ಶಾಸಕ ಸಿ.ಟಿ. ರವಿ ಮೇಲೆ ಹಲ್ಲೆ ಮಾಡಲೆತ್ನಿಸಿದವರ ಬಂಧಿಸಲಿ: ಶಾಸಕ ಗಾಲಿ ಜನಾರ್ದನರೆಡ್ಡಿ

| Published : Dec 21 2024, 01:18 AM IST / Updated: Dec 21 2024, 12:04 PM IST

ಶಾಸಕ ಸಿ.ಟಿ. ರವಿ ಮೇಲೆ ಹಲ್ಲೆ ಮಾಡಲೆತ್ನಿಸಿದವರ ಬಂಧಿಸಲಿ: ಶಾಸಕ ಗಾಲಿ ಜನಾರ್ದನರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಸುಸಂಸ್ಕೃತ ರಾಜಕಾರಣಿ, ಸಿ.ಟಿ. ರವಿ ಅವರ ಬಾಯಲ್ಲಿ ಅಂಥ ಮಾತು ಬರಲು ಸಾಧ್ಯವೇ ಇಲ್ಲ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.

ಕೊಪ್ಪಳ: ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರನ್ನು ಕೊಲೆ ಮಾಡುವ ಯತ್ನ ನಡೆದಿದೆ. ಮೊದಲು ಅವರನ್ನು ಬಂಧಿಸಬೇಕು. ಅದನ್ನು ಬಿಟ್ಟು ಸಿ.ಟಿ. ರವಿಯನ್ನು ಬಂಧಿಸಿದ್ದು ಅಲ್ಲದೆ, ಉಗ್ರಗಾಮಿಯಂತೆ ನಡೆಸಿಕೊಂಡಿರುವುದು ಯಾವ ನ್ಯಾಯ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಸಂಸ್ಕೃತ ರಾಜಕಾರಣಿ, ಸಿ.ಟಿ. ರವಿ ಅವರ ಬಾಯಲ್ಲಿ ಅಂಥ ಮಾತು ಬರಲು ಸಾಧ್ಯವೇ ಇಲ್ಲ. ಖುದ್ದು ಸಭಾಪತಿಯವರೇ ಅಂಥ ಯಾವುದೇ ರೆಕಾರ್ಡ್ ಆಗಿಲ್ಲ ಎಂದು ಹೇಳಿದ್ದಾರೆ. ಹೀಗಿದ್ದಾಗ್ಯೂ ಸುಳ್ಳು ಪ್ರಕರಣ ದಾಖಲು ಮಾಡಿದ್ದು ಅಲ್ಲದೆ, ಅವರನ್ನು ಪೊಲೀಸ್ ವ್ಯಾನ್‌ನಲ್ಲಿ ರಾತ್ರಿಪೂರ್ತಿ ಸುತ್ತಾಡಿಸಿದ್ದಾರೆ. ಅವರ ತಲೆಗೆ ಗಾಯವಾಗಿದೆ. ಅವರನ್ನು ಕೊಲೆ ಮಾಡುವ ಯತ್ನ ನಡೆದಿದೆ. ಇಷ್ಟಾದರೂ ಕೊಲೆ ಮಾಡಲು ಯತ್ನಿಸಿದವರನ್ನು, ವಿಧಾನಸೌಧದಲ್ಲಿ ಹಲ್ಲೆ ಮಾಡಲು ಯತ್ನಿಸಿದ ಗೂಂಡಾಗಳನ್ನು ಬಂಧಿಸುವುದನ್ನು ಬಿಟ್ಟು, ವಿಪ ಸದಸ್ಯ ಸಿ.ಟಿ. ರವಿಯನ್ನು ಬಂಧಿಸಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದರು.

ಅವರು ಕೆಟ್ಟ ಪದ ಬಳಸಿಲ್ಲ ಎಂದಿದ್ದಾರೆ. ಬಳಿಸಿದ್ದರೆ ಕಾನೂನು ರೀತಿ ಕ್ರಮವಾಗಲಿ. ನಿಯಮಾನುಸಾರ ಕ್ರಮವಾಗಲಿ. ಆದರೆ, ಸುವರ್ಣ ಸೌಧದಲ್ಲಿಯೇ ಏಕಾಏಕಿ ಹಲ್ಲೆ ಮಾಡುವ ಯತ್ನವಾದರೂ ಹೇಗೆ ನಡೆಯಿತು. ಇದೆಲ್ಲವೂ ಪೂರ್ವಯೋಜಿತ ಕೃತ್ಯ ಎನ್ನುವ ಅನುಮಾನ ಮೂಡುತ್ತದೆ. ಸಿ.ಟಿ. ರವಿ ಅವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕೊಲೆಗಡುಕ ಎನ್ನುವುದು ಎಷ್ಟು ಸರಿ. ಸಿ.ಟಿ. ರವಿ ಅವರು ಯಾವುದಾದರೂ ಕೊಲೆ ಮಾಡಿದ್ದಾರೆಯೇ ಎಂದು ಕಿಡಿಕಾರಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರ ವಿರುದ್ಧವೂ ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ಸುವರ್ಣ ಸೌಧದದಲ್ಲಿಯೇ ಹೋಗಿ ಹಲ್ಲೆ ಮಾಡುತ್ತಾರೆ ಎಂದರೆ ಪೊಲೀಸ್ ವ್ಯವಸ್ಥೆ ಏನಾಗಿದೆ. ಬಿಗಿಭದ್ರತೆ ಇಲ್ಲದಂತಾಗಿದೆ. ಹಾಗೊಂದು ವೇಳೆ ಮಾರ್ಷಲ್‌ಗಳು ಇಲ್ಲದಿದ್ದರೇ ಸಿ.ಟಿ. ರವಿ ಅವರ ಜೀವಕ್ಕೆ ಕುತ್ತು ಇತ್ತು. ಹೀಗಾಗಿ, ಇದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದ್ದು, ಉಗ್ರ ಹೋರಾಟ ಮಾಡುತ್ತೇವೆ ಎಂದರು.