ಬಳ್ಳಾರಿ: ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಎಲ್‌ಕೆಜಿ-ಯುಕೆಜಿ ವಿಸ್ತರಣೆ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಜಾರಿ ಹಿನ್ನೆಲೆಯಲ್ಲಿ 3ರಿಂದ 6 ವರ್ಷದ ಮಕ್ಕಳನ್ನು ಅಂಗನವಾಡಿಗಳಿಂದ ದೂರವಿಟ್ಟು ಸರ್ಕಾರ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭಿಸಲಾಗಿದೆ. ಇದರಿಂದ ಅಂಗನವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ರಾಜ್ಯದಲ್ಲಿ 10 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸುವುದಾಗಿ ಹೇಳಿದ ಸರ್ಕಾರವು ಅದಕ್ಕೆ ಬೇಕಾದ ಅನುದಾನ ಬಿಡುಗಡೆ ಮಾಡಲಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ದಿನದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದರೂ ಕಳೆದ 2018ರಿಂದ ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನವನ್ನು ಒಂದು ಪೈಸೆಯನ್ನು ಸಹ ಹೆಚ್ಚಿಸಿಲ್ಲ. ಅಂಗನವಾಡಿ ಕಾರ್ಮಿಕರನ್ನು ಕಾರ್ಮಿಕರಾಗಿ ಪರಿಗಣಿಸದೇ ಕಾನೂನುಗಳು ವ್ಯಾಪ್ತಿಗೆ ತರಲಾಗಿಲ್ಲ. ಕಾರ್ಮಿಕ ಹಕ್ಕುಗಳನ್ನು ಮೊಟಕುಗೊಳಿಸುವ ಹುನ್ನಾರ ನಡೆದಿದೆ. 50 ವರ್ಷ ಯೋಜನೆಯ ಬಲವರ್ಧನೆಗಾಗಿ ದುಡಿದ ಅಂಗನವಾಡಿ ನೌಕರರಿಗೆ 45ನೇ ಭಾರತೀಯ ಕಾರ್ಮಿಕ ಸಮ್ಮೇಳನದ ಶಿಫಾರಸಿನಂತೆ ಕನಿಷ್ಠ ಕೂಲಿ ಜಾರಿ ಮಾಡಲಿಲ್ಲ. ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದಂತೆ ಕಾರ್ಯಕರ್ತರಿಗೆ 15 ಸಾವಿರ ರು. ಹಾಗೂ ಸಹಾಯಕಿಯರಿಗೆ 10 ಸಾವಿರ ರು. ವೇತನ ಹೆಚ್ಚಳ ಮಾಡಲಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಧೋರಣೆಯನ್ನು ಖಂಡಿಸಿ ರಾಜ್ಯದಾದ್ಯಂತ ಕರಾಳ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ನಗರದ ಗಾಂಧಿಭವನದಿಂದ ಗಡಗಿಚನ್ನಪ್ಪ ವೃತ್ತದ ಮೂಲಕ ನೂತನ ಜಿಲ್ಲಾಡಳಿತ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ನಾಗೇಂದ್ರಪ್ರಸಾದ್ ಅವರಿಗೆ ಮನವಿ ಸಲ್ಲಿಸಿದರು. ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ.ಸತ್ಯಬಾಬು, ಜಿಲ್ಲಾಧ್ಯಕ್ಷ ಬಿ.ಉಮದೇವಿ, ಕಾರ್ಯದರ್ಶಿ ಎ.ಮಲ್ಲಮ್ಮ, ಜಿಲ್ಲಾ ಪ್ರಮುಖರಾದ ಈರಮ್ಮ, ನೀಲಾವತಿ, ಕಿರಣಕುಮಾರಿ, ವಿಮಲಾ, ಶಕುಂತಲಾ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಜೆ.ಚಂದ್ರಕುಮಾರಿ, ಅಕ್ಷರ ದಾಸೋಹ ಸಂಘಟನೆಯ ವಿ.ದುರ್ಗಮ್ಮ, ನಾಗರತ್ನಮ್ಮ, ಓಂಕಾರಮ್ಮ, ನಾಗಲಕ್ಷ್ಮಿ, ನಾಗಮ್ಮ, ಪದ್ಮಾ, ರೇಣುಕಾ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.