ಚುನಾವಣೆ ಹೊಸ್ತಿಲಲ್ಲಿ ಬೀದಿಗೆ ಬಿದ್ದ ಕಾಂಗ್ರೆಸ್ ಬೇಗುದಿ

| Published : Feb 06 2024, 01:38 AM IST / Updated: Feb 06 2024, 05:01 PM IST

ayanur manjunath
ಚುನಾವಣೆ ಹೊಸ್ತಿಲಲ್ಲಿ ಬೀದಿಗೆ ಬಿದ್ದ ಕಾಂಗ್ರೆಸ್ ಬೇಗುದಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮರ್ಥ ನಾಯಕತ್ವವಿಲ್ಲದ ಜಿಲ್ಲಾ ಕಾಂಗ್ರೆಸ್‌ನಲ್ಲಿ ಚುನಾವಣೆ ವೇಳೆಯಲ್ಲಿಯೇ ಒಳಜಗಳದ ಬೇಗುದಿ ಜೋರಾಗುತ್ತಿದೆ. ಆರೋಪ- ಪ್ರತ್ಯಾರೋಪಗಳು, ವ್ಯಂಗ್ಯದ ನುಡಿಮುತ್ತುಗಳು ಢಾಳಾಗಿ ಹೊರಬರಲಾರಂಭಿಸಿದೆ. ಮನೆಯೊಳಗಿನ ಜಗಳವೀಗ ಬೀದಿಗೆ ಬರಲಾರಂಭಿಸಿದೆ.

ಗೋಪಾಲ್ ಯಡಗೆರೆ ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಮರ್ಥ ನಾಯಕತ್ವವಿಲ್ಲದ ಜಿಲ್ಲಾ ಕಾಂಗ್ರೆಸ್‌ನಲ್ಲಿ ಚುನಾವಣೆ ವೇಳೆಯಲ್ಲಿಯೇ ಒಳಜಗಳದ ಬೇಗುದಿ ಜೋರಾಗುತ್ತಿದೆ. ಆರೋಪ- ಪ್ರತ್ಯಾರೋಪಗಳು, ವ್ಯಂಗ್ಯದ ನುಡಿಮುತ್ತುಗಳು ಢಾಳಾಗಿ ಹೊರಬರಲಾರಂಭಿಸಿದೆ. ಮನೆಯೊಳಗಿನ ಜಗಳವೀಗ ಬೀದಿಗೆ ಬರಲಾರಂಭಿಸಿದೆ.

ವಿಧಾನಸಭಾ ಚುನಾವಣೆಗೆ ಮುನ್ನ ಜಿಲ್ಲಾ ಕಾಂಗ್ರೆಸ್ ಆಗೀಗ ಹೋರಾಟ, ಪ್ರತಿಭಟನೆ ಮಾಡಿಕೊಳ್ಳುತ್ತ ತನ್ನ ಅಸ್ತಿತ್ವಕ್ಕಾಗಿ ನಿರಂತರವಾಗಿ ಪ್ರಯತ್ನ ನಡೆಸುತ್ತಿತ್ತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಒಂದರ್ಥದಲ್ಲಿ ಏಕಾಂಗಿಯಾಗಿ ಸಂಘಟನೆಯನ್ನು ತಮ್ಮ ಮಿತಿಯಲ್ಲಿ ಮಾಡಿಕೊಂಡು ಹೋಗುತ್ತಿದ್ದರು. ಯಾವಾಗ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಯಿತೋ ಆಗ ಶುರುವಾಯಿತು.

ಆರಂಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಆಯನೂರು ಮಂಜುನಾಥ್ ಸೇರ್ಪಡೆ ಆಗುವುದು ಬಹುತೇಕ ಖಚಿತವಾಯಿತೋ ಆಗ ಅಸಮಾಧಾನದ ಕಿಡಿಹೊರಟಿತು. ಮೊದಲಿಗೆ ನಗರ ಪಾಲಿಕೆ ಸದಸ್ಯ ಹಾಗೂ ವಿಧಾನಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಚ್.ಸಿ. ಯೋಗೀಶ್ ಅವರು ಆಯನೂರು ಸೇರ್ಪಡೆಗೆ ಅಪಸ್ವರ ಎತ್ತಿದರು. ಆಯನೂರು ಕಾಂಗ್ರೆಸ್ ಸೇರಿ ವಿಧಾನಸಭಾ ಟಿಕೆಟ್ ಪಡೆಯಬಹುದೆಂಬ ಆತಂಕ ಆ ಅಸಮಾಧಾನಕ್ಕೆ ಆಗ ಕಾರಣವಾಗಿತ್ತು. ಆ ಕಿಡಿ ಇನ್ನೂ ಹಲವು ರೀತಿಯಲ್ಲಿ ಸಿಡಿಯುತ್ತಲೇ ಇದೆ.

