ಯೇಸು ಕ್ರಿಸ್ತರ ದೈವ ದರ್ಶನ ಮಹೋತ್ಸವ (ಎಪಿಫನಿ) ಪ್ರಯುಕ್ತ ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಭಾನುವಾರ ವಾರ್ಷಿಕ ಭವ್ಯ ಪರಮ ಪವಿತ್ರ ಪ್ರಸಾದದ ಮೆರವಣಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಿಲಾಗ್ರಿಸ್ ಚರ್ಚ್‌ನಿಂದ ಆರಂಭಗೊಂಡು ರೊಸಾರಿಯೊ ಕೆಥೆಡ್ರಲ್‌ವರೆಗೆ ನಡೆದ ಈ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಈ ಸಂದರ್ಭ ಬಿಷಪ್‌ ಅವರು 2026ನ್ನು ‘ಮಕ್ಕಳ ವರ್ಷ’ ಎಂದು ಅಧಿಕೃತವಾಗಿ ಘೋಷಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಯೇಸು ಕ್ರಿಸ್ತರ ದೈವ ದರ್ಶನ ಮಹೋತ್ಸವ (ಎಪಿಫನಿ) ಪ್ರಯುಕ್ತ ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಭಾನುವಾರ ವಾರ್ಷಿಕ ಭವ್ಯ ಪರಮ ಪವಿತ್ರ ಪ್ರಸಾದದ ಮೆರವಣಿಗೆ ಶ್ರದ್ಧಾ ಭಕ್ತಿಯಿಂದ ನಡೆಯಿತು. ಮಿಲಾಗ್ರಿಸ್ ಚರ್ಚ್‌ನಿಂದ ಆರಂಭಗೊಂಡು ರೊಸಾರಿಯೊ ಕೆಥೆಡ್ರಲ್‌ವರೆಗೆ ನಡೆದ ಈ ಮೆರವಣಿಗೆಯಲ್ಲಿ ನೂರಾರು ಭಕ್ತರು ಪಾಲ್ಗೊಂಡರು. ಈ ಸಂದರ್ಭ ಬಿಷಪ್‌ ಅವರು 2026ನ್ನು ‘ಮಕ್ಕಳ ವರ್ಷ’ ಎಂದು ಅಧಿಕೃತವಾಗಿ ಘೋಷಿಸಿದರು.ಕಾರ್ಯಕ್ರಮವು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತಿ ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಅಧ್ಯಕ್ಷತೆಯಲ್ಲಿ ಮಿಲಾಗ್ರಿಸ್ ಚರ್ಚ್‌ನಲ್ಲಿ ಸಾಮೂಹಿಕ ಬಲಿಪೂಜೆಯೊಂದಿಗೆ ಆರಂಭವಾಯಿತು. ನಂತರ ಪವಿತ್ರ ಪ್ರಸಾದವನ್ನು ಹೊತ್ತ ಅಲಂಕೃತ ವಾಹನವು ಹಂಪನಕಟ್ಟೆ, ಕ್ಲಾಕ್ ಟವರ್ ವೃತ್ತ, ಎ.ಬಿ. ಶೆಟ್ಟಿ ವೃತ್ತದ ಮೂಲಕ ಸಾಗಿತು. ಬ್ಯಾಂಡ್- ಸಂಗೀತ ಮತ್ತು ಗಾಯನ ತಂಡಗಳೊಂದಿಗೆ ಅಸಂಖ್ಯ ಭಕ್ತರು ಭಕ್ತಿಗೀತೆಗಳನ್ನು ಹಾಡುತ್ತಾ ಸಾಗಿದರು.

ರೊಸಾರಿಯೊ ಕೆಥೆಡ್ರಲ್ ಆವರಣದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಂ. ಫಾದರ್ ಅಬ್ರಹಾಂ ಡಿಸೋಜ ಅವರು ಪೋಪ್ ಲಿಯೋ XIV ಅವರ ‘ದಿಲೆಕ್ಸಿ ತೆ’ (ನಾನು ನಿನ್ನನ್ನು ಪ್ರೀತಿಸಿದ್ದೇನೆ) ಎಂಬ ಪ್ರಬೋಧನೆಯ ಕುರಿತು ಸಂದೇಶ ನೀಡಿದರು. ದೇವರ ಪ್ರೀತಿಯು ಕೇವಲ ಪ್ರಾರ್ಥನೆಗೆ ಸೀಮಿತವಾಗಿರಬಾರದು. ಅದು ಬಡವರ, ನಿರ್ಗತಿಕರ ಮತ್ತು ಸಮಾಜದ ಕಟ್ಟಕಡೆಯ ವ್ಯಕ್ತಿಯ ಸೇವೆಯಲ್ಲಿ ವ್ಯಕ್ತವಾಗಬೇಕು ಎಂದು ಕರೆ ನೀಡಿದರು.

2026 ‘ಮಕ್ಕಳ ವರ್ಷ’ ಘೋಷಣೆ: ಪವಿತ್ರ ಪ್ರಸಾದದ ಆಶೀರ್ವಾದದ ನಂತರ ಬಿಷಪ್ ಅವರು ‘ನಮ್ಮ ಮಕ್ಕಳು ದೇವರ ರಾಜ್ಯದ ಫಲಗಳು’ ಎಂಬ ಧ್ಯೇಯವಾಕ್ಯವಿರುವ ಲಾಂಛನವನ್ನು ಅನಾವರಣಗೊಳಿಸುವ ಮೂಲಕ 2026ನೇ ವರ್ಷವನ್ನು ಅಧಿಕೃತವಾಗಿ ‘ಮಕ್ಕಳ ವರ್ಷ’ ಎಂದು ಘೋಷಿಸಿದರು. 18 ವರ್ಷದೊಳಗಿನ ಮಕ್ಕಳ ಕ್ಷೇಮಕ್ಕೆ ವಿಶೇಷ ಆದ್ಯತೆ ನೀಡಬೇಕು. ಅವರಿಗೆ ಕೇವಲ ಶಿಕ್ಷಣವಷ್ಟೇ ಅಲ್ಲದೆ, ಮಾನವೀಯ ಮೌಲ್ಯಗಳು, ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಬಗ್ಗೆ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದು ಹೇಳಿದರು.

ರೊಸಾರಿಯೊ ಕೆಥೆಡ್ರಲ್‌ನಲ್ಲಿ ನಡೆದ ಆರಾಧನೆ ಮತ್ತು ಪ್ರಾರ್ಥನಾ ವಿಧಿಯನ್ನು ಬೈಬಲ್ ಆಯೋಗದ ಕಾರ್ಯದರ್ಶಿ ಡಾ. ವಿನ್ಸೆಂಟ್ ಸಿಕ್ವೇರಾ ನಡೆಸಿಕೊಟ್ಟರು. ಸಮಾರೋಪ ಕಾರ್ಯಕ್ರಮವನ್ನು ಮಂಗಳ ಜ್ಯೋತಿ ಲಿಟರ್ಜಿಕಲ್ ಸೆಂಟರ್‌ನ ನಿರ್ದೇಶಕ ಫಾ. ರೋಹಿತ್ ಡಿಕೋಸ್ಟಾ ಸಂಘಟಿಸಿದ್ದರು.

------------

4ಬಿಷಪ್‌1,2