15 ದಿನದೊಳಗೆ ಗೋಡೌನ್ ಕಾಮಗಾರಿ ಪೂರ್ಣಗೊಳಿಸಿ

| Published : Dec 21 2024, 01:18 AM IST

ಸಾರಾಂಶ

ಹೊಸದುರ್ಗ: 15 ದಿನದೊಳಗೆ ಗೋಡೋನ್‌ ಕಾಮಗಾರಿ ಪೂರ್ಣಗೊಳಿಸಿ ರಾಗಿ ಖರೀದಿ ಮಾಡಲು ಅನುಕೂಲ ಮಾಡಿಕೊಡಿ ಇಲ್ಲವಾದರೆ ಮುಂದಾಗುವ ತೊಂದರೆಗಳಿಗೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಸ್ಥಳದಲ್ಲಿದ್ದ ಗೋಡೋನ್‌ ಕಾಮಗಾರಿ ಎಂಜಿನಿಯರ್‌ ರುದ್ರೇಶ್‌ ನಾಯ್ಕ ಅವರಿಗೆ ಎಚ್ಚರಿಸಿದರು.

ಹೊಸದುರ್ಗ: 15 ದಿನದೊಳಗೆ ಗೋಡೋನ್‌ ಕಾಮಗಾರಿ ಪೂರ್ಣಗೊಳಿಸಿ ರಾಗಿ ಖರೀದಿ ಮಾಡಲು ಅನುಕೂಲ ಮಾಡಿಕೊಡಿ ಇಲ್ಲವಾದರೆ ಮುಂದಾಗುವ ತೊಂದರೆಗಳಿಗೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡುತ್ತೇನೆ ಎಂದು ಶಾಸಕ ಬಿ.ಜಿ.ಗೋವಿಂದಪ್ಪ ಸ್ಥಳದಲ್ಲಿದ್ದ ಗೋಡೋನ್‌ ಕಾಮಗಾರಿ ಎಂಜಿನಿಯರ್‌ ರುದ್ರೇಶ್‌ ನಾಯ್ಕ ಅವರಿಗೆ ಎಚ್ಚರಿಸಿದರು.

ಶುಕ್ರವಾರ ಶ್ರೀರಾಂಪುರದ ಉಪ ಮಾರುಕಟ್ಟೆ ಆವರಣದಲ್ಲಿ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಗಾಗಿ ನಡೆಸಲಾಗುತ್ತಿರುವ ನೋಂದಣಿ ಪ್ರಕ್ರಿಯೆ ವೀಕ್ಷಿಸಿ ನಂತರ ಗೋಡೋನ್‌ ಹಾಗೂ ವೇ ಬ್ರಿಡ್ಜ್‌ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿ ಅಧಿಕಾರಿಗಳಿಗೆ ಜವಾಬ್ದಾರಿಯಿಂದ ಕೆಲಸ ಮಾಡುವಂತೆ ಸೂಚಿಸಿದರು.

ಕಾಮಗಾರಿಯ ಪರಿಸ್ಥೀತಿ ಗಮನಿಸಿದರೆ ಪೂರ್ಣ ಪ್ರಮಾಣದಲ್ಲಿ ಕಾಮಗಾರಿ ಮುಗಿಸಲು ಸಾಧ್ಯವಿಲ್ಲ. ಕಡೆ ಪಕ್ಷ ಮಳೆ ಬಂದರೆ ದಾಸ್ತಾನು ನೆನೆಯದಂತೆ ಮೇಲ್ಛಾವಣಿ ಹಾಕಿಸಿ, ಡೋರ್‌ ಅಳವಡಿಸಿ ನಂತರ ಬೇಕಾದರೆ ಉಳಿದ ಕೆಲಸವನ್ನು ಮಾಡುವಿರಂತೆ ಆಫೀಸ್‌ ಸಮಯದಂತೆ ಕೆಲಸ ಮಾಡಬೇಡಿ ಹಗಲು, ರಾತ್ರಿ ಪಾಳಿಯಂತೆ ಕೆಲಸ ಮಾಡಿಸಿ ಎಂದು ಗುತ್ತಿಗೆದಾರರಿಗೆ ತಿಳಿಸಿದರು.

ನಂತರ ನೋಂದಣಿ ಕೇಂದ್ರಕ್ಕೆ ಬಂದ ಅವರು, ರೈತರಿಗೆ ತೊಂದರೆಯಾಗದಂತೆ ಕೇವಲ ಒಂದು ಕಂಪ್ಯೂಟರ್‌ ನಿಂದ ಮಾತ್ರ ಮಾಡದೆ 2-3 ಯಂತ್ರಗಳನ್ನು ಬಳಸಿಕೊಂಡು ನಿಗದಿತ ಅವಧಿಯೊಳಗೆ ಎಲ್ಲಾ ರೈತರ ನೋಂದಣಿ ಮಾಡುವಂತೆ ಸೂಚಿಸಿದ ಅವರು, ಸರತಿ ಸಾಲಿನಲ್ಲಿ ನಿಲ್ಲುವ ರೈತರಿಗೆ ನೆರಳು ಹಾಗೂ ನೀರಿನ ವ್ಯವಸ್ಥೆ ಮಾಡುವಂತೆ ಮಾರುಕಟ್ಟೆ ಕಾರ್ಯದರ್ಶಿ ಗೌತಮ್‌ಗೆ ಸೂಚಿಸಿದರು.

