ತು ಬೀದಿದೀಪಗಳ ದುರಸ್ತಿಗೆ ಹೇಗೆ ಬಳಸಲಾಗುತ್ತಿದೆ ಎಂದು ಜನರಿಗೆ ತೋರಿಸಿಕೊಟ್ಟಿದ್ದಾರೆ. ಇದರಿಂದ ಜನರಲ್ಲಿ ಪಂಚಾಯಿತಿ ಮೇಲೆ ನಂಬಿಕೆ ಹೆಚ್ಚಲು ಕಾರಣವಾಗಿದೆ ಹಾಗೂ ಆನ್‌ಲೈನ್ ಪಾವತಿ ವ್ಯವಸ್ಥೆಯನ್ನು ಸರಳಗೊಳಿಸುವ ಮೂಲಕ ಜನರು ಕಚೇರಿಗೆ ಅಲೆಯುವ ಸಂಕಷ್ಟ ತಪ್ಪಿಸಿದ್ದು ವಸೂಲಾತಿ ವೇಗ ಪಡೆಯಲು ಸಹಕಾರಿಯಾಗಿದೆ ಎಂದು ತಿಳಿಸಿದ್ದಾರೆ.


ಸಣ್ಣಪುಟ್ಟ ಕೆಲಸಗಳಿಗಾಗಿ, ಸರ್ಕಾರದ ಅನುದಾನಕ್ಕಾಗಿ ಕಾಯದೇ ತೆರಿಗೆ ವಸೂಲಾತಿ ಹಣದಿಂದ ಪಂಚಾಯಿತಿಯಿಂದಲೇ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು. ಕುಡಿಯುವ ನೀರಿನ ಪೂರೈಕೆ, ಕಸ ವಿಲೇವಾರಿ, ಗ್ರಾಮೀಣ ಭಾಗದ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲು ಆರ್ಥಿಕ ಬಲ ಸಿಕ್ಕಂತಾಗುತ್ತದೆ ಎಂದು ತಿಳಿಸಿದ್ದಾರೆ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಿಲ್ಲೆಗಳ ಕಾರ್ಯಕ್ಷಮತೆ ಅಳೆಯಲು ರೂಪಿಸಿರುವ 36 ಮಾನದಂಡಗಳ ರ‍್ಯಾಂಕಿಂಗ್ ವ್ಯವಸ್ಥೆಯಲ್ಲಿ ಹರಪನಹಳ್ಳಿ ಆಡಳಿತಾತ್ಮಕವಾಗಿ ಉತ್ತಮ ಸಾಧನೆ ಮಾಡಿದೆ. ಕಂದಾಯ ವಸೂಲಾತಿ, ನರೇಗಾ ಯೋಜನೆ, ಸ್ವಚ್ಛ ಭಾರತ್ ಮಿಷನ್, ಜಲ ಜೀವನ್ ಮಿಷನ್, ಆಡಳಿತಾತ್ಮಕ ನಿರ್ವಹಣೆ ಸೇರಿ ವಿವಿಧ 36 ಮಾನದಂಡಗಳಲ್ಲಿಯೂ ಹರಪನಹಳ್ಳಿ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ತಿಳಿಸಿದ್ದಾರೆ.

ಗ್ರಾಮ ಸ್ವರಾಜ್ಯದ ಕನಸು ನನಸಾಗಬೇಕಾದರೆ ಗ್ರಾಮಗಳು ಆರ್ಥಿಕವಾಗಿ ಸಶಕ್ತವಾಗಬೇಕು, ಹರಪನಹಳ್ಳಿ ತಾಲ್ಲೂಕಿನ ಪ್ರತಿ ಗ್ರಾಮವೂ ಇಂದು ಆ ಹಾದಿಯಲ್ಲಿ ಮುನ್ನಡೆಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ ತೆರಿಗೆ ಪಾವತಿಸುವುದು ಕೇವಲ ಕಾನೂನಿನ ಪಾಲನೆಯಲ್ಲ, ಅದು ತಾಲ್ಲೂಕಿನ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕನ ಪಾಲುದಾರಿಕೆಯಾಗಿದೆ. ಇನ್ನೂ ತೆರಿಗೆ ಬಾಕಿ ಉಳಿಸಿಕೊಂಡಿರುವವರು ಆದಷ್ಟು ಶೀಘ್ರ ತೆರಿಗೆ ಪಾವತಿಸಿ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಿರಿ ಎಂದು ಮನವಿ ಮಾಡಿದ್ದಾರೆ.