ನೀರಾವರಿ ವಿಚಾರದಲ್ಲಿ ನಾನೆಂದಿಗೂ ರಾಜಕಾರಣ ಮಾಡಲ್ಲ

| Published : Nov 17 2024, 01:23 AM IST

ಸಾರಾಂಶ

I will never do politics on the issue of irrigation.

-ಸಂಸದ ಗೋವಿಂದ ಕಾರಜೋಳ ಹೇಳಿಕೆ । ವಿವಿಧ ಇಲಾಖೆಗಳ ನೇತೃತ್ವ ಕೃಷಿ ಮೇಳ ಮತ್ತು ನೂತನ ಕೃಷಿ ಪದವಿ ಕಾರ್ಯಕ್ರಮ ಉದ್ಘಾಟನೆ

----

ಕನ್ನಡಪ್ರಭ ವಾರ್ತೆ ಹಿರಿಯೂರು

140 ಕೋಟಿ ಜನಸಂಖ್ಯೆಗೆ ಆಹಾರವನ್ನು ಪೂರೈಸುತ್ತಿರುವ ಏಕೈಕ ರೈತಾಪಿ ವರ್ಗಕ್ಕೆ ನೀರಾವರಿ ಸೌಲಭ್ಯ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ತೋಟಗಾರಿಕೆ ಮಹಾವಿದ್ಯಾಲಯ ಕೃಷಿ ವಿಜ್ಞಾನ ಕೇಂದ್ರ ಮತ್ತು ವಿವಿಧ ಇಲಾಖೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಮತ್ತು ನೂತನ ಕೃಷಿ ಪದವಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೈಸೂರಿನ ಅರಸ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿ ಹಿನ್ನೆಲೆಯಲ್ಲಿ ಆರಂಭಗೊoಡ ಈ ಕೃಷಿ ವಿಜ್ಞಾನ ಕೇಂದ್ರ ನೂರು ವರ್ಷ ಪೂರ್ಣಗೊಳಿಸಿ ರುವುದು ಹೆಮ್ಮೆಯ ವಿಷಯ.

ರಾಜ್ಯದಲ್ಲಿ 66 ಲಕ್ಷ ಹೆಕ್ಟೇರ್ ನೀರಾವರಿ ಮಾಡಲು ಅವಕಾಶವಿದ್ದು 40 ಲಕ್ಷ ಹೆಕ್ಟೇರ್ ಬೃಹತ್ ನೀರಾವರಿ ಹಾಗೂ 10 ಲಕ್ಷ ಹೆಕ್ಟೇರ್ ಸಣ್ಣ ನೀರಾವರಿ ಹಾಗೂ 16 ಲಕ್ಷ ಹೆಕ್ಟೇರ್ ರೈತರು ಸ್ವಯಂ ಖರ್ಚಿನಲ್ಲಿ ನೀರಾವರಿ ಅಳವಡಿಸಿಕೊಂಡಿದ್ದಾರೆ. ಸ್ವಾತಂತ್ರ‍್ಯ ಬಂದ ನಂತರ ಹಿಂದೆ ಬಿದ್ದಿರುವುದು ಸರ್ಕಾರಗಳು ಮಾತ್ರ. ಎಲ್ಲಿಯವರೆಗೂ ನೀರಾವರಿಗೆ ಆದ್ಯತೆ ನೀಡುವುದಿಲ್ಲವೋ ಅಲ್ಲಿಯವರೆಗೂ ರೈತರ ಬದುಕು ಹಸನಾಗುವುದಿಲ್ಲ.

ರೈತರಿಗೆ ಸ್ವಯಂ ಉದ್ಯೋಗ, ನೀರಾವರಿ, ವಿದ್ಯುತ್, ರಸ್ತೆ ಸಂಪರ್ಕ, ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಇದರಲ್ಲಿ ಸರ್ಕಾರಗಳು ಹಿಂದೆ ಬಿದ್ದಿವೆ. ಚಿತ್ರದುರ್ಗ ಕೃಷ್ಣ ಕೊಳ್ಳದಿಂದ ಬರುವ ಪ್ರದೇಶ. ಕಾವೇರಿಯಲ್ಲಿ ನೀರಿಲ್ಲ ಆದರೂ ಸಮರ್ಪಕ ಬಳಕೆ ಆಗುತ್ತಿದೆ. ಕೃಷ್ಣ ಕೊಳ್ಳದ ನೀರು ಸದುಪಯೋಗ ಮಾಡಿಕೊಳ್ಳಲು ವಿಫಲರಾಗಿದ್ದೇವೆ. ಇದರಲ್ಲಿ ಸರ್ಕಾರಗಳ ಇಚ್ಛಾ ಶಕ್ತಿ ಕೊರತೆ ಇದೆ ಎಂದರು.

