ಗದಗ: ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ (ಪಿಆರ್‌ಸಿ) 2026 ಅಧಿಸೂಚನೆಯನ್ನು ತಕ್ಷಣ ಸ್ಥಗಿತಗೊಳಿಸಿ, ಅದರ ಸಾಂವಿಧಾನಿಕ ಹಾಗೂ ಕಾನೂನು ಬದ್ಧತೆಯನ್ನು ಸಮಗ್ರವಾಗಿ ಪರಿಶೀಲಿಸುವಂತೆ ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಸೋಮವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಆಗ್ರಹಿಸಿದರು.

ಮನವಿಯಲ್ಲಿ ಈ ಅಧಿಸೂಚನೆಯು ರಾಷ್ಟ್ರೀಯ ಭದ್ರತೆ, ಆಡಳಿತಾತ್ಮಕ ವ್ಯವಸ್ಥೆ ಹಾಗೂ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಸಮರ್ಪಕ ಪೌರತ್ವ ಪರಿಶೀಲನೆಗೆ ಅವಕಾಶವಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದ್ದು, ನಕಲಿ ದಾಖಲೆಗಳ ಆಧಾರದ ಮೇಲೆ ಅಥವಾ ಅಕ್ರಮವಾಗಿ ರಾಜ್ಯದಲ್ಲಿ ನೆಲೆಸಿರುವ ವ್ಯಕ್ತಿಗಳು ಕೂಡ ಪ್ರಮಾಣಪತ್ರ ಪಡೆಯುವ ಸಾಧ್ಯತೆಯನ್ನು ತಳ್ಳಿಹಾಕಲು ಸಾಧ್ಯವಿಲ್ಲ. ಇಂತಹ ಪ್ರಮಾಣಪತ್ರಗಳನ್ನು ಆಧರಿಸಿ ಸರ್ಕಾರಿ ಯೋಜನೆಗಳು, ಶಿಕ್ಷಣ, ಉದ್ಯೋಗ, ಕಲ್ಯಾಣ ಯೋಜನೆಗಳು ಸೇರಿದಂತೆ ವಿವಿಧ ಸರ್ಕಾರಿ ಸೌಲಭ್ಯಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ನಿಜವಾದ ಅರ್ಹ ಫಲಾನುಭವಿಗಳಿಗೆ ಅನ್ಯಾಯವಾಗುವ ಜೊತೆಗೆ ಆಡಳಿತಾತ್ಮಕ ವ್ಯವಸ್ಥೆಯ ಮೇಲೆಯೂ ದುಷ್ಪರಿಣಾಮ ಉಂಟಾಗಬಹುದು.

ಪೌರತ್ವ, ವಲಸೆ ಹಾಗೂ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯಗಳು ಸಂವಿಧಾನದ ಪ್ರಕಾರ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಸೇರಿರುವುದರಿಂದ, ಈ ಅಧಿಸೂಚನೆಯು ಕಾನೂನು ಬದ್ಧವಾಗಿದೆಯೇ ಎಂಬ ಬಗ್ಗೆ ಸಮಗ್ರ ಪರಿಶೀಲನೆ ನಡೆಸಬೇಕು. ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಸಂವಿಧಾನದ ಆಶಯಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಸಂಬಂಧಿತ ಪ್ರಾಧಿಕಾರಗಳು ಪರಿಶೀಲಿಸುವ ಅಗತ್ಯವಿದೆ.

ಈ ಹಿನ್ನೆಲೆಯಲ್ಲಿ ರಾಜ್ಯಪಾಲರು ಮಧ್ಯಪ್ರವೇಶಿಸಿ, ಶಾಶ್ವತ ನಿವಾಸ ಪ್ರಮಾಣಪತ್ರ ವಿತರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಬೇಕು. ಜೊತೆಗೆ ಕೇಂದ್ರ ಗೃಹ ಸಚಿವಾಲಯ ಹಾಗೂ ಸಂಬಂಧಿತ ಅಧಿಕಾರಿಗಳಿಂದ ಈ ಅಧಿಸೂಚನೆ ಕುರಿತು ಕಾನೂನು ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಪರಿಶೀಲನೆ ನಡೆಸುವಂತೆ ಕ್ರಮವಹಿಸಬೇಕು.ಅಲ್ಲದೆ, ಅಧಿಸೂಚನೆ ಹೊರಡಿಸಲು ಆಧಾರವಾದ ಕಾನೂನು ಮತ್ತು ಆಡಳಿತಾತ್ಮಕ ಅಂಶಗಳ ಕುರಿತು ರಾಜ್ಯ ಸರ್ಕಾರದಿಂದ ಸಮಗ್ರ ವರದಿ ಪಡೆದು, ಪರಿಶೀಲನೆ ಪೂರ್ಣಗೊಳ್ಳುವ ವರೆಗೆ ಪ್ರಮಾಣಪತ್ರ ವಿತರಣೆ ಪ್ರಕ್ರಿಯೆಯನ್ನು ಮುಂದುವರಿಸಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜು ಕುರುಡಗಿ, ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಶಶಿಧರ ದಿಂಡೂರ, ಮಂಜುನಾಥ ಮುಳಗುಂದ, ಅರವಿಂದ ಹುಲ್ಲೂರ, ಸಂತೋಷ ಅಕ್ಕಿ, ಪ್ರೀತಿ ಹೊನ್ನಗುಡಿ ಸೇರಿದಂತೆ ಮಹಿಳಾ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಜರಿದ್ದರು.