ಹಾವೇರಿ: ರೈತರ ಮೊದಲ ಕೃಷಿ ಹಬ್ಬ ಎನಿಸಿರುವ ಮಣ್ಣೆತ್ತಿನ ಅಮಾವಾಸ್ಯೆಯನ್ನು ಮಣ್ಣಿನ ಎತ್ತುಗಳ ಪೂಜೆ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಗುತ್ತಿದ್ದು, ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಂಗಳವಾರ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಗೆ ಭರದ ಸಿದ್ಧತೆಯಲ್ಲಿ ತೊಡಗಿರುವುದು ಕಂಡುಬಂದಿದೆ.

ಜಿಲ್ಲಾದ್ಯಂತ ಜು.14ರಂದು ಮಣ್ಣೆತ್ತಿನ ಅಮಾವಾಸ್ಯೆ ಆಚರಿಸಲಾಗುತ್ತಿದ್ದು, ಹಬ್ಬದ ಸಂಪ್ರದಾಯ ಪಾಲಿಸಿಕೊಂಡು ಬಂದಿರುವ ನಗರದ ರೈತಾಪಿ ಕುಟುಂಬದವರು ಸೋಮವಾರ ಮಣ್ಣಿನಿಂದ ತಯಾರಿಸಿದ ಎತ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ನಗರದ ಹಲವೆಡೆ ಕಂಡುಬಂದಿತು. ಬೆರಳೆಣಿಕೆಯ ಕಲಾವಿದರು ಹುತ್ತದ ಮಣ್ಣನ್ನು ತಂದು ಚೆನ್ನಾಗಿ ಹದಗೊಳಿಸಿ, ಮಣ್ಣಿನ ಎತ್ತುಗಳ ಮೂರ್ತಿ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ಮಣ್ಣಿನ ಎತ್ತುಗಳು, ಗ್ವಾದಲಿ ಖರೀದಿಯ ಜೊತೆಗೆ ಅಮಾವಾಸ್ಯೆ ಪೂಜೆಗೆ ಬೇಕಾದ ಹೂವು, ಹಣ್ಣು, ಇತರೆ ಪರಿಕರಗಳನ್ನು ಖರೀದಿಸಲು ಗ್ರಾಹಕರು ಮುಂದಾಗಿದ್ದು, ಅಮಾವಾಸ್ಯೆ ಆಚರಣೆಗೆ ಅಗತ್ಯ ಸಿದ್ಧತೆಯನ್ನು ನಡೆಸಿರುವ ದೃಶ್ಯ ಎಲ್ಲೆಡೆ ಕಂಡುಬಂದಿತು.

ಎಲ್ಲೆಲ್ಲಿ ಮಾರಾಟ: ನಗರದ ಮುನ್ಸಿಪಲ್ ಹೈಸ್ಕೂಲ್ ರೋಡ್, ಎಂ.ಜಿ. ರಸ್ತೆ, ಮಹಾತ್ಮ ಗಾಂಧಿ ವೃತ್ತ, ನಗರಸಭೆ ಕಚೇರಿ ಮುಂಭಾಗ, ಪಿ.ಬಿ. ರಸ್ತೆ, ತರಕಾರಿ ಮಾರುಕಟ್ಟೆ, ಕಾಗಿನೆಲೆ ರಸ್ತೆ, ಸುಭಾಸ್ ಸರ್ಕಲ್, ಹುಕ್ಕೇರಿಮಠ, ಹೊಸಮಠ ಹತ್ತಿರ ಮಣ್ಣಿನ ಎತ್ತುಗಳನ್ನು ಮಾರಾಟ ಮಾಡಲಾಗುತ್ತಿದೆ. ಎತ್ತುಗಳ ಆಕಾರದ ಮೇಲೆ ಅವುಗಳಿಗೆ ದರ ನಿಗದಿ ಮಾಡಲಾಗಿದ್ದು, ಪ್ರತಿ ಜೋಡಿ ಮಣ್ಣೆತ್ತುಗಳಿಗೆ ಕನಿಷ್ಠ 20ರಿಂದ ಗರಿಷ್ಠ 80 ರು.ಗಳವರೆಗೆ ದರ ನಿಗದಿಪಡಿಸಿ ಮಾರಾಟ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

