ಸಾರಾಂಶ
ಕನ್ನಡಪ್ರಭ ವಾರ್ತೆ ಕುಷ್ಟಗಿ
ಮಕ್ಕಳ ದೈಹಿಕ ಹಾಗೂ ಮಾನಸಿಕ ಸರ್ವತೋಮುಖ ಬೆಳವಣಿಗೆಗೆ ಅಂಗನವಾಡಿಗಳು ಶ್ರಮಿಸುತ್ತಿದ್ದು, ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯ ಬದಲಿಗೆ ಸರಕಾರಿ ಅಂಗನವಾಡಿ ಶಾಲೆಗೆ ದಾಖಲಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಪರಶುರಾಮ ಶೆಟ್ಟಪ್ಪನವರು ಹೇಳಿದರು.ತಾಲೂಕಿನ ನಿಡಶೇಸಿ ಗ್ರಾಮದ ಅಂಗನವಾಡಿ ಕೇಂದ್ರದ ಆವರಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಅಜೀಂ ಪ್ರೇಮ್ ಜಿ ಫೌಂಡೇಶನ್ ಸಹಯೋಗದಲ್ಲಿ ನಡೆದ ಮಕ್ಕಳ ಬಾಲಮೇಳ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ದೈಹಿಕ, ಮಾನಸಿಕ ಅಭಿವೃದ್ಧಿಗಾಗಿ ಅಂಗನವಾಡಿಗಳು ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿವೆ ಎಂದರು.ಸಿಡಿಪಿಒ ಯಲ್ಲಮ್ಮ ಹಂಡಿ ಮಾತನಾಡಿ, ಇಂದು ನಡೆಯುತ್ತಿರುವ ಬಾಲಮೇಳ ಕಾರ್ಯಕ್ರಮ ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ ಬೌದ್ಧಿಕವಾದ ಭಾಷಾ ಬೆಳವಣಿಗೆ ತುಂಬಾ ಅನುಕೂಲಕರವಾಗಿದೆ ಪ್ರತಿಯೊಂದು ಮಗುವಿಗೂ ತನ್ನದೇ ಆದ ಸಾಮರ್ಥ್ಯ, ಸೃಜನಶೀಲತೆ ಇರುತ್ತದೆ. ಇಂದಿನ ಕಾಲದಲ್ಲಿ ಪ್ರತಿಯೊಂದು ಮನೆಯಲ್ಲಿ ತಂದೆ-ತಾಯಿ ಕೆಲಸಕ್ಕೆ ಹೋಗುವುದು ಅನಿವಾರ್ಯ. ಈ ಸಂದರ್ಭದಲ್ಲಿ ತಮ್ಮ ಮಕ್ಕಳನ್ನು ಅಂಗನವಾಡಿಗಳಲ್ಲಿ ಬಿಟ್ಟು ಹೋಗಬೇಕು. ಇಲ್ಲಿ ಎಲ್ಲ ತರಹದ ವ್ಯವಸ್ಥೆ ಇದ್ದು, ಮಕ್ಕಳ ಬೆಳವಣಿಗೆಗೆ ತುಂಬಾ ಸಹಕಾರಿಯಾಗಿದೆ ಎಂದರು.
ಶಾಲಾ ಪೂರ್ವ ಶಿಕ್ಷಣದ ಅಭಿವೃದ್ಧಿ ಕ್ಷೇತ್ರಗಳಾದ ಭಾಷಾ ಬೆಳವಣಿಗೆ, ಸಾಮಾಜಿಕ ಮತ್ತು ಭಾವನಾತ್ಮಕ, ದೈಹಿಕ, ಬೌದ್ಧಿಕ ಹಾಗೂ ಕ್ರಿಯಾತ್ಮಕ ಬೆಳವಣಿಗೆಗೆ ಸಂಬಂಧಿಸಿದ ಪರಿಕರಗಳು ಹಾಗೂ ಅವುಗಳ ಬಳಕೆಯ ಕುರಿತು 5 ಸ್ಟಾಲ್‌ಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರಾತ್ಯಕ್ಷಿಕೆ ನೀಡಿದರು.ಕಾರ್ಯಕರ್ತೆಯರು ಮಕ್ಕಳೊಂದಿಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಚಟುವಟಿಕೆ ನಡೆಸಿಕೊಟ್ಟರು. ಪೋಷಕರಿಗೆ, ಮಕ್ಕಳು ಹಾಗೂ ಶಿಕ್ಷಕಿಯರಿಗೆ ನೃತ್ಯ, ಆಟ ಹಾಗೂ ಸಂವಾದ ಕಾರ್ಯಕ್ರಮ ನಡೆಸಲಾಯಿತು. ತಳುವಗೇರಾ ಪಿಡಿಒ, ಸದಸ್ಯರು, ಮೇಲ್ವಿಚಾರಕಿ ಅನ್ನಪೂರ್ಣಾ ಪಾಟೀಲ, ಮುಖ್ಯಶಿಕ್ಷಕಿ ವಾಣಿಶ್ರೀ ಸೇರಿದಂತೆ ಅನೇಕರು ಇದ್ದರು.