ಮುನಿರಾಬಾದ್: ತುಂಗಭದ್ರಾ ಜಲಾಶಯದ ಎಡದಂಡೆ ಭಾಗದ ವಿಜಯನಗರ ಕಾಲುವೆಗಳಿಗೆ ನೀರು ಹರಿಸಬೇಕು ಎಂದು ರೈತ ಮುಖಂಡ ವಿಶ್ವನಾಥ ರಾಜು ನೀರಾವರಿ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಸಮೀಪದ ಶಿವಪುರ ಗ್ರಾಮದ ರಾಮ ಮಂದಿರದಲ್ಲಿ ಸೋಮವಾರ ಎಡದಂಡೆ ಭಾಗದ ವಿಜಯನಗರ ಕಾಲುವೆಯ 0 ಮೈಲ್‌ನಿಂದ 11ಎ ಮೈಲ್ (ಆನೆಗುಂದಿ) ಭಾಗದ ರೈತರ ಸಭೆಯಲ್ಲಿ ಅವರು ಮಾತನಾಡಿದರು. ಬಚಾವತ್ ತೀರ್ಪಿನ ಪ್ರಕಾರ ಎಡದಂಡೆ ವಿಜಯನಗರ ಕಾಲುವೆಯ 0 ಮೈಲ್‌ನಿಂದ 11ಎ ಮೈಲ್ ವರೆಗೂ ನೀರು ಹರಿಸಬೇಕು ಎಂಬ ನಿಯಮ ಇದೆ. ಜಲಾಶಯದಲ್ಲಿ ಬಲದಂಡೆ ಭಾಗದ ವಿಜಯನಗರ ಕಾಲುವೆಗಳಾದ ಕೃಷ್ಣ ದೇವರಾಯ ಮತ್ತು ಬಸವಣ್ಣ ಕಾಲುವೆಗಳಲ್ಲಿ ಈಗಾಗಲೇ ನೀರು ಹರಿಸಲಾಗುತ್ತಿದೆ. ಆದರೆ ಎಡದಂಡೆ ಭಾಗದ ವಿಜಯನಗರ ಕಾಲುವೆಗಳಲ್ಲಿ ನೀರನ್ನು ಯಾಕೆ ಹರಿಸುತ್ತಿಲ್ಲ ಎಂದು ಪ್ರಶ್ನಿಸಿದರು.ತಾಪಂ ಮಾಜಿ ಸದಸ್ಯ ಪಾಲಾಕ್ಷಪ್ಪ ಗುಂಗಾಡಿ ಮಾತನಾಡಿ, ಈ ಭಾಗದಲ್ಲಿ ರೈತರು ಬೆಳೆದ ಭತ್ತ, ಕಬ್ಬು, ಬಾಳೆ ಹಾಗೂ ಶೇಂಗಾ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಎಡದಂಡೆ ಭಾಗದ ವಿಜಯನಗರ ಕಾಲುವೆಗಳಿಗೆ ತಕ್ಷಣ ನೀರನ್ನು ಹರಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ರಾಯಚೂರು ನಗರಕ್ಕೆ ಕುಡಿಯುವ ನೀರಿಗಾಗಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನೀರನ್ನು ಹರಿಸಲಾಗಿದೆ. ಈ ಭಾಗದ ವಿಜಯನಗರ ಕಾಲುವೆಗಳಿಗೆ ವರ್ಷಕ್ಕೆ 1.5 ಟಿಎಂಸಿ ನೀರು ಮಾತ್ರ ಬೇಕಾಗುತ್ತದೆ. ಇಷ್ಟು ಅಲ್ಪ ಪ್ರಮಾಣದ ನೀರನ್ನು ಹರಿಸಲು ನೀರಾವರಿ ಇಲಾಖೆ ಅಧಿಕಾರಿಗಳು ಏಕೆ ಹಿಂದೇಟು ಹಾಕುತ್ತಿದ್ದಾರೆ ಎಂದು ಪಾಲಾಕ್ಷಪ್ಪ ಪ್ರಶ್ನಿಸಿದರು.ಹುಲಿಗಿ ಗ್ರಾಮದ ಪ್ರಗತಿಪರ ರೈತ ಪ್ರಭುರಾಜ್ ಪಾಟೀಲ್ ಮಾತನಾಡಿ, ನೀರಾವರಿ ಇಲಾಖೆ ಅಧಿಕಾರಿಗಳು ಎಡದಂಡೆ ಭಾಗದ ವಿಜಯನಗರ ಕಾಲುವೆಗಳಿಗೆ ನೀರನ್ನು ಹರಿಸದಿದ್ದರೆ ಈ ಭಾಗದ ರೈತರು ಉಗ್ರ ಹೋರಾಟ ಮಾಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಆನಂತರ ಸಭೆಯಲ್ಲಿ ಎಡದಂಡೆ ಭಾಗದ ವಿಜಯನಗರ ಕಾಲುವೆಗಳಿಗೆ ನೀರು ಹರಿಸುವ ವಿಷಯಕ್ಕೆ ಸಂಬಂಧಿಸಿದಂತೆ ನೀರಾವರಿ ಇಲಾಖೆಯ ಮುಖ್ಯ ಅಭಿಯಂತರರಿಗೆ ಮನವಿ ನೀಡಲು ತೀರ್ಮಾನಿಸಲಾಯಿತು.
ಒಂದು ವೇಳೆ ಮನವಿಗೆ ಸಕಾರಾತ್ಮಕವಾದ ಉತ್ತರ ಸಿಗದಿದ್ದರೆ ಈ ಭಾಗದ ಶಾಸಕರಾದ ರಾಘವೇಂದ್ರ ಹಿಟ್ನಾಳ್ ಹಾಗೂ ಜನಾರ್ದನ ರೆಡ್ಡಿ ಅವರ ನೇತೃತ್ವದಲ್ಲಿ ರೈತರ ನಿಯೋಗವು ಬೃಹತ್ ನೀರಾವರಿ ಇಲಾಖೆಯ ಸಚಿವ ರಾಮಲಿಂಗ ರೆಡ್ಡಿ ಅವರನ್ನು ಭೇಟಿಯಾಗಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
300ಕ್ಕಿಂತಲೂ ಹೆಚ್ಚಿನ ರೈತರು ಸಭೆಯಲ್ಲಿದ್ದರು. ಶಿವಬಾಬು ಚಾಲಸಾನಿ, ಹುಲಿಗೆಪ್ಪ ಗಡಾದ್, ಯಂಕಪ್ಪ ಹೊಸಳ್ಳಿ, ವೀರಭದ್ರಯ್ಯ ಭೂಸ್ನೂರ್ ಮಠ, ಜಿಪಂ ಮಾಜಿ ಸದಸ್ಯ ಸಿದ್ರಾಮಸ್ವಾಮಿ, ವೆಂಕಟೇಶ್ ಕಂಪಸಾಗರ, ಸತ್ಯನಾರಾಯಣ ರೆಡ್ಡಿ, ರಾಮಣ್ಣ, ನಾಗರಾಜ ಜಂತಕಲ್, ರಾಮರಾವ್, ಖಾಜಾ ಹುಸೇನ್ ದೊಡ್ಮನಿ ಉಪಸ್ಥಿತರಿದ್ದರು.