ರೈತರೊಂದಿಗೆ ಭಾವನಾತ್ಮಕ ನಂಟು: ಸಾಮಾನ್ಯವಾಗಿ ರೈತರು ಮಣ್ಣೆತ್ತಿನ ಅಮಾವಾಸ್ಯೆ ದಿನ ಎತ್ತುಗಳಿಗೆ ಬಿಡುವು ನೀಡಿ, ಇತರೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಇತ್ತೀಚೆಗೆ ಕೃಷಿ ಯಾಂತ್ರಿಕೃತಗೊಂಡ ಹಿನ್ನೆಲೆಯಲ್ಲಿ ಎತ್ತುಗಳ ಬಳಕೆ ತೀರಾ ವಿರಳವಾಗುತ್ತಿದೆ. ಈ ಹಿನ್ನೆಲೆ ಎತ್ತುಗಳಿಲ್ಲದ ಕೃಷಿಕರು ಮಣ್ಣಿನ ಎತ್ತುಗಳಿಗೆ ಪೂಜೆ ಸಲ್ಲಿಸಿ, ಭಕ್ತಿಭಾವ ಮೆರೆಯುತ್ತಾರೆ. ಹೊಲದ ಮಣ್ಣು ಮತ್ತು ಹೊಲವನ್ನು ಉಳುಮೆ ಮಾಡುವ ಎತ್ತಿನ ಸಮಾಗಮವೇ ಮಣ್ಣಿನ ಎತ್ತು ಎಂಬ ಭಾವನಾತ್ಮಕ ಸಂಬಂಧವನ್ನು ಮಣ್ಣೆತ್ತಿನ ಅಮಾವಾಸ್ಯೆ ಹೊಂದಿದೆ. ಸಾಮಾನ್ಯವಾಗಿ ಬಿತ್ತನೆ ಅವಧಿಯಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪೂಜೆ ನೆರವೇರಿಸಲಾಗುತ್ತದೆ. ಪೂಜೆಯಿಂದ ಬಿತ್ತನೆಯೂ ಸುಗಮಗೊಂಡು, ಉತ್ತಮ ಇಳುವರಿ ಹೊಂದಲು ದೈವ ಬಲ ಒದಗುತ್ತದೆ ಎಂಬುದು ರೈತರ ಬಲವಾದ ನಂಬಿಕೆಯಾಗಿದೆ.

ಸಂಪ್ರದಾಯ ಬಿಡದ ಜನರು: ಕಳೆದೊಂದು ತಿಂಗಳಿನಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಜಮೀನುಗಳನ್ನು ಎಡೆ ಹೊಡೆಯುವುದು, ಮೇಲು ಗೊಬ್ಬರ ಹಾಕುವುದು, ಕಳೆ ತೆಗೆಯುವ ಕೆಲಸಗಳು ಜೋರಾಗಿ ನಡೆದಿವೆ. ಆದರೆ ಮಳೆರಾಯನ ಮುನಿಸಿಗೆ ಬೇಸತ್ತಿರುವ ರೈತರು ಹದಭರಿತ ಮಳೆಗಾಗಿ ಮಳೆರಾಯನಲ್ಲಿ ಪ್ರಾರ್ಥಿಸುತ್ತಿದ್ದಾರೆ. ಈ ನಡುವೆ ಮಣ್ಣೆತ್ತಿನ ಅಮಾವಾಸ್ಯೆ ಕೂಡ ಬಂದಿರುವುದರಿಂದ ಹಿಂದಿನ ಸಂಪ್ರದಾಯ ಬಿಡದ ಜನರು ಮಣ್ಣೆತ್ತಿನ ಅಮಾವಾಸ್ಯೆ ಆಚರಣೆಯಲ್ಲಿ ತೊಡಗಿದ್ದಾರೆ.


ಕಳೆದೆರಡು ದಿನಗಳಿಂದ ಜನಸಂದಣಿ ಸೇರುವ ಪ್ರದೇಶಗಳ ರಸ್ತೆಬದಿಯಲ್ಲಿ ಕುಳಿತು ಮಣ್ಣೆತ್ತುಗಳನ್ನು ಮಾರಾಟ ಮಾಡುತ್ತಿದ್ದೇವೆ. ಹೇಳಿಕೊಳ್ಳುವಷ್ಟು ವ್ಯಾಪಾರ ನಡೆಯದಿದ್ದರೂ, ಹಿಂದಿನಿಂದ ಮಾಡಿಕೊಂಡು ಬಂದಿರುವ ಮೂರ್ತಿ ತಯಾರಿಕೆಯ ಕಲೆ ಬಿಡಬಾರದು ಎಂದು ಎಷ್ಟರ ಲಾಭ ಬರಲಿ ಎನ್ನುವ ಉದ್ದೇಶದಿಂದ ಮಾರಾಟ ಮಾಡುತ್ತಿದ್ದೇವೆ ಎಂದು ವ್ಯಾಪಾರಸ್ಥ ಮಾಲತೇಶ ಕುಂಬಾರ ಹೇಳಿದರು.