ಸಾರಾಂಶ
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಬದುಕಿನ ನಿಜವಾದ ಸತ್ಯಗಳನ್ನು ಹೊರಹಾಕಿದವರೆಂದರೆ ನಮ್ಮ ಜನಪದರು. ಅವರು ಮನುಷ್ಯ ಬದುಕಿನ ಸುತ್ತ ತಮ್ಮ ಅಸಂಖ್ಯಾತ ಹಾಡುಗಳನ್ನು ಬರೆದು ಆ ಮೂಲಕ ಮೌಲ್ಯಯುತವಾಗಿ ಬೋಧಿಸಿದರು. ಹೀಗಾಗಿ ಅವರ ಸಾಹಿತ್ಯ ನಾಲಿಗೆಯಿಂದ ನಾಲಿಗೆ ಮೇಲೆ ಸದಾ ಜೀವಂತವಾಗಿದೆ ಎಂದು ಮಾನ್ವಿ ಉಪನ್ಯಾಸಕ ರಮೇಶಬಾಬು ಯಾಳಗಿ ಹೇಳಿದರು.ಪಟ್ಟಣದಲ್ಲಿ ಜಗದ್ಗುರು ಗುರುಸಿದ್ದೇಶ್ವರ ಶ್ರೀಗಳ 39ನೇ ಪುಣ್ಯಾರಾಧನೆ ಶರಣ ಸಂಗಮ ಸಮಾರಂಭ, ಗುರುಬಸವ ದೇವರ ಪಟ್ಟಾಭಿಷೇಕ ಮಹೋತ್ಸವ ಹಾಗೂ ಗುರುಸಿದ್ದೇಶ್ವರ ವಿದ್ಯಾ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದ ವಿಶೇಷ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಮಾತನಾಡಿ, ನಮ್ಮ ಜನಪದರಿಗೆ ಭೂಮಿ ಅಂದರೆ ಸರ್ವಸ್ವ. ಬೆಳಗಾಗಿ ನಾವೆದ್ದು ಭೂಮಿ ತಾಯಿಯನ್ನು ನೆನೆಯುತ್ತೇವೆ ಎಂದು ಹೇಳಿದ್ದಾರೆ. ಒಂದು ತ್ರಿಪದಿಯಲ್ಲಿ ನಮ್ಮ ಜನಪದರು ಬೆಳಗಾಗಿ ನಾವೆದ್ದು ಎಳ್ಳು ಜೀರಿಗೆ ಬೆಳೆಯೋಳೆ ಅಂತ ಹೇಳಿದರು? ಈ ತ್ರಿಪದಿ ಹೇಳುವಾಗ, ಹಾಡುವಾಗ ಕಾಡುವ ಪ್ರಶ್ನೆ ಏನೆಂದರೆ, ನಮ್ಮ ಜನಪದರು ತಮ್ಮ ಹಾಡಿನಲ್ಲಿ ಎಳ್ಳು ಜೀರಿಗೆ ಬೆಳೆಯೋಳೆ ಅಂತ ಯಾಕೆ ಹೇಳಿದಳು? ಎಳ್ಳು ಜೀರಿಗೆಯನ್ನೇ ಯಾಕೆ ಹೇಳಿದರು? ಜೋಳ, ಸಜ್ಜೆ, ಭತ್ತ ಬೆಳೆಯೋಳೆ ಅಂತ ಯಾಕೆ ಹೇಳಲಿಲ್ಲ. ನನಗೆ ಕಾಡುವ ಪ್ರಶ್ನೆ ಇದು. ಈ ತ್ರಿಪದಿಯನ್ನು ಅವಲೋಕಿಸಿದಾಗ, ಇದದರರ್ಥ ಇಷ್ಟೆ, ಯಾರಾದರೂ ಮರಣ ಹೊಂದಿದರೆ ಎಳ್ಳು