ಭಾರತವು ಹಿಂದೂ ರಾಷ್ಟ್ರವಾಗದೆ ಜಾತ್ಯತೀತ ರಾಷ್ಟ್ರವಾಗಿ ಉಳಿದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸಮಾಜದಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದ ಹಿಂದೂ ವಿರೋಧಿ ನೀತಿ ಮತ್ತು ಸಾಮಾಜಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಹಿಂದೂ ಸಮಾಜಕ್ಕೆ ಅಪಾಯವನ್ನು ತಂದೊಡ್ಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಸಂಚಾಲಕ ಡಾ. ಪ್ರಣವ್ ಮಲ್ಯ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಭಾರತವು ಹಿಂದೂ ರಾಷ್ಟ್ರವಾಗದೆ ಜಾತ್ಯತೀತ ರಾಷ್ಟ್ರವಾಗಿ ಉಳಿದಿರುವ ಹಿನ್ನೆಲೆಯಲ್ಲಿ ಪ್ರಸ್ತುತ ಸಮಾಜದಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದ ಹಿಂದೂ ವಿರೋಧಿ ನೀತಿ ಮತ್ತು ಸಾಮಾಜಿಕ ದೌರ್ಜನ್ಯಗಳು ಹೆಚ್ಚಾಗುತ್ತಿದ್ದು, ಇದು ಮುಂದಿನ ದಿನಗಳಲ್ಲಿ ಹಿಂದೂ ಸಮಾಜಕ್ಕೆ ಅಪಾಯವನ್ನು ತಂದೊಡ್ಡಲಿದೆ ಎಂದು ಹಿಂದೂ ಜನಜಾಗೃತಿ ಸಮಿತಿ ಸಂಚಾಲಕ ಡಾ. ಪ್ರಣವ್ ಮಲ್ಯ ಅಭಿಪ್ರಾಯಪಟ್ಟರು.ಸುಂಟಿಕೊಪ್ಪದ ಗುಂಡುಗುಟ್ಟಿ ಶ್ರೀ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಹಿಂದೂ ರಾಷ್ಟ್ರದ ಅವಶ್ಯಕತೆ ಕುರಿತು ಮಾತನಾಡಿದರು.
ಜಾತ್ಯತೀತ ರಾಷ್ಟ್ರದ ಹೆಸರಿನಲ್ಲಿ ಅಲ್ಪಸಂಖ್ಯಾತರ ರಕ್ಷಣೆ ಎಂದುಕೊಂಡು ಕಾನೂನು ಮತ್ತು ಸಂವಿಧಾನ ದುರುಪಯೋಗ ನಡೆಯುತ್ತಿದೆ ಎಂದು ಅವರು ಅಪಾದಿಸಿದರು. ಆಂಗ್ಲ ಶಿಕ್ಷಣ ಮತ್ತು ಅವರು ನೀಡಿದ ಸುಳ್ಳು ಇತಿಹಾಸದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರಾಗಲಿ, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರಾಗಲಿ ನಮ್ಮ ಯುವ ಜನತೆಗೆ ಆದರ್ಶರಾಗಿ ಉಳಿದಿಲ್ಲ. ಬದಲಿಗೆ ಸಿನಿಮಾ ನಟ ನಟಿಯರು ಸಾಮಾಜಿಕ ಜಾಲತಾಣಗಳಲ್ಲಿ ತೊಡಗಿಸಿಕೊಂಡಿರುವ ಮಂದಿಯನ್ನು ಅನುಕರಿಸುತ್ತಿದ್ದಾರೆ. ಧರ್ಮ ನಿರಪೇಕ್ಷಣಾ ಜಾತ್ಯತೀತೆ, ಸಮಾನ ನ್ಯಾಯ ಮರಿಚಿಕೆಯಾಗಿದೆ. ಇದರ ವಿರುದ್ಧ ಧ್ವನಿ ಎತ್ತಬೇಕಾಗಿದೆ ಎಂದು ಹೇಳಿದರು.