ಶಿಕ್ಷಕರ ನೇಮಕಾತಿಗೆ ಆಂಧ್ರ ಸರ್ಕಾರ ಅಸ್ತು: ಗಡಿನಾಡ ಕನ್ನಡಿಗರಿಗೆ ಉದ್ಯೋಗ ಭಾಗ್ಯ

| Published : Jun 18 2024, 12:53 AM IST

ಶಿಕ್ಷಕರ ನೇಮಕಾತಿಗೆ ಆಂಧ್ರ ಸರ್ಕಾರ ಅಸ್ತು: ಗಡಿನಾಡ ಕನ್ನಡಿಗರಿಗೆ ಉದ್ಯೋಗ ಭಾಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಈ ಹಿಂದಿನ ವೈಎಸ್ಸಾರ್‌ಸಿ ಪಕ್ಷದ ಜಗನ್‌ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ನೇಮಕದ ನಿರೀಕ್ಷೆಯಿತ್ತು.

ಮಂಜುನಾಥ ಕೆ.ಎಂ.

ಬಳ್ಳಾರಿ: ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧಿಕಾರ ವಹಿಸಿಕೊಳ್ಳುವ ವೇಳೆ 16,347 ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಮೊದಲ ಕಡತಕ್ಕೆ ಸಹಿ ಹಾಕುತ್ತಿದ್ದಂತೆಯೇ ಗಡಿಭಾಗದ ಕನ್ನಡಿಗರಲ್ಲಿ ಉದ್ಯೋಗದ ನಿರೀಕ್ಷೆ ಗರಿಗೆದರಿದೆ.

ಈ ಹಿಂದಿನ ವೈಎಸ್ಸಾರ್‌ಸಿ ಪಕ್ಷದ ಜಗನ್‌ಮೋಹನ್ ರೆಡ್ಡಿ ಸರ್ಕಾರದ ಅವಧಿಯಲ್ಲಿ ಶಿಕ್ಷಕರ ನೇಮಕದ ನಿರೀಕ್ಷೆಯಿತ್ತು. ಆದರೆ, ಶಿಕ್ಷಕರ ನೇಮಕಾತಿ ಬದಲು ಆಂಧ್ರಪ್ರದೇಶ ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ಪ್ರೌಢಶಾಲೆಗಳಲ್ಲಿ ವಿಲೀನಗೊಳಿಸಲಾಯಿತು. ಇದರಿಂದ ಶಿಕ್ಷಕ ಹುದ್ದೆಯ ಅರ್ಹತೆ ಪಡೆದವರಿಗೆ ನಿರಾಸೆಯಾಗಿತ್ತು. ಇದೀಗ ಹೊಸದಾಗಿ ಅಧಿಕಾರಕ್ಕೆ ಬಂದಿರುವ ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಸರ್ಕಾರ, ಶಿಕ್ಷಕರ ನೇಮಕ ಸೇರಿದಂತೆ ಉದ್ಯೋಗ ಸೃಷ್ಟಿಯ ಕಡೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದು ಅಧಿಕಾರ ಪದಗ್ರಹಣ ದಿನವೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯ ಕಡತಕ್ಕೆ ಸಹಿ ಹಾಕಿರುವುದು ಶಿಕ್ಷಕ ಹುದ್ದೆಯ ಕನಸು ಹೊತ್ತ ಗಡಿನಾಡ ಕನ್ನಡಿಗರಲ್ಲಿ ಉದ್ಯೋಗ ದಕ್ಕುವ ನಿರೀಕ್ಷೆ ಮತ್ತಷ್ಟು ಗಟ್ಟಿಗೊಂಡಿದೆ.

23 ಸಾವಿರ ಕನ್ನಡ ಮಾಧ್ಯಮ ಮಕ್ಕಳ ಕಲಿಕೆ:

ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ 20 ಹಾಗೂ ಕರ್ನೂಲ್ ಜಿಲ್ಲೆಯಲ್ಲಿ 57 ಕನ್ನಡ ಮಾಧ್ಯಮ ಪ್ರಾಥಮಿಕ, ಪ್ರೌಢಶಾಲೆಗಳಿವೆ. 23 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾತೃಭಾಷೆಯಲ್ಲೇ ಅಧ್ಯಯನ ಮಾಡುತ್ತಿದ್ದಾರೆ. ಆಂಧ್ರದಲ್ಲಿ ಕಳೆದ ಏಳೆಂಟು ವರ್ಷಗಳಿಂದ ಶಿಕ್ಷಕರ ನೇಮಕಾತಿ ನಡೆದಿಲ್ಲ. ಗಡಿಭಾಗದಲ್ಲಿರುವ ಕನ್ನಡಿಗರು ಶಿಕ್ಷಕ ವೃತ್ತಿಯ ವಿದ್ಯಾರ್ಹತೆ ಇದ್ದರೂ ಕೆಲಸವಿಲ್ಲದೆ, ಬೇರೆ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು. ಟಿಡಿಪಿ ಶಿಕ್ಷಕರ ನೇಮಕಾತಿ ಸೇರಿದಂತೆ ಶೈಕ್ಷಣಿಕ ವಲಯದಲ್ಲಿ ಅನೇಕ ಬದಲಾವಣೆ ತರಲು ನಿರ್ಧರಿಸಿದ್ದು ಈ ಪೈಕಿ ಶಿಕ್ಷಕರ ನೇಮಕಾತಿಯಲ್ಲಿ ಆಂಧ್ರ ಶಿಕ್ಷಣಮಂತ್ರಿ ಸಿಎಂ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್ ಹೆಚ್ಚಿನ ಕಾಳಜಿ ತೋರಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳು ಗಡಿಭಾಗದಲ್ಲಿರುವ ಕನ್ನಡಿಗರ ಉದ್ಯೋಗ ಸೃಷ್ಟಿಗೆ ಆಸ್ಪದ ಒದಗಿಸಿದೆ.