ಕೃಷಿ ಇಲಾಖೆ ಇಂದು ಅಧಿಕಾರಿಗಳ ಇಲಾಖೆಯಾಗಿದೆ. ಹೊಲಗಳಿಗೆ ಹೋಗಿ ಮಾರ್ಗದರ್ಶನ ಮಾಡುವ ಅಧಿಕಾರಿಗಳೇ ಇಲ್ಲ. ಕೂತಲ್ಲೇ ಮೊಬೈಲ್ ನೋಡಿ ಕೆಲಸ ಮಾಡುವರ ಸಂಖ್ಯೆ ಹೆಚ್ಚಾಗಿದೆ. ಇದಕ್ಕೆ ಆಡಳಿತದ ಅನುಭವದ ಕೊರತೆ ಇದೆ.

ನನ್ನ ಅಧಿಕಾರ ಅವಧಿಯಲ್ಲಿ ಮೂರು ಯೋಜನೆಗಳಿಗೆ ಆದ್ಯತೆ ನೀಡಿದ್ದು ಎತ್ತಿನಹೊಳೆ, ಕೃಷ್ಣ ಮೇಲ್ದಂಡೆ ಹಾಗೂ ಅಪ್ಪರ್ ಭದ್ರ ಯೋಜನೆಗೆ ಆದ್ಯತೆ ನೀಡಿದ್ದೇನೆ. ಅಪ್ಪರ್ ಭದ್ರಾ ಅಭಿವೃದ್ಧಿಗೆ 5700 ಕೋಟಿ ಅನುದಾನ ಕೊಟ್ಟಿದ್ದೇನೆ. ರಾಜ್ಯ ಸರ್ಕಾರ ಭಾರತ ಸರ್ಕಾರದತ್ತ ಕೈ ತೋರದೆ ಭದ್ರಾ ಯೋಜನೆಗೆ ಅನುದಾನ ನೀಡಿ ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಘೋಷಿಸಿರುವ ಭದ್ರಾ ಯೋಜನೆ ಅನುದಾನ ಬಿಡುಗಡೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಜನರ ಋಣ ತೀರಿಸುವ ಪ್ರಯತ್ನದಲ್ಲಿದ್ದೇನೆ. ನೀರಾವರಿ ವಿಚಾರದಲ್ಲಿ ನಾನು ಎಲ್ಲಿಗೆ ಕರೆದರೂ ಬರುತ್ತೇನೆ . ರಾಜಕಾರಣ ಮಾಡುವುದಿಲ್ಲ. ಸಚಿವರು ಈ ಹಿನ್ನೆಲೆಯಲ್ಲಿ ಭದ್ರಾ ಕಾಮಗಾರಿ ಪೂರ್ಣಗೊಳ್ಳಲು ಶ್ರಮಿಸಬೇಕು ಎಂದರು.

ಇತ್ತೀಚೆಗೆ ಉತ್ತಮ ಮಳೆಯಾಗಿದ್ದು ಅಂತರ್ಜಲ ವೃದ್ಧಿಯಾಗಿದೆ. ಆದರೆ, ಸರ್ಕಾರ ರೈತರಿಗೆ ವಿದ್ಯುತ್ ಕೊಡಬೇಕು. ಕಳೆದ ಬಾರಿ 17500 ಮೆಗಾ ವ್ಯಾಟ್ ವಿದ್ಯುತ್ ಖರ್ಚಾಗಿದ್ದು, ಈ ಬಾರಿ 20 ಸಾವಿರಕ್ಕೂ ಅಧಿಕ ಮೆಗಾವ್ಯಾಟ್ ವಿದ್ಯುತ್ ಬೇಕಿದೆ. ರಾಜ್ಯ ಸರ್ಕಾರ ರೈತರಿಗೆ ವಿದ್ಯುತ್ ವ್ಯವಸ್ಥೆ ಮಾಡಿಕೊಡಲು ಮುಂದಾಗಬೇಕು ಎಂದರು.