ಮತ್ತೊಬ್ಬ ಸಂಚಾಲಕ ದೀಪಾ ತಿಲಕ್ ಮಾತನಾಡಿ, ನಾವು ಜನ್ಮದಿಂದ ಹಿಂದೂ ಆದರೆ ಸಾಲದು ನಮ್ಮ ಕೆಲಸಗಳಿಂದಲ್ಲೂ ಹಿಂದೂವಾಗಬೇಕು. ಭಾರತೀಯರು ಸರ್ವರಿಗೂ ಒಳಿತನ್ನು ಬಯಸುವ ದುರ್ಗುಣಗಳನ್ನು ದೂರ ಮಾಡಿ ಸ್ವಾತ್ವಿಕತೆಯನ್ನು ಹೊಂದಿರುವವರನ್ನು ಹಿಂದೂ ಗುರುತಿಸಿದೆ ಎಂದು ವಿಶ್ಲೇಷಿಸಿದ ಅವರು, ಯುವಜನಾಂಗ ಸನಾತನ ಧರ್ಮವನ್ನು ಮೂಢನಂಬಿಕೆಗಳು, ಹಳೆಯ ವಿಚಾರಗಳು ಎಂದು ಆಸಕ್ತಿ ತೋರುತ್ತಿಲ್ಲ. ಆದರೆ ಹಿಂದೂ ಸಂಸ್ಕೃತಿ ಆಚಾರ ವಿಚಾರಗಳು ಹುಟ್ಟಿನಿಂದ ಹಿಡಿದು ಸಾವಿನವರೆಗೆ ನಮ್ಮ ಆಚರಣೆಗಳು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿವೆ ಎಂದು ವಿಜ್ಞಾನ ಸಾಬಿತುಪಡಿಸಿವೆ. ನಮ್ಮಲ್ಲಿ ಆಧುನಿಕ ಜೀವನ ಎಲ್ಲವನ್ನು ನೀಡಿದೆ. ಆದರೆ ನಮ್ಮ ಹಿರಿಯರು ಬದುಕಿದ್ದ ಸಾರ್ಥಕ ಜೀವನವನ್ನು ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ವಿಷಾಧಿಸಿದರು.
ಮತ್ತೊಬ್ಬ ಸಂಚಾಲಕರಾದ ಕೊಲ್ಲಿರಧರ್ಮಜ ಮಾತನಾಡಿ, ನಮ್ಮಲ್ಲಿ ಸನತಾನ ಧರ್ಮ, ನಮ್ಮ ಶಿಕ್ಷಣ, ಸಾಮಾಜಿಕ ವ್ಯವಸ್ಥೆಯನ್ನು ತಿರುಚಲಾಗಿದೆ. ನಾವಿನ್ನೂ ಪರಕೀಯರ ವಶದಲ್ಲಿದ್ದೇವೆಯೇ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಹಿಂದೂ ವಿರೋಧಿ ನೀತಿ ಬಗ್ಗೆ ನಾವು ಧ್ವನಿ ಎತ್ತಬೇಕಾಗಿದೆ ಎಂದರು. ರಾಮ ಮಂದಿರದ ಹಿರಿಯ ಆರ್ಚಕ ಹಾ.ಮ. ಗಣೇಶ್ ಶರ್ಮ ವೇದಘೋಷ ನಡೆಸಿದರು. ಮಾಂಡವ್ಯ ವಿವೇಕ್ ಸ್ವಾಗತಿಸಿ, ಹಿಂದೂ ಜನಜಾಗೃತಿಯ ರಮೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಹಿಂದೂ ಜನಜಾಗೃತಿ ಸಮಿತಿಯ ವಿಜಯ ಕುಮಾರ್ ಪ್ರತಿಜ್ಞಾ ವಿಧಿ ಭೋದಿಸಿದರು.