ವಿಧಾನ ಪರಿಷತ್ತು ಚುನಾವಣೆ ಎದುರಾಗಿರುವ ಹೊತ್ತಿನಲ್ಲಿ ಪರಿಷತ್ತು ಟಿಕೆಟ್‌ಗೆ ಆಯನೂರು ಮಂಜುನಾಥ್ ಪ್ರಯತ್ನ ಮುಂದುವರಿಸಿರುವುದು ಮತ್ತು ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಕಚೇರಿ ಆರಂಭಿಸಿರುವುದು ಪಕ್ಷದೊಳಗೆ ದೊಡ್ಡ ವಿರೋಧಕ್ಕೆ ಕಾರಣವಾಗಿದೆ. ಪರಿಷತ್ತು ಟಿಕೆಟ್‌ಗೆ ತೀವ್ರ ಆಕಾಂಕ್ಷಿ ಆಗಿರುವ ಎಸ್.ಪಿ. ದಿನೇಶ್ ಮುಂಚೂಣಿಯಲ್ಲಿ ನಿಂತು ಆಯನೂರು ಮಂಜುನಾಥ್ ಅವರನ್ನು ಟೀಕಿಸುತ್ತಿದ್ದಾರೆ. 

ಜೊತೆಗೆ ತಮ್ಮ ಬೆಂಬಲಿಗರಿಂದಲೂ ಆಯನೂರು ಮಂಜುನಾಥ್‌ಗೆ ಸಖತ್ ಟಾಂಗ್ ಕೊಡಿಸುತ್ತಿದ್ದಾರೆ. ಇದಕ್ಕೆ ಇನ್ನಷ್ಟು ತುಪ್ಪ ಸುರಿದಿದ್ದು ಆಯನೂರು ಪದೇಪದೇ ಪತ್ರಿಕಾಗೋಷ್ಟಿ ನಡೆಸುವುದು ಹಾಗೂ ಪ್ರತಿ ಪತ್ರಿಕಾಗೋಷ್ಟಿಯಲ್ಲಿಯೂ ಯೋಗೀಶ್ ಮತ್ತು ದಿನೇಶ್ ಅವರ ಕಾಲೆಳೆಯುತ್ತಿರುವುದು. ಆಯನೂರು ಮಂಜುನಾಥ್ ಒಮ್ಮೆ ‘ಹೂ ಇಸ್ ಯೋಗೀಶ್’ ಎಂದಿರುವುದು, ‘ಪ್ರೇತಾತ್ಮಗಳು’ ಎಂದು ಪರೋಕ್ಷವಾಗಿ ಟೀಕಿಸಿದ್ದು ಈ ಜಗಳಕ್ಕೆ ತುಪ್ಪ ಹೊಯ್ದಂದಾಯಿತು.

ಗುರುಬಲ-ಕುರುಬಲ!!
ತಮಗೇ ಟಿಕೆಟ್ ಗ್ಯಾರಂಟಿ ಎಂದು ಹೇಳಿದ್ದ ಆಯನೂರು ಮಂಜುನಾಥ್ ಕುರಿತು ದಿನೇಶ್ ಅವರು ಆಯನೂರು ಮಂಜುನಾಥ್ ಅವರಿಗೆ ಬಿಜೆಪಿಯಲ್ಲಿ ಗುರುಬಲ ಇದೆ ಎಂದು ಪರೋಕ್ಷವಾಗಿ ಟೀಕಿಸಿದ್ದಕ್ಕೆ ಪ್ರತಿಯಾಗಿ ಆಯನೂರು ಮಂಜುನಾಥ್ ಪತ್ರಿಕಾಗೋಷ್ಟಿಯಲ್ಲಿ ನನಗೆ ಗುರುಬಲ, ಆದರೆ ಅವರಿಗೆ ‘ಕುರು’ಬಲ ಇರಬೇಕು ಎಂದು ಪ್ರತಿಯಾಗಿ ಟಾಂಗ್ ನೀಡಿದ್ದರು.

