ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯದಂಥ ಪ್ರಕರಣಗಳನ್ನು ತಡೆಯಲು ರಾಜ್ಯದ ಎಲ್ಲ 31 ಜಿಲ್ಲೆಗಳು, ಐದು ಪೊಲೀಸ್‌ ಆಯುಕ್ತಾಲಯಗಳಲ್ಲಿ ‘ಅಕ್ಕ ಪಡೆ’ ಯೋಜನೆಯನ್ನು ಒಳಾಡಳಿತ ಇಲಾಖೆ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಬೆಂಗಳೂರು : ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯದಂಥ ಪ್ರಕರಣಗಳನ್ನು ತಡೆಯಲು ರಾಜ್ಯದ ಎಲ್ಲ 31 ಜಿಲ್ಲೆಗಳು, ಐದು ಪೊಲೀಸ್‌ ಆಯುಕ್ತಾಲಯಗಳಲ್ಲಿ ‘ಅಕ್ಕ ಪಡೆ’ ಯೋಜನೆಯನ್ನು ಒಳಾಡಳಿತ ಇಲಾಖೆ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಎಚ್‌.ಕೆ.ಪಾಟೀಲ್‌, ಬಾಲ್ಯವಿವಾಹ ಪ್ರಕರಣಗಳ ತಡೆ, ಅಪ್ರಾಪ್ತ ಹೆಣ್ಣು ಮಕ್ಕಳು, ಮಹಿಳೆಯರ ಮೇಲಿನ ದೌರ್ಜನ್ಯದಂತಹ ಪ್ರಕರಣಗಳನ್ನು ತಡೆದು ರಕ್ಷಣೆ ನೀಡುವ ದೃಷ್ಟಿಯಿಂದ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ‘ಅಕ್ಕ ಪಡೆ’ ರಚಿಸಿ ಕಾರ್ಯನಿರ್ವಹಿಸಲಾಗಿತ್ತು. ಇದು ಉದ್ದೇಶಿತ ಕಾರ್ಯಗಳಲ್ಲಿ ಯಶಸ್ವಿಯಾಗಿರುವುದರಿಂದ ರಾಜ್ಯಾದ್ಯಂತ ಅಕ್ಕ ಪಡೆಯನ್ನು ವಿಸ್ತರಿಸಲಾಗುತ್ತಿದೆ ಎಂದು ತಿಳಿಸಿದರು.

ಇನ್ನಿತರ ತೀರ್ಮಾನ:

ಮೈಸೂರಿನಲ್ಲಿ ನಬಾರ್ಡ್‌ ಸಾಲದ ನೆರವಿನಿಂದ ₹20 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ, ಕಲಬುರಗಿಯಲ್ಲಿ ₹50 ಕೋಟಿ ವೆಚ್ಚದಲ್ಲಿ ಮೆಗಾ ಡೈರಿ ಸ್ಥಾಪನೆ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕು ಹಾಗೂ ಇತರೆಡೆಯ 291 ಗ್ರಾಮಗಳು, ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ 95 ಜನವಸತಿ ಪ್ರದೇಶಗಳಿಗೆ ₹66 ಕೋಟಿ ಮೊತ್ತದಲ್ಲಿ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಸೇರಿ ಒಟ್ಟಾರೆ 27 ಯೋಜನೆಗಳಿಗೆ ಸಂಪುಟ ಒಪ್ಪಿಗೆ ನೀಡಿದೆ.

 ಬೆಂಗಳೂರಿನ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆಗೆ (ಕೆಎಸ್‌ಡಿಎಲ್‌) ₹17.70 ಕೋಟಿ ಅಂದಾಜು ಮೊತ್ತದಲ್ಲಿ ಸಾಬೂನು ತಯಾರಿಸುವ ಯಂತ್ರ ಖರೀದಿ, ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಪಿಪಿಪಿ ಮಾದರಿಯಲ್ಲಿ 50 ಟಿಪಿಡಿ ಬಯೋ ಸಿಎನ್‌ಜಿ ಘಟಕವನ್ನು ₹24.96 ಕೋಟಿ ವೆಚ್ಚದಲ್ಲಿ ಸ್ಥಾಪಿಸುವ ಯೋಜನೆ ಕೈಬಿಟ್ಟು, ಮಾರುಕಟ್ಟೆಯಲ್ಲಿ ಉತ್ಪತ್ತಿಯಾಗುವ ಹಸಿ ತ್ಯಾಜ್ಯವನ್ನು ಗೇಲ್‌ ಸಂಸ್ಥೆಯವರು ಕೋಲಾರದಲ್ಲಿ ಸ್ಥಾಪಿಸುತ್ತಿರುವ 150 ಟಿಪಿಡಿ ಸಿಬಿಜಿ ಘಟಕಕ್ಕೆ ಪೂರೈಸಲು ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದರು.