ಹಿಂದಿನ ರೆಡ್ಡಿ ಸರ್ಕಾರ ತೆಲುಗು ಮಾಧ್ಯಮ ರದ್ದುಗೊಳಿಸಿ ಇಂಗ್ಲೀಷ್ ಮಾಧ್ಯಮವನ್ನಾಗಿ ಬದಲಾಯಿಸಿದ್ದರು. ಆಂಧ್ರ ಸರ್ಕಾರದ ಈ ನಿಲುವು ಕನ್ನಡ ಶಾಲೆಗಳ ಮೇಲೂ ಪರಿಣಾಮ ಬೀರಿತ್ತು. ಆದರೆ, ಇದೀಗ ಅಧಿಕಾರಕ್ಕೆ ಬಂದಿರುವ ಚಂದ್ರಬಾಬು ನಾಯ್ಡು ಸರ್ಕಾರ ಈ ಹಿಂದಿನಂತೆಯೇ ತೆಲುಗು ಮಾಧ್ಯಮವನ್ನೇ ಮುಂದುವರಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ದೊರೆಯಬೇಕು ಎಂದು ಪ್ರತಿಪಾದಿಸುತ್ತಲೇ ಬಂದಿದ್ದ ನಾಯ್ಡು ತಮ್ಮದೇ ಸರ್ಕಾರದಲ್ಲಿ ತೆಲುಗು ಮಾಧ್ಯಮಕ್ಕೆ ಆದ್ಯತೆ ನೀಡುವ ಸಾಧ್ಯತೆಯಿದೆ.

ಈ ಹಿಂದೆ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಜಾರಿಗೊಳಿಸಿದ್ದ "ಜಗನನ್ನಾ ವಿದ್ಯಾ ಕಾನುಕ " (ಜಗನ್ ಅಣ್ಣಾ ವಿದ್ಯಾ ಕೊಡುಗೆ) ಯೋಜನೆಯನ್ನು ನಾಯ್ಡು ಸರ್ಕಾರ, "ವಿದ್ಯಾರ್ಥಿ ಕಿಟ್‌ " ಹೆಸರಿನಲ್ಲಿ ಮುಂದುವರಿಸಿದ್ದು, ಆಂಧ್ರ ಶೈಕ್ಷಣಿಕ ವಲಯದಲ್ಲಿ ಶ್ಲಾಘನೆ ವ್ಯಕ್ತವಾಗಿದೆ.

ಗಡಿಭಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದ ಉದ್ಯೋಗಾಕಾಂಕ್ಷಿಗಳಿದ್ದಾರೆ. ಆಂಧ್ರ ಸರ್ಕಾರದ ನಿರ್ಧಾರ ಗಡಿನಾಡ ಕನ್ನಡಿಗರಿಗೆ ಖಂಡಿತ ಒಳಿತಾಗಲಿದೆ. ಸರ್ಕಾರದ ಈ ನಿಲುವು ವೈಯುಕ್ತಿಕವಾಗಿ ನನಗೂ ಖುಷಿ ನೀಡಿದೆ ಎನ್ನುತ್ತಾರೆ ಗಡಿನಾಡ ನಿವೃತ್ತ ಶಿಕ್ಷಕ, ಖ್ಯಾತ ಲೇಖಕ ಕುಂ.ವೀರಭದ್ರಪ್ಪ.

ಆಂಧ್ರ ಸರ್ಕಾರ ಶಿಕ್ಷಕರ ನೇಮಕಾತಿಗೆ ಮುಂದಾಗಿರುವುದು ಗಡಿನಾಡು ಕನ್ನಡಿಗರಲ್ಲಿ ಸಂತಸ ತಂದಿದೆ. ಉದ್ಯೋಗಕ್ಕಾಗಿ ಕಾಯುತ್ತಿದ್ದವರಿಗೆ ಸರ್ಕಾರದ ನಿಲುವು ನೆಮ್ಮದಿ ಮೂಡಿಸಿದೆ. ಸ್ಥಳೀಯವಾಗಿ ಶೇ.80, ಸ್ಥಳೀಯೇತರ ಶೇ.20 ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎನ್ನುತ್ತಾರೆ ಕನ್ನಡ ಶಿಕ್ಷಕರು ಹಾಗೂ ಅನಂತಪುರ ಜಿಲ್ಲಾ ಕನ್ನಡ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷರು, ಹಿರೇಹಾಳು, ಆಂಧ್ರಪ್ರದೇಶ ಎಂ.ಗಿರಿಜಾಪತಿ.