ಕನ್ನಡಪ್ರಭ ವಾರ್ತೆ ಮೂಡಲಗಿ

ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ತುಂಬಾ ದೊಡ್ಡದಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ, ಮಗಳಾಗಿ ಬಾಳಿಗೆ ಬೆಳಕಾಗುತ್ತಾಳೆ. ವೈಯಕ್ತಿಕವಾಗಿ ಮನೆಯ ಅರ್ಧ ಜವಾಬ್ದಾರಿಯನ್ನು ಹೊರುವ ಜೊತೆಗೆ ಒಬ್ಬ ಶಿಕ್ಷಕಿಯಾಗಿ, ಇಂಜಿನಿಯರ್ ಆಗಿ, ಪೈಲೆಟ್ ಆಗಿ ಕೂಡ ತನ್ನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾಳೆ ಎಂದು ಎಕ್ಸ್ ಮುನ್ಸಿಪಲ್ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯೆ ಅನ್ನಪೂರ್ಣ ಕುರಬೇಟ ಹೇಳಿದರು.

​ಸಮೀಪದ ದತ್ತುಗ್ರಾಮ ಬಳೋಬಾಳದಲ್ಲಿ, ಕಲ್ಲೋಳಿ ಪಟ್ಟಣದ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿರುವ ೨೦೨೫-೨೬ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ರವಿವಾರ ಆಯೋಜಿಸಲಾದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಶ್ರೇಷ್ಠ ಭಾರತ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಕೂಡ ಈಗಿನ ಆಧುನಿಕ ದಿನಗಳಲ್ಲಿ ಆಕೆ ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ ಎಂದರು.

ಮುಖ್ಯ ಅತಿಥಿ ಚೇತನ ಜೋಗನ್ನವರ ಮಾತನಾಡಿ, ವೈವಿಧ್ಯತೆಯಲ್ಲಿ ಏಕತೆ ಎನ್ನುವುದು ಭಾರತದ ಜೀವಾಳ. ನಮ್ಮ ದೇಶದಲ್ಲಿ ನೂರಾರು ಭಾಷೆಗಳು, ಸಾವಿರಾರು ಆಚಾರ-ವಿಚಾರಗಳು ಮತ್ತು ವೈವಿಧ್ಯಮಯ ಸಂಸ್ಕೃತಿಗಳಿವೆ. ನಾವು ಬೇರೆ ಪ್ರಾಂತ್ಯದ ಆಹಾರ, ಕಲೆ ಮತ್ತು ಭಾಷೆಯನ್ನು ಗೌರವಿಸಿದಾಗ ಮಾತ್ರ ಶ್ರೇಷ್ಠ ಭಾರತ ನಿರ್ಮಾಣವಾಗಲು ಸಾಧ್ಯ. ನಾವೆಲ್ಲರೂ ಭಾರತೀಯರು, ಭಾರತವೇ ನಮ್ಮ ಹೆಮ್ಮೆ ಎಂದು ಹೇಳಿದರು.

ಅತಿಥಿ ಈಶ್ವರ ಬೆಳವಿ ಶ್ರೇಷ್ಠಭಾರತದ ವೈಶಿಷ್ಟ್ಯದ ಕುರಿತು ಮಾತನಾಡಿದರು. ಪ್ರಾಚಾರ್ಯ ಡಾ.ಸುರೇಶ ಹನಗಂಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.


ಅಧ್ಯಕ್ಷತೆಯನ್ನು ಶಿಕ್ಷಕ ಈರಪ್ಪ ಕಳಸನ್ನವರ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಾಳವ್ವ ಕಂಕಣವಾಡಿ, ಶಾಂತಾ ಪಾಟೀಲ, ನೀಲವ್ವ ಹೆಬ್ಬಾಳ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ, ಸಹ ಕಾರ್ಯಕ್ರಮಾಧಿಕಾರಿಗಳಾದ ಡಿ.ಎಸ್.ಹುಗ್ಗಿ, ಮುಸ್ತಫಾ ಜಾಲಗಾರ, ಬಿ.ಸಿ.ಮಾಳಿ, ಬೋಧಕ/ಬೋಧಕೇತರ ಸಿಬ್ಬಂದಿ ಹಾಗೂ ಸ್ವಯಂಸೇವಕರು ಉಪಸ್ಥಿತರಿದ್ದರು.

ಸುಶ್ಮೀತಾ ಹೊರಟ್ಟಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಸೌಜನ್ಯ ಬಂಡ್ರೋಳ್ಳಿ ಹಾಗೂ ಸಂಗಡಿಗರು ಎನ್.ಎಸ್.ಎಸ್. ಗೀತೆ ಹಾಡಿದರು. ಡಾ.ರಾಜಶ್ರೀ ತೋಟಗಿ ನಿರೂಪಿಸಿದರು, ವಿ.ವೈ.ಕಾಳೆ ಸ್ವಾಗತಿಸಿದರು, ಅಕ್ಷತಾ ಮೇದಾರ ವಂದಿಸಿದರು.