ಬ್ಯಾಡಗಿ: ಭಾನುವಾರ ಸಂಜೆ ಗುಡುಗು, ಮಿಂಚು ಸಹಿತ ಗಾಳಿ ಮಳೆಗೆ ಅಂತಾರಾಷ್ಟ್ರೀಯ ಮೆಣಸಿನಕಾಯಿ ಮಾರುಕಟ್ಟೆ ಸೇರಿದಂತೆ ತಾಲೂಕಿನ ವಿವಿಧೆಡೆ ಸಾರ್ವಜನಿಕ ಜನಜೀವನ ಅಸ್ತವ್ಯಸ್ಥಗೊಳ್ಳುವಂತಾಯಿತಲ್ಲದೇ ಯಾವುದೇ ಆಸ್ತಿಪಾಸ್ತಿ ಹಾನಿ, ಸಾವು-ನೋವಿನ ವರದಿಗಳಾಗಿಲ್ಲ.

ಸಂಜೆ 5 ಗಂಟೆಯವರೆಗೂ ಗಾಳಿ-ಮಳೆಯ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಬೆಳಗ್ಗೆಯಿಂದ ಬಿರು ಬೇಸಿಗೆ ವಾತಾವರಣ ಮುಂದುವರೆದಿತ್ತು. ಆದರೆ ಸಂಜೆ 5 ಗಂಟೆ ಸುಮಾರಿಗೆ ವೇಗವಾದ ಗಾಳಿಯೊಂದಿಗೆ ಆರಂಭವಾದ ಮಳೆ ರಭಸವಾಗಿ ಸುರಿಯುವಂತೆ ಮಾಡಿತು. ಗಾಳಿಯ ಆರ್ಭಟಕ್ಕೆ ಬಹುತೇಕ ಮರದ ಟೊಂಗೆಗಳು ಮುರಿದು ರಸ್ತೆ ಮಧ್ಯಭಾಗದಲ್ಲಿ ಬೀಳುವ ಮೂಲಕ ವಾಹನಗಳ ಸಂಚಾರಕ್ಕೆ ವ್ಯತ್ಯಯ ಉಂಟು ಮಾಡಿತು.ತಾಡಪಲಗಳಿಗಾಗಿ ತಡಕಾಡಿದರು: ಸ್ಥಳೀಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ ಬೆಳಗ್ಗೆ ಟೆಂಡರ್ ಆರಂಭವಾಗಲಿದ್ದು, ಮುನ್ನಾ ದಿನವಾದ ಭಾನುವಾರ ಮಾರುಕಟ್ಟೆಯಲ್ಲಿ ಚೀಲಗಳನ್ನು ಅನಲೋಡ್ ಮಾಡುವ ತರಾತುರಿಯಲ್ಲಿದ್ದ ರೈತರು ಗಾಳಿ ಹಾಗೂ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋದರು. ಏಕಾಏಕಿ ಸುರಿದ ಗಾಳಿ -ಮಳೆಗೆ ವರ್ತಕರು ಹಾಗೂ ದಲಾಲರು ಪ್ಲಾಸ್ಟಿಕ್‌ ಹೊದಿಕೆ ಹಾಗೂ ತಾಡಪಾಲನಿಂದ ಚೀಲಗಳು ತೊಯ್ಯದಂತೆ ಮುಚ್ಚುವ ಮೂಲಕ ರೈತರಿಗೆ ನಷ್ಟ ತಡೆಯುವ ನಿಟ್ಟಿನಲ್ಲಿ ಹರಸಾಹಸಪಡುತ್ತಿದ್ದ ದೃಶ್ಯಗಳು ಕಂಡು ಬಂದವು. ಇನ್ನೂ ಕೆಲವರು ಏಕಾಏಕಿ ಮಳೆಯಾಗಿದ್ದರಿಂದ ತಾಡಪಲ್‌ಗಳಿಗಾಗಿ ತಡಕಾಡುತ್ತಿದ್ದ ದೃಶ್ಯಗಳು ಕಂಡು ಬಂದವು. ಅಷ್ಟಕ್ಕೂ ಮಾರಾಟಕ್ಕೆ ಆಗಮಿಸಿದ್ದ ಸುಮಾರು ಲಕ್ಷಕ್ಕೂ ಅಧಿಕ ಚೀಲಗಳು ಅನಲೋಡ ಆಗದೇ ಲಾರಿಗಳಲ್ಲಿ ಉಳಿದವು.ರಸ್ತೆ ಮೇಲೆ ಹರಿದ ನೀರು: ಸಂಜೆ ಸುರಿದ ಭಾರಿ ಮಳೆ-ಗಾಳಿಗೆ ಪಟ್ಟಣದ ಕೆಲವೆಡೆ ಚರಂಡಿಗಳಲ್ಲಿ ಮಳೆ ನೀರು ತುಂಬಿ ರಸ್ತೆಗಳ ಮೇಲೆ ಹರಿಯುತ್ತಿರುವ ದೃಶ್ಯಗಳು ಕಂಡು ಬಂದವು, ಇದರಿಂದ ಕಸದ ಜೊತೆಗೆ ಪ್ಲಾಸ್ಟಿಕ್‌ ಬಾಟಲಿಗಳು ಕೂಡ ರಸ್ತೆಗಳ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು, ಅಧಿಕ ಗಾಳಿಯಿಂದಾಗಿ ಸುಮಾರು 3 ತಾಸಿಗೂ ಅಧಿಕ ಸಮಯ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.