ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹ 5 ಸಾವಿರ ಕೋಟಿ ಬಿಡುಗಡೆ: ಶಿವರಾಜ ತಂಗಡಗಿ

| Published : Jun 18 2024, 12:53 AM IST / Updated: Jun 18 2024, 01:04 PM IST

ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ₹ 5 ಸಾವಿರ ಕೋಟಿ ಬಿಡುಗಡೆ: ಶಿವರಾಜ ತಂಗಡಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹5 ಸಾವಿರ ಕೋಟಿ ಬಿಡುಗಡೆಗೊಳಿಸಿದ್ದಾರೆ.

  ಕನಕಗಿರಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ₹5 ಸಾವಿರ ಕೋಟಿ ಬಿಡುಗಡೆಗೊಳಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ಸೋಮವಾರ ತಮ್ಮ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈಗಾಗಲೇ ಎರಡು ಸಭೆಗಳು ನಡೆದಿದ್ದು, ಕಲ್ಯಾಣದ ಕರ್ನಾಟದ ಜಿಲ್ಲೆ ಹಾಗೂ ತಾಲೂಕುಗಳ ಅಭಿವೃದ್ಧಿ ಮತ್ತು ಮೂಲ ಸೌಕರ್ಯಕ್ಕೆ ₹5 ಸಾವಿರ ಕೋಟಿ ನೀಡಿದ್ದಾರೆ. ನನ್ನ ಕ್ಷೇತ್ರದಲ್ಲಿ ಕನಕಗಿರಿ-ಕಾರಟಗಿ ಎರಡು ಹೊಸ ತಾಲೂಕುಗಳಾಗಿದ್ದು, ವಿವಿಧ ಸರ್ಕಾರಿ ಕಚೇರಿಗಳ ನಿರ್ಮಾಣ, ಮೂಲ ಸೌಕರ್ಯ ಹಾಗೂ ಶಿಕ್ಷಣ, ಆರೋಗ್ಯ ಹೆಚ್ಚು ಒತ್ತು ನೀಡಲಾಗುವುದು ಎಂದರು.

ಇದಕ್ಕೂ ಮೊದಲು ತಹಶೀಲ್ ಕಚೇರಿ, ಬಸ್ ಡಿಪೋ, ಅಗ್ನಿ ಶಾಮಕ ಠಾಣೆ, ನ್ಯಾಯಾಲಯ, ಕ್ರೀಡಾಂಗಣ, ನೂರು ಬೆಡ್ ಆಸ್ಪತ್ರೆ, ಆಹಾರ ಸಂಸ್ಕಾರಣಾ ಘಟಕ, ಪಪಂ ಕಚೇರಿ ಸೇರಿ ವಿವಿಧ ಕಚೇರಿಗಳ ನಿರ್ಮಾಣಕ್ಕೆ ಸೂಳೆಕಲ್ ಬಳಿ ಸರ್ಕಾರಿ ಜಮೀನು, ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದ ಭೂಮಿ, ಸೆಮ್ಸ್ ತಬ್ರೇಜ್ ಅವರ ಭೂಮಿ, ಕಲ್ಮಠದ ಭೂಮಿ, 5ನೇ ವಾರ್ಡಿನ ಹೊಸ ಲೇಔಟ್, ನಿರ್ಲೂಟಿ ಗ್ರಾಮದ ಸರ್ಕಾರಿ ಭೂಮಿಯನ್ನು ನಾನಾ ಕಚೇರಿಗಳ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದಲ್ಲಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ₹2.50 ಕೋಟಿ ಹಾಗೂ ಸರ್ಕ್ಯೂಟ್ ಹೌಸ್ ನಿರ್ಮಾಣಕ್ಕೆ ₹4.25 ಕೋಟಿ ಬಿಡುಗಡೆಯಾಗಿದ್ದು, ಜೂ.30ರೊಳಗಾಗಿ ಇವೆರಡು ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸುವುದಾಗಿ ತಿಳಿಸಿದರು.

ಅಧಿಕಾರಿಯ ಮೇಲೆ ಗರಂ:

ಪಟ್ಟಣದ ಮೌಲಾನಾ ಆಜಾದ್ ಶಾಲೆ ಹಾಗೂ ಕನಕಾಚಲಪತಿ ದೇವಸ್ಥಾನ ದಾಸೋಹ ಭವನ ಕಾಮಗಾರಿಗಳು ವರ್ಷಗಳೇ ಕಳೆದರೂ ಅಪೂರ್ಣಗೊಂಡಿರುವ ಕುರಿತು ಸಚಿವ ತಂಗಡಗಿ ಭೂಸೇನಾ ನಿಗಮದ ಅಧಿಕಾರಿಗೆ ದೂರವಾಣಿಯಲ್ಲಿ ತೀವ್ರ ತರಾಟೆಗೆ ತೆಗದುಕೊಂಡರು. ಬುದ್ದಿಗೇಡಿ ಎಂದು ಗದರಿಸಿ, ದಪ್ಪ ಚರ್ಮದ ಅಧಿಕಾರಿ ಎಂದ ಸಚಿವರು, ನಿನ್ನನ್ನು ಕೆಡಿಪಿ ಸಭೆಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ. ಕಡಿ, ಉಪವಿಭಾಗಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ತಹಶೀಲ್ದಾರ ವಿಶ್ವನಾಥ ಮುರುಡಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹಗಡೆ, ಪ್ರಮುಖರಾದ ಗಂಗಾಧರಸ್ವಾಮಿ, ವೀರೇಶ ಸಮಗಂಡಿ, ರಮೇಶ ನಾಯಕ, ರವಿ ಪಾಟೀಲ್, ಅನಿಲ ಬಿಜ್ಜಳ, ಶರಣೇಗೌಡ, ನಾಗೇಶ ಬಡಿಗೇರ, ಶರಣಪ್ಪ ಭತ್ತದ, ಹೊನ್ನೂರುಸಾಬ ಉಪ್ಪು, ಸಂಗಪ್ಪ ಸಜ್ಜನ, ಟಿಜೆ ರಾಜಶೇಖರ, ನೀಲಕಂಠ ಬಡಿಗೇರ ಇತರರು ಇದ್ದರು.

 ಪ್ರೌಢಶಾಲೆಗಳಿಗೆ ಸ್ಮಾರ್ಟ್ ಕ್ಲಾಸ್ ಭಾಗ್ಯ!:

ಕ್ಷೇತ್ರದಲ್ಲಿ ಬಡ ಹಾಗೂ ಗ್ರಾಮೀಣ ಪ್ರದೇಶದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ಮತ್ತು ಜನರ ಆರೋಗ್ಯಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು. ಕನಕಗಿರಿ-ಕಾರಟಗಿ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ನಿರ್ಮಾಣಕ್ಕೆ ಒತ್ತು ನೀಡುತ್ತೇನೆ. ಕಳೆದ ಸಾಲಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ₹25 ಕೋಟಿ ನೀಡಿದ್ದೆ. ಈ ಭಾರಿಯೂ ಶಾಲೆಗಳ ದುರಸ್ತಿ, ಶುದ್ಧ ನೀರಿನ ಘಟಕ, ಕೊಠಡಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಹೆಚ್ಚು ಕೆಲಸ ಮಾಡುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.