ಸಾರಾಂಶ
ಮುಂಗಾರು ಮಳೆ ವೈಫಲ್ಯದಿಂದ ತಾಲೂಕಿನ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಅಲ್ಪಾವಧಿ ಬೆಳೆಗಳು ಒಣಗುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆಸಿ. ಹೊರಕೇರಪ್ಪ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಹಿರಿಯೂರು
ಮುಂಗಾರು ಮಳೆ ವೈಫಲ್ಯದಿಂದ ತಾಲೂಕಿನ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಅಲ್ಪಾವಧಿ ಬೆಳೆಗಳು ಒಣಗುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಬೆಳೆ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡುವ ಜತೆಗೆ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆಸಿ. ಹೊರಕೇರಪ್ಪ ಒತ್ತಾಯಿಸಿದರು.ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಮಾಸಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ತಾಲೂಕಿನಲ್ಲಿ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ, ರಾಗಿ, ಜೋಳ, ನವಣೆ, ಸಜ್ಜೆ ಮುಂತಾದ ಅಲ್ಪಾವಧಿ ಬೆಳೆಗಳು ಸಕಾಲಕ್ಕೆ ಮಳೆ ಬಾರದೆ ಒಣಗುತ್ತಿವೆ. ರೈತರು ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ ಬೆಸ್ಕಾಂ ಇಲಾಖೆಗೆ ಹಣ ಪಾವತಿಸಿ ವರ್ಷಗಳೇ ಕಳೆದು ಹೋದರೂ ಸಹ ಇದುವರೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಇಲಾಖೆಯಿಂದ ಸಾಧ್ಯವಾಗಿಲ್ಲವೆಂದು ದೂರಿದರು.ರೈತರು ಒಂದಾದ ಮೇಲೊಂದು ಸಂಕಷ್ಟ ಎದುರಿಸುವುದೇ ಆಗಿದೆ. ಬೆಸ್ಕಾಂ ಇಲಾಖೆ ಕೂಡಲೇ ಅಕ್ರಮ ಸಕ್ರಮ ಯೋಜನೆ ಅಡಿ ಹಣ ಪಾವತಿಸಿರುವ ಎಲ್ಲಾ ರೈತರಿಗೂ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ವಿಳಂಬ ಧೋರಣೆ ಅನುಸರಿಸಿದ್ದಲ್ಲಿ ಇಲಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಬಿಒ ಶಿವಕುಮಾರ್ ಮಾತನಾಡಿ, ಕೃಷಿಗೆ ಸಂಬಂಧಪಟ್ಟ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗಳು ರೈತರಿಗೆ ತಲುಪಿಸಬೇಕು. ಮಾಹಿತಿ ಕೊರತೆಯಿಂದ ಎಷ್ಟೋ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ ತಲುಪುವುದೇ ಇಲ್ಲ. ಬೆಸ್ಕಾo ನವರು ರೈತರ ಕೆಲಸ ಕಾರ್ಯಗಳನ್ನು ತುರ್ತಾಗಿ ಮಾಡಿಕೊಡುವತ್ತ ಗಮನ ನೀಡಬೇಕು. ಕಚೇರಿಗಳಿಗೆ ರೈತರನ್ನು ಅಲೆಸುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ದಸ್ತಗೀರ್ ಸಾಬ್, ಯುವ ಘಟಕದ ಅಧ್ಯಕ್ಷ ಚೇತನ್ ಯಳನಾಡು, ಎಂಆರ್ ಪುಟ್ಟಸ್ವಾಮಿ, ಬಿ.ಡಿ ಶ್ರೀನಿವಾಸ್, ನಿತ್ಯಶ್ರೀ, ಉಪಾಧ್ಯಕ್ಷ ಮೇಟಿಕುರ್ಕೆ ತಿಪ್ಪೇಸ್ವಾಮಿ, ಎಚ್.ಆರ್ ತಿಪ್ಪೇಸ್ವಾಮಿ, ರವೀಶ್, ಸತ್ಯನಾರಾಯಣ, ಉಮಾಪತಿ, ಮರದಮುತ್ತು , ಜಯಣ್ಣ , ಎಚ್. ರಂಗಸ್ವಾಮಿ, ದಾದಾಪೀರ್, ಶಿವಸ್ವಾಮಿ, ಭಾಷಾ ಸಾಬ್, ಶಿವಲಿಂಗಪ್ಪ, ಮುನಿಸ್ವಾಮಿ, ಸಿದ್ದಪ್ಪ ಮುಂತಾದವರು ಹಾಜರಿದ್ದರು.