ಸಚಿವ ಡಿ.ಸುಧಾಕರ್, ರಾಸಾಯನಿಕ ಗೊಬ್ಬರ ಬಳಕೆ ಕಡಿಮೆಯಾಗಬೇಕು. ಈಗ ಭದ್ರಾ ನೀರು ಬರದಿದ್ದರೆ ವಿವಿ ಸಾಗರದಲ್ಲಿ ನೀರೇ ಕಾಣುತ್ತಿರಲಿಲ್ಲ. ಈ ಬಾರಿ ನೀರು ಹರಿಸಿ ಡ್ಯಾಂ ತುಂಬಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ.ಭದ್ರಾ ಕಾಮಗಾರಿ ಪೂರ್ಣಗೊಳಿಸುವುದು ನೂರಕ್ಕೆ ನೂರರಷ್ಟು ಸತ್ಯ. ಕೇಂದ್ರ ಸರ್ಕಾರ ಬಜೆಟ್ ಘೋಷಣೆಯಲ್ಲಿನ ಅನುದಾನ ಬಿಡುಗಡೆ ಮಾಡದಿದ್ದರೂ ಯಾವುದಾದರೂ ಮೂಲದಿಂದ ಅನುದಾನ ಮೀಸಲಿಡಿಸಿ ಕಾಮಗಾರಿ ಪೂರ್ಣಗೊಳಿಸುತ್ತೇವೆ. ಈಗಾಗಲೇ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ನೀರು ಒದಗಿಸಲು ಕಾಮಗಾರಿ ನಡೆಸುತ್ತಿದ್ದು ಎಲ್ಲರಿಗೂ ನೀರು ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.

ಬಬ್ಬೂರು ಗ್ರಾಪಂ ಅಧ್ಯಕ್ಷ ಎಂ ಚಿತ್ತಯ್ಯ, ಸಹ ಸಂಶೋಧನಾ ನಿರ್ದೇಶಕ ಡಾ. ಶರಣಪ್ಪ ಜಂಗoಡಿ, ಕುಲಪತಿ ಡಾ.ಆರ್.ಸಿ.ಜಗದೀಶ್, ಆಡಳಿತ ಮಂಡಳಿ ಸದಸ್ಯರಾದ ಡಾ.ಬಿ.ಕೆ.ಕುಮಾರಸ್ವಾಮಿ, ಡಾ.ಪಿ.ಕೆ.ಬಸವರಾಜ್, ಡಾ.ಬಿ. ಹೇಮ್ಲಾ ನಾಯ್ಕ್, ಡಾ.ದುಷ್ಯಂತ್ ಕುಮಾರ್, ಡಾ.ಕೆ.ಟಿ.ಗುರುಮೂರ್ತಿ, ಕುಲಸಚಿವ ಡಾ.ಎಸ್.ಯು ಪಾಟೀಲ್, ತೋಟಗಾರಿಕೆ ಉಪ ನಿರ್ದೇಶಕಿ ಸವಿತಾ, ಜಂಟಿ ಕೃಷಿ ನಿರ್ದೇಶಕ ಡಾ.ಮಂಜುನಾಥ್, ನಬಾರ್ಡ್ ಎಜಿಎಂ ಕವಿತಾ ಶಶಿಧರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಚ್.ಆರ್.ತಿಮ್ಮಯ್ಯ, ರೈತ ಸಂಘದ ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ, ಕೆಸಿ.ಹೊರಕೇರಪ್ಪ, ಕೃಷಿ ವಿಜ್ಞಾನ ಕೇಂದ್ರ ಹಿರಿಯ ವಿಜ್ಞಾನಿ ಕುಮಾರ್ ಇದ್ದರು.

----

ಫೋಟೋ: ಬಬ್ಬೂರು ಫಾರಂ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಆವರಣದಲ್ಲಿ ಆಯೋಜಿಸಿದ್ದ ಕೃಷಿ ಮೇಳ ಮತ್ತು ನೂತನ ಕೃಷಿ ಪದವಿ ಕಾರ್ಯಕ್ರಮವನ್ನು ಸಂಸದ ಗೋವಿಂದ ಕಾರಜೋಳ ಉದ್ಘಾಟನೆ ಮಾಡಿ ಮಾತನಾಡಿದರು.

ಚಿತ್ರ 1,2