ಹನೂರಿನ ಬಿಆರ್‌ಟಿಯಲ್ಲಿ ಮತ್ತೊಂದು ಆನೆ ಮೃತದೇಹ ಪತ್ತೆ: ಅನುಮಾನಗಳಿಗೆ ಎಡೆ

| Published : Sep 01 2024, 01:56 AM IST

ಹನೂರಿನ ಬಿಆರ್‌ಟಿಯಲ್ಲಿ ಮತ್ತೊಂದು ಆನೆ ಮೃತದೇಹ ಪತ್ತೆ: ಅನುಮಾನಗಳಿಗೆ ಎಡೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರಿನ ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಬೈಲೂರು ಮತ್ತು ಯಳಂದೂರು ವ್ಯಾಪ್ತಿಯಲ್ಲಿ ಎರಡು ಆನೆಗಳ ಶವ ಪತ್ತೆಯಾದ ಬೆನ್ನಲ್ಲೇ ಶನಿವಾರವೂ ಒಂದು ಆನೆಯ ಮೃತದೇಹ ಪತ್ತೆಯಾಗಿದೆ.

ಹನೂರು: ಬಿಳಿಗಿರಿರಂಗನಾಥ ಸ್ವಾಮಿ ಹುಲಿ ರಕ್ಷಿತಾರಣ್ಯದ ಬೈಲೂರು ಮತ್ತು ಯಳಂದೂರು ವ್ಯಾಪ್ತಿಯಲ್ಲಿ ಎರಡು ಆನೆಗಳ ಶವ ಪತ್ತೆಯಾದ ಬೆನ್ನಲ್ಲೇ ಶನಿವಾರವೂ ಒಂದು ಆನೆಯ ಮೃತದೇಹ ಪತ್ತೆಯಾಗಿದೆ.

ಬೈಲೂರು ವನ್ಯಜೀವಿ ವಲಯದಲ್ಲಿ ಆನೆ ಮೃತದೇಹ ಪತ್ತೆಯಾಗಿದೆ. ನಾಲ್ಕು ದಿನಗಳ ಹಿಂದೆ ಬೈಲೂರು ವನ್ಯಜೀವಿ ವಲಯದಲ್ಲಿ ಆನೆದಂತ ಹಾಗೂ ಕಳೇಬರ ಪತ್ತೆಯಾದ ಹಿನ್ನಲೆಯಲ್ಲಿ ಸಿಬ್ಬಂದಿ ಗಸ್ತು ತಿರುಗುವ ಕಾರ್ಯಚರಣೆಯನ್ನು ಚುರುಕುಗೊಳಿಸಿದ್ದರು. ಸಿಬ್ಬಂದಿ ಗಸ್ತು ತಿರುಗುವ ವೇಳೆ ಮುಳ್ಳಿನ ಪೊದೆಯೊಳಗೆ ಕೊಳೆತ ಸ್ಥಿತಿಯಲ್ಲಿ‌ ಆನೆ ಮೃತದೇಹ ಕಂಡು ಬಂದಿದೆ. ಸಿಬ್ಬಂದಿ ಕೂಡಲೇ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.ಕೊಳತ ಸ್ಥಿತಿಯಲ್ಲಿ ಮತ್ತೊಂದು ಆನೆ: ವಾರದ ಅವಧಿಯಲ್ಲಿ ಬಿಳಿಗಿರಿ ರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದಲ್ಲಿ ಮೂರು ಆನೆಗಳ ಮೃತದೇಹ ಪತ್ತೆಯಾಗಿದೆ. ಈಗಾಗಲೇ ಅರಣ್ಯ ಇಲಾಖೆ ಎರಡು ಆನೆಗಳ ಸಾವು ಸ್ವಾಭಾವಿಕ ಎಂದು ಮಾಹಿತಿ ನೀಡಿದೆ. ಇದರ ಬೆನ್ನಲ್ಲೇ ಮತ್ತೊಂದು ಆನೆ ಮೃತದೇಹ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಹುಲಿ ಸಂರಕ್ಷಿತಾರಣ್ಯದಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿದೆಯೇ ಅಥವಾ ಆನೆಗಳಿಗೆ ವಿಷ ಹಾಕಲಾಗುತ್ತಿದೆಯೆ ಎಂಬ ಅನುಮಾನದ ಮಾತುಗಳು ಕೇಳಿ ಬರುತ್ತಿವೆ. ನಿರಂತರವಾಗಿ ಕಾಡಾನೆಗಳು ಅರಣ್ಯ ಪ್ರದೇಶದಲ್ಲಿಯೇ ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸಿ ಆನೆಗಳ ಸರಣಿ ಸಾವನ್ನಪ್ಪಿರುವ ಬಗ್ಗೆ ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರಾಣಿ ಪ್ರಿಯರು ಒತ್ತಾಯಿಸಿದ್ದಾರೆ.