ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ತಾಲೂಕಿನ ಮುಳಸಾವಳಗಿ ಗ್ರಾಮ ಪಂಚಾಯತಿ ಪಿಡಿಒ ಕರ್ತವ್ಯ ನಿರ್ವಹಣೆಗೆ ಸ್ವತಃ ಪಂಚಾಯತಿ ಸದಸ್ಯನೊಬ್ಬ ತಡೆಯೊಡ್ಡಿ ಹಲ್ಲೆಗೆ ಯತ್ನಿಸಿದ ಬಗ್ಗೆ ಪಿಡಿಒ ನೀಡಿದ ದೂರಿನಂತೆ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತಾಲೂಕಿನ ಮುಳಸಾವಳಗಿ ಗ್ರಾಪಂನಲ್ಲಿ ಸೆ.17ರಂದು ಪಿಡಿಒ ಗೊಲ್ಲಾಳಪ್ಪ ಕನ್ನೂಳ್ಳಿ ಕರ್ತವ್ಯದಲ್ಲಿ ಫೈಲ್‌ಗಳನ್ನು ಪರಿಶೀಲನೆ ನಡೆಸುವ ಸಮಯದಲ್ಲಿ ಗ್ರಾಪಂ ಸದಸ್ಯ ರಾಜು ಮೋತಿಲಾಲ ರಾಠೋಡ ವಿನಾಕಾರಣ ತಕರಾರು ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆಗೆ ಯತ್ನಿಸಿದ್ದಾರೆ. ಮಾತ್ರವಲ್ಲ, ಸರ್ಕಾರಿ ಕೆಲಸ ಮಾಡಬೇಡ. ಕುಂಟ..ನ..ಮ...(ಇಲ್ಲಿ ಪದ ಬಳಸುವಂತಿಲ್ಲ) ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿ ಕೈಯಿಂದ ಭುಜಕ್ಕೆ ಹೊಡೆದಿದ್ದು, ಭುಜಕ್ಕೆ ಪೆಟ್ಟಾಗಿದೆ ಎಂದು ಪಿಡಿಒ ದೂರಿನಲ್ಲಿ ತಿಳಿಸಿದ್ದಾರೆ.ಜತೆಗೆ ಅಲ್ಲಿಯೇ ಇದ್ದ ಗುರುರಾಜ ಆಕಳವಾಡಿ ಅವರು ಜಗಳ ಬಿಡಿಸಲು ಬಂದಾಗ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಕ್ಕೆ ಅಲ್ಲೆ ಇದ್ದ ಸದಸ್ಯರು, ಗ್ರಾಮಸ್ಥರು ಸಾಕ್ಷಿಯಾಗಿದ್ದಾರೆ ಎಂದು ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ ಎಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿ ಗ್ರಾಪಂ ಸದಸ್ಯ ರಾಜು ರಾಠೋಡ ಕೂಡ ಪೊಲೀಸರಿಗೆ ಜಾತಿ ನಿಂದನೆ ದೂರು ನೀಡಿದ್ದಾರೆ. ಗ್ರಾಮ ಪಂಚಾಯತಿ ಸದಸ್ಯ ರಾಜು ಮೋತಿಲಾಲ ರಾಠೋಡ ಅವರು ಕೃಷಿ ಹೊಂಡ ನಿರ್ಮಾಣ ಮಾಡಿದ ಕುರಿತು ಬಿಲ್ ಮಾಡಲು ಕೇಳಿದಾಗ ಪಿಡಿಒ ಗೊಲ್ಲಾಳಪ್ಪ ಕನ್ನೊಳ್ಳಿ ಅವರು ನೀನು ಒಂದೇ ಕೃಷಿ ಹೊಂಡ ಮಾಡಿದ್ದು, ಇನ್ನೊಂದು ಮಾಡಿಲ್ಲ ಎಂದಿದ್ದಾರೆ. ಆಗ ನನ್ನ ಕೆಲಸ ಎಷ್ಟು ಮಾಡಿದ್ದೇನೆ ಅಷ್ಟು ಬಿಲ್ ಮಾಡು ಎಂದು ಮಾತಿಗೆ ಮಾತು ಬೆಳೆದಾಗ ಅಧ್ಯಕ್ಷರ ಮಗನಾದ ಗುರುರಾಜ ಆಕಳವಾಡಿ ಅವರನ್ನು ಫೋನ್ ಮೂಲಕ ಕರೆಸಿ ನನ್ನ ಮೇಲೆ ಹಲ್ಲೆ ಮಾಡಿಸಿದ್ದಾರೆ. ಗುರುರಾಜ ಆಕಳವಾಡಿ ನನ್ನ ಮೇಲೆ ಹಲ್ಲೆ ನಡೆಸಿದ ಪರಿಣಾಮ ಎದೆಗೆ ಪೆಟ್ಟಾಗಿದ್ದು, ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ಇಬ್ಬರು ಜಾತಿ ನಿಂದನೆ ಮಾಡಿದ್ದಾರೆ ಎಂದು ಇಬ್ಬರ ಮೇಲೆ ಸದಸ್ಯ ರಾಜು ರಾಠೋಡ ಪ್ರತಿದೂರು ದಾಖಲಿಸಿದ್ದಾರೆ.