ಹಾಕುತ್ತಿದ್ದರಂತೆ, ಗರ್ಭಿಣಿ ಮಹಿಳೆಗೆ ಹೆರಿಗೆ ಸಲಿಸಾಗಲಿ ಅಂತ ಜೀರಿಗೆ ಕುಟ್ಟು ನೀರಿನಲ್ಲಿ ಕೂಡಿಸಿ ಗರ್ಭಿಣಿಗೆ ಕುಡಿಸುತ್ತಿದ್ದರಂತೆ. ಹೀಗಾಗಿ ಎಳ್ಳು ಸಾವಿನ ಸಂಕೇತ. ಜೀರಿಗೆ ಹುಟ್ಟಿನ ಸಂಕೇತ. ಜನಪದ ಗರತಿ ಭೂಮಿ ತಾಯಿಯನ್ನು ಪೂಜ್ಯನೀಯ ಭಾವದಿಂದ ನಿತ್ಯ ಬೆಳಗಾಗುತ್ತಲೇ ನೆನೆಯುತ್ತಿದ್ದಳು. ನಮ್ಮ ಜನಪದ ಗರತಿಯರು ಯಾವ ವಿಶ್ವ ವಿದ್ಯಾಲಯದಲ್ಲಿ ಓದಿದವರಲ್ಲ. ಪ್ರಶಸ್ತಿ, ಪುರಸ್ಕಾರಕ್ಕಾಗಿ ಬರೆದವರಲ್ಲ. ಅವರ ಬರವಣಿಗೆಯಲ್ಲಿ ಬದುಕಿನ ಸಂದೇಶಗಳು, ಮೌಲ್ಯಗಳು, ಬದುಕಿಗೆ ಸಂಬಂಧಿಸಿದ ವಿಧಾನಗಳ ಹಿನ್ನೆಲೆಯೆ ಇರುತ್ತಿತ್ತು. ಹೀಗಾಗಿ ನಮ್ಮ ಜನಪದರ ಹಾಡುಗಳು ನೀತಿ ಬೋಧಕಗಳಾಗಿದ್ದವು. ನಮ್ಮ ಜನಪದ ಗರತಿಯರು ನೀತಿ ಬೋಧಕರಾಗಿದ್ದರು ಎಂದು ಹೇಳಿದರು.
ರಬಕವಿಯ ಬ್ರಹ್ಮಾನಂದ ಆಶ್ರಮದ ಗುರುಸಿದ್ದ ಶ್ರೀಗಳು ಅಧ್ಯಕ್ಷತೆವಹಿಸಿ ಮಾತನಾಡಿ, ಜನಪದ ಸಾಹಿತ್ಯ ಅತ್ಯಂತ ಪ್ರಾಚೀನ ಸಾಹಿತ್ಯ. ನಮ್ಮ ಜನಪದರು ತಮ್ಮ ಬದುಕಿನ ನೋವು ನಲಿವುಗಳನ್ನು ಎಳೆಎಳೆಯಾಗಿ ತಮ್ಮ ಹಾಡುಗಳ ಮೂಲಕ ಹೇಳಿ ಜನರಿಗೆ ಹತ್ತಿರವಾದರು. ಅವರ ಮಾತಿನಲ್ಲಿ ನೀತಿ ಇತ್ತು. ಆದರೆ ಇಂದು ಜಾಗತೀಕರಣದ ಜಗತ್ತಿನಲ್ಲಿ ಜನಪದ ನಶಿಸಿಹೋಗುತ್ತಿದೆ. ಆಧುನಿಕತೆಯ ದಿನಮಾನದಲ್ಲಿ ಇಂತಹ ವೇದಿಕೆಗಳ ಮೂಲಕ ಅವುಗಳ ಮರು ಓದು, ಅವಲೋಕನ, ಚರ್ಚೆ, ಅನುಸಂಧಾನ ಅಗತ್ಯ ಎಂದರು.ಕೂಡಲ ಸಂಗಮದ ಬಸವ ಧರ್ಮ ಪೀಠದ ಗಂಗಾ ಮಾತಾಜಿ, ಗದಗ ಅಸುಂಡಿ ಬ್ರಹ್ಮ ವಿದ್ಯಾಶ್ರಮದ ನೀಲಮ್ಮ ತಾಯಿಯವರು, ಗುರುಸಿದ್ದೇಶ್ವರ ಮಠದ ಬಸವರಾಜ ಶ್ರೀಗಳು, ಗುರುಬಸವ ದೇವರು ವೇದಿಕೆ ಮೇಲಿದ್ದರು.