ಪಿಎಂ-ಎಬಿಎಚ್‌ಐಎಂ ಯೋಜನೆಯಡಿ 2024-2026ನೇ ಸಾಲಿನಲ್ಲಿ ರಾಜ್ಯಾದ್ಯಂತ ಗ್ರಾಮೀಣ ಆರೋಗ್ಯ ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳನ್ನು 127.40 ಕೋಟಿ ರು.ಗಳ ಅಂದಾಜು ಮೊತ್ತದಲ್ಲಿ ನಿರ್ಮಿಸಲು ಕಳೆದ ಡಿಸೆಂಬರ್‌ನಲ್ಲಿ ಸರ್ಕಾರ ಮಾಡಿರುವ ಆದೇಶಕ್ಕೆ ಘಟನೋತ್ತರ ಅನುಮೋದನೆ ನೀಡಲಾಗಿದೆ. ಚಿಕ್ಕಬಳ್ಳಾಪುರದ ನಂದಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನೂತನ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಗೆ 40.00 ಕೋಟಿ ಅಂದಾಜು ಮೊತ್ತದಲ್ಲಿ ಅವಶ್ಯವಿರುವ ಯಂತ್ರೋಪಕರಣ ಮತ್ತು ಪೀಠೋಪಕರಣ ಖರೀದಿ, ಹೊಳೆನರಸೀಪುರ ಪಟ್ಟಣದಲ್ಲಿ 12 ಕೋಟಿ ರು. ವೆಚ್ಚದಲ್ಲಿ ತಾಲೂಕು ಪಂಚಾಯಿತಿ ಕಚೇರಿ ಕಟ್ಟಡ ನಿರ್ಮಾಣ ಕಾಮಗಾರಿ, ತುಮಕೂರು ಜಿಲ್ಲೆಯ ಶಿರಾ ತಾಲೂಕು ಕಲ್ಲು ಕೋಟೆ ಗ್ರಾಮದ ಸ.ನಂ.49 ರ ಏಳೂವರೆ ಗುಂಟೆ ಜಮೀನು ಮತ್ತು ರಾಯಚೂರು ಜಿಲ್ಲೆ ಸಿರವಾರ ಸೀಮಾದಲ್ಲಿ 10 ಗುಂಟೆ ಜಮೀನನ್ನು ಕಾಂಗ್ರೆಸ್ ಭವನ ನಿರ್ಮಾಣದ ಉದ್ದೇಶಕ್ಕಾಗಿ ಕಾಂಗ್ರೆಸ್ ಭವನ ಟ್ರಸ್ಟ್ ಬೆಂಗಳೂರುಗೆ ಮಂಜೂರು ಮಾಡುವ ಸಂಪುಟ ಒಪ್ಪಿದೆ ಎಂದು ತಿಳಿಸಿದರು.

ಸಂಪುಟ ಅನುಮೋದಿಸಿದ ಇತರೆ ವಿಷಯಗಳು

- ಕೆಕೆಆರ್‌ಡಿಬಿಯ 66.75 ಕೋಟಿ ರು.ನಲ್ಲಿ ಗುಲ್ಬರ್ಗಾ ವಿವಿಯಲ್ಲಿ ಜಿಟಿಟಿಸಿ ಬಹುಕೌಶಲ್ಯಾಭಿವೃದ್ಧಿ ಕೇಂದ್ರ ಸ್ಥಾಪನೆ

- ಹಳಿಯಾಳ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ 10.60 ಕೋಟಿ ರು.

- ಮಂಡ್ಯ ಕೃಷಿ ವಿಜ್ಞಾನಗಳ ವಿವಿಯಲ್ಲಿ ಆಡಳಿತ ಭವನ ನಿರ್ಮಾಣ

- ದಕ್ಷಿಣ ಕನ್ನಡ ಜಿಲ್ಲೆಯ ಬಾಳೆಪುಣಿ ಗ್ರಾಮದಲ್ಲಿ ಎಲೆಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಕೆಎಸ್‌ಆರ್‌ಟಿಸಿಗೆ ಜಮೀನು

- ಅರೆಭಾಷಿಕ ಗೌಡ ಜನಾಂಗಕ್ಕೆ ಸಾಂಸ್ಕೃತಿಕ, ಕ್ರೀಡಾ ಕೇಂದ್ರ ಸ್ಥಾಪನೆಗೆ ಸಂಪಾಜೆ ಹೋಬಳಿ ಮದ ಗ್ರಾಮದಲ್ಲಿ ಜಮೀನು