30 ರೊಳಗೆ ನೋಂದಣಿ ಸಾಧ್ಯವಿಲ್ಲ, ನನಗೆ ಈ ಕೆಲಸ ಗೊತ್ತಿಲ್ಲ:

ಶಾಸಕರು ಮಾರುಕಟ್ಟೆಗೆ ಭೇಟಿ ನೀಡಿ ರೈತರಿಗೆ ಅನುಕೂಲವಾಗುವ ಮಾತುಗಳನ್ನಾಡುತ್ತಿದ್ದರೆ ಇತ್ತ ನೋಂದಣಿ ಮಾಡಿಕೊಳ್ಳಲು ಆಹಾರ ನಿಗಮದಿಂದ ಆಗಮಿಸಿದ್ದ ಅಧಿಕಾರಿ ಗಣೇಶ್‌ ಎಂಬಾತ 30 ರೊಳಗೆ ಎಲ್ಲಾ ರೈತರ ನೋಂದಣಿ ಸಾಧ್ಯವಿಲ್ಲ, 2-3 ಯಂತ್ರ ಬಳಸಿಕೊಳ್ಳುವುದು ಸುಲಭವಲ್ಲ ಅದಕ್ಕೆ ಆದ ರೀತಿ ರಿವಾಜುಗಳಿವೆ ಅರ್ಜೆಂಟಾಗಿ ಮಾಡಿ ಎಂದರೆ ನನಗೆ ಈ ಬಗ್ಗೆ ಕೆಲಸವೇ ಗೊತ್ತಿಲ್ಲ. ನಾನು ಕಚೇರಿಯಲ್ಲಿದ್ದೆ ಅಂತವನನ್ನು ತಂದು ಇಲ್ಲಿಗೆ ಹಾಕಿದ್ದಾರೆ. ಶಾಸಕರ ಬಲವಂತಕ್ಕೆ ನಾನು ಬಂದಿದ್ದೇನೆ. ನನಗೆ ತಿಳಿದಂತೆಯೇ ನಾನು ಕೆಲಸ ಮಾಡುತ್ತೇನೆ. ನಿಮಗೆ ತೊಂದರೆಯಾದರೆ ನನ್ನನ್ನು ಬೇರೆಡೆಗೆ ವರ್ಗಾವಣೆ ಮಾಡಿಸಿ ಎಂದು ರೈತರೊಂದಿಗೆ ಉದ್ದಟತನದ ಮಾತುಗಳನ್ನಾಡುತ್ತಿದ್ದುದು ಕಂಡು ಬಂತು.

ಖರೀದಿ ಪ್ರಕ್ರಿಯೇ ಬಿಗಿ ಮಾಡಿದ್ದಕ್ಕೆ ಈ ರೀತಿಯ ವರ್ತನೆ:

ಖರೀದಿ ಅಧಿಕಾರಿಯ ದುರ್ವರ್ತನೆಯ ಬಗ್ಗೆ ಮಾರುಕಟ್ಟೆ ಆವರಣದಲ್ಲಿಯೇ ಇದ್ದ ಶಾಸಕರ ಗಮನಕ್ಕೆ ಮಾದ್ಯಮದವರು ತಂದಾಗ, ಹಿಂದೆ ಖರೀದಿ ಪ್ರಕ್ರಿಯೆಯಲ್ಲಿ ಖರೀದಿ ಮಾಡಲು ಬಂದವರು ರೈತರ ಹಣ ತಿಂದು ತೇಗಿದ್ದಾರೆ. ನಮ್ಮ ತಾಲೂಕಿನ 150ಕ್ಕೂ ಹೆಚ್ಚು ರೈತರಿಗೆ ಇನ್ನೂ ರಾಗಿ ಹಣ ಕೊಡಲು ಆಗಿಲ್ಲ. ಹಾಗಾಗಿ ಕಳೆದ ಸಾಲಿನಿಂದ ಖರೀದಿ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಮಾಡುವಂತೆ ನಿಗಮದ ಅಧ್ಯಕ್ಷನಾಗಿ ಸೂಚಿಸಿದ್ದೇನೆ. ಹಾಗಾಗಿ ಈ ರೀತಿಯ ಮಾತುಗಳು ಅಧಿಕಾರಿಗಳಿಂದ ಬರುತ್ತವೆ. ರೈತರಿಗೆ ಏನೇ ತೊಂದರೆಯಾದರೂ ನಾನೇ ಮುಂದೆನಿಂತು ಬಗೆಹರಿಸುತ್ತೇನೆ. ಈ ಬಗ್ಗೆ ರೈತರಿಗೆ ಯಾವುದೇ ಗೊಂದಲ ಬೇಡ ಎಂದು ಶಾಸಕರು ತಿಳಿಸಿದರು.

ಸ್ಥಳದಲ್ಲಿಯೇ ದೂರವಾಣಿ ಮೂಲಕ ಆಹಾರ ನಿಗಮದ ಎಂಡಿ ಚಂದ್ರಕಾಂತ್‌ ಆವರಿಗೆ ಕರೆ ಮಾಡಿ ಹೊಸದುರ್ಗ ಮತ್ತು ಶ್ರೀರಾಂಪುರದ ನೋಂದಣಿ ಕೇಂದ್ರದಲ್ಲಿ 2-3 ಕೌಂಟರ್‌ಗಳನ್ನು ತೆರೆಯುವಂತೆ ಹಾಗೆಯೇ ಇಲ್ಲಿಗೆ ಬಂದಿರುವ ಅಧಿಕಾರಿಗಳಿಗೆ ರೈತರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ತಿಳಿಸಲು ಸೂಚಿಸಿದರು.