ಕನ್ನಡಪ್ರಭ ವಾರ್ತೆ ವಿಜಯಪುರ

ತಾಳಿಕೋಟಿ ಪಟ್ಟಣವು ತಾಲೂಕು ಕೇಂದ್ರವಾಗಿ ಮಾರ್ಪಟ್ಟಿದ್ದು, ಶೀಘ್ರದಲ್ಲಿ ಪ್ರಜಾಸೌಧ ಕಟ್ಟಡ ಕಟ್ಟಬೇಕು ಎಂದು ಆಗ್ರಹಿಸಿ ನಗರದ ಡಾ.ಅಂಬೇಡ್ಕರ್‌ ವೃತ್ತದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ನಡೆಸಿದ ತಾಳಿಕೋಟಿ ನಾಗರಿಕರು ಜಿಲ್ಲಾಧಿಕಾರಿ ಡಾ.ಆನಂದ.ಕೆ ರವರಿಗೆ ಮನವಿ ಸಲ್ಲಿಸಿದರು.

ಪುರಸಭಾ ಮಾಜಿ ಅಧ್ಯಕ್ಷೆ ನೀಲಮ್ಮ ಪಾಟೀಲ ಮಾತನಾಡಿ, ತಾಳಿಕೋಟೆ ನಗರವು ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತ ಸಾಗಿದ ನಗರವಾಗಿದೆ. ಎಲ್ಲ ಇಲಾಖೆಗಳನ್ನು ಒಂದೇ ಸೂರಿನಡಿ ಪ್ರಾರಂಭಿಸಬೇಕೆಂದು ಶಾಸಕ ಸಿ.ಎಸ್‌.ನಾಡಗೌಡರು ಪ್ರಜಾಸೌಧ ಕಟ್ಟಡವನ್ನು ಮಂಜೂರು ಮಾಡಿಸಿ ಹಣವನ್ನು ಸರ್ಕಾರದಿಂದ ಬಿಡುಗಡೆಗೊಳಿಸಿದ್ದಾರೆ. ದಾನಿಗಳೊಬ್ಬರು ನಗರದ ಹತ್ತಿರವೇ ಯಾವುದೇ ಅಪೇಕ್ಷೆ ವಿಲ್ಲದೇ 2 ಎಕರೆ ಭೂ ದಾನ ಮಾಡಿದ್ದಾರೆ. ಈಗಾಗಲೇ ಜಿಲ್ಲಾಧಿಕಾರಿಗಳು ಎರಡ್ಮೂರು ಭಾರಿ ಪರಿಶೀಲಿಸಿ ಪ್ರಜಾಸೌಧ ಕಟ್ಟಡ ಕಟ್ಟಲು ಅಂತಿಮಗೊಳಿಸಿದ್ದಾಗಿದೆ. ಈಗ ಕೆಲವರು ತಮ್ಮ ಸ್ವಾರ್ಥದ ನಡಿಗೆಗಾಗಿ ಜಾಗೆ ದೂರಾಗುತ್ತದೆ ಎಂಬ ನೆಪದ ಮೇಲೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವಿಷಯಕ್ಕೆ ಜಿಲ್ಲಾಧಿಕಾರಿಗಳು ಕಿವಿಗೊಡದೇ ನಿಗದಿಪಡಿಸಲಾದ ಜಾಗೆಯಲ್ಲಿಯೇ ಶೀಘ್ರದಲ್ಲಿಯೇ ಪ್ರಜಾಸೌಧ ಕಟ್ಟಡ ಕಟ್ಟಬೇಕೆಂದು ಒತ್ತಾಯಿಸಿದರು.