ಕಾಂಗ್ರೆಸ್‌ನಿಂದ ರೈತ, ದಲಿತ ವಿರೋಧಿ ನೀತಿ

| Published : Feb 06 2024, 01:39 AM IST / Updated: Feb 06 2024, 03:47 PM IST

ಸಾರಾಂಶ

ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಖಂಡನಾ ನಿರ್ಣಯ. ರೈತ ಮತ್ತು ದಲಿತ ವಿರೋಧಿ ನೀತಿಯ ಖಂಡನೀಯ ಪ್ರಸ್ತಾವನೆಯನ್ನು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಹುಮನಾಬಾದ್‌ ಶಾಸಕ ಡಾ. ಸಿದ್ದು ಪಾಟೀಲ್‌ ಮಂಡಿಸಿದರು. ರಾಮಮಂದಿರ ಉದ್ಘಾಟನೆ, ಪ್ರಧಾನ ನರೇಂದ್ರ ಮೋದಿಗೆ ಅಭಿನಂದನೆ.

ಕನ್ನಡಪ್ರಭ ವಾರ್ತೆ ಬೀದರ್‌

ಬಿಜೆಪಿ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಹುಡಗಿಯವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ರೈತ ಮತ್ತು ದಲಿತ ವಿರೋಧಿ ನೀತಿಯನ್ನು ಖಂಡಿಸಲಾಯಿತು.

ರೈತ ಮತ್ತು ದಲಿತ ವಿರೋಧಿ ನೀತಿಯ ಖಂಡನೀಯ ಪ್ರಸ್ತಾವನೆಯನ್ನು ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಹುಮನಾಬಾದ್‌ ಶಾಸಕ ಡಾ. ಸಿದ್ದು ಪಾಟೀಲ್‌ ಮಂಡಿಸಿ, ರಾಜ್ಯ ಸರ್ಕಾರದಿಂದ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರದಿಂದ ಚುನಾವಣೆ ಪೂರ್ವದಲ್ಲಿ ಘೋಷಿಸಿದ ಗ್ಯಾರಂಟಿಗಳಿಗೆ ವರ್ಗಾಯಿಸಿ ಈ ಸಮುದಾಯದ ಅಭಿವೃದ್ಧಿಗೆ ಕಡಿವಾಣ ಹಾಕಲಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿದರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರಹಂತ ಸಾವಳೆ ಶಾಸಕ ಪಾಟೀಲ್‌ ಮಾತುಗಳನ್ನು ಅನುಮೋದಿಸಿದರು. 

ಇದೇ ತರಹ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಹಾಗೂ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಕಾರಣೀಭೂತರಾದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರದ ಮುಖಾಂತರ ಅಭಿನಂದನೆ ಸಲ್ಲಿಸುವ ನಿರ್ಣಯವನ್ನು ಸರ್ವಾನುಮತದಿಂದ ಕೈಗೊಳ್ಳಲಾಯಿತು.

ಸದರಿ ಪ್ರಸ್ತಾವನೆಯನ್ನು ಸಭೆಯಲ್ಲಿ ಬಸವಕಲ್ಯಾಣದ ಶಾಸಕ ಶರಣು ಸಲಗರ ಮಂಡಿಸಿದರೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಹೊಕ್ರಾಣೆ ಅನುಮೋದಿಸಿದರು.

ಜಿಲ್ಲಾ ಕಾರ್ಯಕಾರಿಣಿಯ ಉದ್ಘಾಟನೆಯನ್ನು ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ನೆರವೇರಿಸಿ ಮಾತನಾಡಿ, ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಬಹಳ ಬಲಿಷ್ಠವಾಗಿದೆ. ನಮ್ಮ ಕಾರ್ಯಕರ್ತರ ಪರಿಶ್ರಮದಿಂದ ಜಿಲ್ಲೆಯ 4 ಕ್ಷೇತ್ರಗಳಲ್ಲಿ ನಮ್ಮ ಕಾರ್ಯಕರ್ತರು ಗೆಲವು ಸಾಧಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯಲ್ಲಿಯೂ ಕಾರ್ಯಕರ್ತರ ಪರಿಶ್ರಮದಿಂದ ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್‌ ಗೆಲುವು ಸಾಧಿಸಲಿದೆ ಎಂದು ಹೇಳಿದರು.

ಶಾಸಕ ಪ್ರಭು ಚವ್ಹಾಣ್‌ ಸಭೆಯನ್ನುದ್ದೇಶಿಸಿ ಮಾತನಾಡಿ, ನಾನು ಕಾರ್ಯಕರ್ತರ ಪರಿಶ್ರಮದಿಂದ ನಾಲ್ಕು ಸಲ ಶಾಸಕನಾಗಿದ್ದೇನೆ. ಎರಡು ವರ್ಷ ಕಾಲ ಮಂತ್ರಿಯಾಗಿದ್ದು, ಇದಕ್ಕೆ ಕಾರ್ಯಕರ್ತರ ಪರಿಶ್ರಮವೇ ಕಾರಣ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವಿಗೆ ನಮ್ಮ ಕಾರ್ಯಕರ್ತರು ದುಡಿದು ಮೋದಿಯವರ ಕೈಯನ್ನು ಬಲಪಡಿಸುವಂತೆ ಕರೆ ನೀಡಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌ ಹುಡಗಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರ್ಯಕರ್ತರ ಪರಿಶ್ರಮದಿಂದ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌ ಕರೆಯನ್ನು ನೀಡಿ ಪಕ್ಷದ ಅಭ್ಯರ್ಥಿಗೆ ಗೆಲ್ಲಿಸಲು ಶ್ರಮಿಸಬೇಕೆಂದು ಕಾರ್ಯಕರ್ತರಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಕಲಬುರಗಿ ವಿಭಾಗೀಯ ಕ್ಲಸ್ಟರ್‌ ಪ್ರಮುಖರಾದ ರಾಜಕುಮಾರ ಪಾಟೀಲ್‌ ತೆಗಲೂರ, ಕಲಬುರಗಿಯ ವಿಭಾಗೀಯ ಪ್ರಭಾರಿ ಅರುಣ ಬಿನ್ನಾಡಿ, ಸಹ ಪ್ರಭಾರಿ ಸೂರ್ಯಕಾಂತ ಧೋಣ, ರಾಷ್ಟ್ರೀಯ ಹಿಂದುಳಿದ ಘಟಕದ ಕಾರ್ಯದರ್ಶಿ ಜೈಕುಮಾರ ಕಾಂಗೆ, ರಾಜ್ಯ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ರೌಫೋದ್ದೀನ್‌ ಕಚೇರಿವಾಲೆ, ಮಾಜಿ ಶಾಸಕರಾದ ಪ್ರಕಾಶ ಖಂಡ್ರೆ, ಬೀದರ್‌ ಲೋಕಸಭಾ ಕ್ಷೇತ್ರದ ಪ್ರಭಾರಿ ಅಮರನಾಥ ಪಾಟೀಲ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪಾಟೀಲ್‌ ಗಾದಗಿ ಹಾಗೂ ಇನ್ನಿತರ ಮುಖಂಡರು ಮತ್ತು ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.