ಬಾಲ್ಯದಿಂದಲೇ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡುವ ಮೂಲಕ ಅವರಲ್ಲಿನ ಕಲೆಯ ವಿಕಾಸಕ್ಕೆ ವೇದಿಕೆ ಒದಗಿಸಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಸಂಶೋಧಕಿ ಡಾ. ಪದ್ಮಾ ಶೇಖರ್ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಬಾಲ್ಯದಿಂದಲೇ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ ಸೂಕ್ತ ಪ್ರೋತ್ಸಾಹ, ಮಾರ್ಗದರ್ಶನ ನೀಡುವ ಮೂಲಕ ಅವರಲ್ಲಿನ ಕಲೆಯ ವಿಕಾಸಕ್ಕೆ ವೇದಿಕೆ ಒದಗಿಸಬೇಕು ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಹಾಗೂ ಸಂಶೋಧಕಿ ಡಾ. ಪದ್ಮಾ ಶೇಖರ್ ಸಲಹೆ ನೀಡಿದರು.ಸಿದ್ದಾಪುರದ ಶ್ರೀ ಆದಿ ಚುಂಚನಗಿರಿ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ಬಿಜಿಎಸ್ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಿವ್ಯ ಸಾನಿಧ್ಯ ವಹಿಸಿದ್ದ ಆದಿ ಚುಂಚನಗಿರಿ ಮೈಸೂರು-ಕೊಡಗು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಮಾತನಾಡಿ, ಕೇವಲ ವಿದ್ಯಾಭ್ಯಾಸ ಮಾತ್ರವಲ್ಲ ಮಕ್ಕಳಿಗೆ ಒಳ್ಳೆಯ ಪರಿಸರ ಕಲ್ಪಿಸಿ ಅವರನ್ನು ಸಂಸ್ಕಾರವಂತರನ್ನಾಗಿ ಮಾಡುವುದು ಎಲ್ಲರ ಹೊಣೆ ಎಂದರು.

ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸುವತ್ತ ಗಮನಹರಿಸಿ. ಇತ್ತೀಚೆಗೆ ವಿದ್ಯಾವಂತರು ಹೆಚ್ಚಾಗಿ ಹಾದಿ ತಪ್ಪುತ್ತಿದ್ದಾರೆ. ಕಳ್ಳತನದಂತಹ ಅಪರಾಧಗಳಲ್ಲಿ ಭಾಗಿ ಆಗುತ್ತಿರುವುದನ್ನು ಪ್ರತಿನಿತ್ಯ ಗಮನಿಸಬಹುದು. ಪ್ರತಿಯೊಬ್ಬರು ಅದಷ್ಟು ತಮ್ಮ ಸುತ್ತಮುತ್ತ ಪರಿಸರದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಕೆ ಮಾಡಿಕೊಂಡಲ್ಲಿ ಇಂತಹ ಅಪರಾಧಗಳನ್ನು ನಿಯಂತ್ರಣಕ್ಕೆ ತರಲು ಸಾಧ್ಯ. ಇತ್ತೀಚೆಗೆ ಸಿಸಿ ಕ್ಯಾಮರಾಗಳು ಕಡಿಮೆ ದರದಲ್ಲಿ ಲಭ್ಯವಾಗುತ್ತಿವೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಇಲಾಖೆ ಜತೆ ಕೈಜೋಡಿಸಬೇಕೆಂದು ಮನವಿ ಮಾಡಿದರು.ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಆಶಾ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯ ಹೀಗಾಗಿ ಉತ್ತಮ ವಿದ್ಯಾಭ್ಯಾಸ, ಆದರ್ಶ ನಡವಳಿಕೆ ಹಾಗೂ ಮೌಲ್ಯಯುತ ವಿಚಾರಗಳನ್ನು ಕಲಿತುಕೊಳ್ಳಬೇಕು ಈ ನಿಟ್ಟಿನಲ್ಲಿ ಶಿಕ್ಷಕರ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಸಿದ್ದಾಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರೇಮ ಗೋಪಾಲ್ ಮಾತನಾಡಿ, ‘ಪಾಲಕರು ಹಾಗೂ ಶಿಕ್ಷಕರು ಮಕ್ಕಳನ್ನು ಕೇವಲ ಅಂಕ ಗಳಿಕೆಗೆ ಸೀಮಿತಗೊಳಿಸದೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡಬೇಕು ಎಂದರು.

ಗ್ರಾ. ಪಂ ಉಪಾಧ್ಯಕ್ಷ ಪಳನಿ ಸ್ವಾಮಿ, ಗ್ರಾಪಂ ಸದಸ್ಯ ಸುಕ್ಕೂರ್, ಉದ್ಯಮಿ ಶ್ರೀನಿವಾಸ್ ಸೇರಿದಂತೆ ಮತ್ತಿತರ ಗಣ್ಯರು ವೇದಿಕೆಯಲ್ಲಿದ್ದರು.

ವೇದಿಕೆ ಕಾರ್ಯಕ್ರಮ ಬಳಿಕ ನಡೆದ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.

ಇದೇ ಸಂದರ್ಭ ಶಿಕ್ಷಣ, ಕ್ರೀಡೆ, ಇತರ ಚಟುವಟಿಕೆಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಸಿದ್ದಾಪುರ ಬಿಜಿಎಸ್ ಸಂಸ್ಥೆಯ ಮೇಲ್ವಿಚಾರಕ ಮಂಜುನಾಥ್, ಆಡಳಿತಾಧಿಕಾರಿ ಸುಧಾಕರ್, ಕಾಳೇಗೌಡ, ಮುಖ್ಯ ಶಿಕ್ಷಕಿ ಅನಿತಾ ಸೇರಿದಂತೆ ಶಿಕ್ಷಕ ವೃಂದ ಹಾಗೂ ಸಿಬ್ಬಂದಿ, ಪೋಷಕರು ಹಾಜರಿದ್ದರು.