ಮುಖಂಡ ಪ್ರಭುಗೌಡ ಮದರಕಲ್ಲ ಮಾತನಾಡಿ, ಪ್ರಜಾಸೌಧ ಕಟ್ಟಡ ನಿರ್ಮಾಣವಾಗಬೇಕೆಂಬ ಕನಸು ತಾಳಿಕೋಟೆ ನಗರದ ಜನತೆಯದ್ದಾಗಿದೆ ಕೆಲವರು ಈ ಕಟ್ಟಡವಾಗಬಾರದು ಶಾಸಕ ನಾಡಗೌಡ ಅವರ ಹೆಸರಿಗೆ ಮಸಿ ಬಳಿಯಬೇಕೆಂಬ ಉದ್ದೇಶದಿಂದ ವಿರೋಧ ವ್ಯಕ್ತಪಡಿಸುತ್ತಾ ಸಾಗಿದ್ದಾರೆ. ಇದನ್ನೆಲ್ಲ ಲೆಕ್ಕಿಸದೆ ಶಾಸಕ ನಾಡಗೌಡರು ಮಾರ್ಚ್‌ ಅಂತ್ಯದೊಳಗೆ ಕಟ್ಟಡವನ್ನು ಪ್ರಾರಂಬಿಸಬೇಕೆಂದು ಒತ್ತಾಯಿಸಿದರು.ನಿವೃತ್ತ ಶಿಕ್ಷಕ ರೋಶನಸಾಬ ಡೋಣಿ, ಸಂಗನಗೌಡ ಅಸ್ಕಿ ಮಾತನಾಡಿ, ಪ್ರಜಾಸೌಧ ಕಟ್ಟಡ ಕಟ್ಟಲು ನಿಯೋಜಿಸಿರುವ ಸ್ಥಳದ ಹತ್ತಿರ ಪ್ರಮುಖ ಶಾಲಾ ಕಾಲೇಜುಗಳು ಇವೆ ಹತ್ತಿರ ಹೌಸಿಂಗ್ ಬೋರ್ಡ್‌ ಒಳಗೊಂಡು ಮನೆಗಳು ಇವೆ. ವಿರೋಧಿಗಳು ಹೇಳುವಂತೆ ತಾಳಿಕೋಟಿ ಪಟ್ಟಣದ ಸಾರ್ವಜನಿಕರಿಗೆ ಯಾವುದೇ ರೀತಿಯ ಸಂಚಾರ ಮಾಡಲು ತೊಂದರೆ ಆಗುವುದಿಲ್ಲ ಎಂದರು.ಪ್ರತಿಭಟನೆಯಲ್ಲಿ ಡಿ.ವಿ.ಪಾಟೀಲ, ಸಿದ್ದನಗೌಡ ನಾವದಗಿ, ಶರಣಪ್ಪ ತಳವಾರ, ಶರಣು ಕುಳಗೇರಿ, ಆರೀಫ್ ಹೊನ್ನುಟಗಿ, ಗುರಸಂಗಪ್ಪ ಕಶೆಟ್ಟಿ, ಬಸವರಾಜ ಸಜ್ಜನ, ಸುಭಾಷ ಹೂಗಾರ, ನಿಯಾಜ್‌ ಬೇಪಾರಿ, ಫಯಾಜ್ ಉತ್ನಾಳ, ಸಂಜೀವ ದೇಸಾಯಿ, ಶಿವಾನಂದ ಹೂಗಾರ, ನಿರಂಜನಸಾಬ್‌ ಮಕಾನದಾರ, ಅಣ್ಣಾಜಿ ಜಗತಾಪ, ಚಿನ್ನಪ್ಪ ಮಾಳಿ, ರವಿ ಪಾಟೀಲ, ಎಚ್.ಎಸ್.ಗೂಗಲ್, ಪ್ರಕಾಶ ಪಾಟೀಲ, ಸಿವು ಬೊಮ್ಮಗೋಡ, ಗುಂಡು ಜಗತಾಪ, ಶಾಂತಗೌಡ ಪಾಟೀಲ, ಶರಣು ಕುಳಗೇರಿ, ಎಸ್.ಎಸ್.ಚೌದ್ರಿ, ಎಚ್.ಬಿ.ಚಿಂಚೋಳಿ, ಪ್ರಭುಗೌಡ ಕಲ್ಬುರ್ಗಿ, ಎಸ್.ಸಿ.ಹಿರೇಮಠ, ಬಿ.ಬಿ.ಹಿರೇಮಠ, ಎಚ್.ಎಸ್.ರಂಜಣಗಿ, ಎಂ.ಬಿ.ಕಟ್ಟಿಮನಿ, ಎಸ್.ಕೆ.ಕಲ್ಬುರ್ಗಿ ಉಪಸ್ಥಿತರಿದ್ದರು.