ಇದಕ್ಕೆ ಪ್ರತಿಯಾಗಿ ಸೋಮವಾರ ಪತ್ರಿಕಾಗೋಷ್ಟಿ ನಡೆಸಿದ ದಿನೇಶ್ ಅವರು ಕುರು ಏಳುವ ಜಾಗವನ್ನು ಆಯನೂರು ಏಕೆ ಬಗ್ಗಿ ನೋಡಿದರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಈ ನಡುವೆ ಕೆಲ ಕಾಂಗ್ರೆಸ್ ಮುಖಂಡರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ ಅವರಗೆ ದೂರು ನೀಡಿ ಪಕ್ಷದ ರಾಜ್ಯ ವಕ್ತಾರ ಆಯನೂರು ಮಂಜುನಾಥ್ ಬಿಜೆಪಿಯ ನಾಯಕರಾದ ಯಡಿಯೂರಪ್ಪ, ರಾಘವೇಂದ್ರ, ವಿಜಯೇಂದ್ರ ವಿರುದ್ಧ ಯಾವ ಟೀಕೆಯನ್ನೂ ಮಾಡುತ್ತಿಲ್ಲ. ಕೇವಲ ಈಶ್ವರಪ್ಪ ಅವರನ್ನು ಮಾತ್ರ ಗುರಿಯಾಗಿ ಟೀಕೆ ಮಾಡುತ್ತಿದ್ದಾರೆ. ಉಳಿದಂತೆ ಕಾಂಗ್ರೆಸ್ ನಾಯಕರ ವಿರುದ್ಧವೇ ಸಮರ ಸಾರಿದ್ದಾರೆ. ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದೂ ಒತ್ತಾಯಿಸಿದ್ದಾರೆ.

ಈ ಜಗಳ ನಿಲ್ಲುವ ಹಂತಕ್ಕೆ ಕಾಣುತ್ತಿಲ್ಲ. ಮೂಲ ಕಾಂಗ್ರೆಸ್‌ನ ಯುವ ಮುಖಂಡರೆಲ್ಲ ಆಯನೂರು ವಿರುದ್ಧ ಒಂದಾದಂತೆ ಕಾಣುತ್ತಿದೆ. ಆಯನೂರು ಜೊತೆ ಕಾಂಗ್ರೆಸ್ ಸೇರಿದ ಆರ್.ಎಂ. ಮಂಜುನಾಥಗೌಡ, ಎಂ.ಶ್ರೀಕಾಂತ್ ಮತ್ತಿತರರು ಈ ಜಗಳದ ಸುದ್ದಿಗೇ ಬರುತ್ತಿಲ್ಲ.

ಬೆಂಗಳೂರಿಗೆ ತಲುಪಿದ್ದ ಮಧು ಬಂಗಾರಪ್ಪ -ಬೇಳೂರು ಜಗಳ: ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವಿರುದ್ಧ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸಮರ ಸಾರಿದ್ದರು. ಹೋದ ಬಂದ ಕಡೆಯೆಲ್ಲಾ ಮಧು ಬಂಗಾರಪ್ಪ ಅವರನ್ನು ಮುಲಾಜಿಲ್ಲದೇ ಟೀಕಿಸುತ್ತಿದ್ದರು. ಕೊನೆಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸುಂದರೇಶ್ ಮತ್ತು ರಾಜ್ಯ ನಾಯಕರು ಮಧ್ಯ ಪ್ರವೇಶಿಸಿ ಬೇಳೂರು ಬಾಯಿಮುಚ್ಚಿಸಿದ್ದರು.

ಒಟ್ಟಾರೆ ಜಿಲ್ಲಾ ನಾಯಕರಿಗೆ, ಕಾರ್ಯಕರ್ತರಿಗೆ ಬುದ್ಧಿ ಹೇಳುವ, ಸಮರ್ಥವಾಗಿ ಪಕ್ಷವನ್ನು ಕೊಂಡೊಯ್ಯುವ ನಾಯಕತ್ವದ ಕೊರತೆ ಢಾಳಾಗಿ ಕಾಣುತ್ತಿದೆ. ಚುನಾವಣೆ ಹೊತ್ತಿನಲ್ಲಿ ಆಗುತ್ತಿರುವ ಈ ಬೆಳವಣಿಗೆ ನಾಯಕರಿಗೆ ಆತಂಕ ಉಂಟು ಮಾಡಿದೆ.