ಚಿಕ್ಕಬಳ್ಳಾಪುರದಲ್ಲಿ ಖತರ್ನಾಕ್ ಎಟಿಎಂ ಕಳ್ಳನ ಬಂಧನ

| Published : Aug 07 2025, 12:45 AM IST

ಚಿಕ್ಕಬಳ್ಳಾಪುರದಲ್ಲಿ ಖತರ್ನಾಕ್ ಎಟಿಎಂ ಕಳ್ಳನ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಕಳ್ಳ ಎಟಿಎಂನಿಂದ ಹಣ ಹೊರಬರುವ ಜಾಗಕ್ಕೆ ಒಂದು ಸಾಧನವನ್ನು ಅಳವಡಿಸಿದ್ದ. ಗ್ರಾಹಕರು ಹಣ ಡ್ರಾ ಮಾಡಿದಾಗ, ನೋಟುಗಳು ಹೊರಬರುವ ಬದಲು ಆ ಸಾಧನದೊಳಗೆ ಸಿಲುಕಿಕೊಳ್ಳುತ್ತಿದ್ದವು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಎಟಿಎಂ ಯಂತ್ರಕ್ಕೆ ವಿಶೇಷ ಸಾಧನ ಅಳವಡಿಸಿ, ಗ್ರಾಹಕರ ಹಣವನ್ನು ದೋಚುತ್ತಿದ್ದ ಖತರ್ನಾಕ್ ಎಟಿಎಂ ಕಳ್ಳನನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ತ್ರಿಪುರ ಮೂಲದ 20 ವರ್ಷದ ಯುವಕ ನಿಯಾಜ್ ಉದ್ದೀನ್ ಎಂದು ಗುರ್ತಿಸಲಾಗಿದೆ.

ನಗರದ ಬಿ.ಬಿ. ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಕಳೆದ ಏಪ್ರಿಲ್ 11 ರ ರಾತ್ರಿ ಕಳ್ಳತನ ನಡೆದಿತ್ತು. ಕಳ್ಳ ಎಟಿಎಂನಿಂದ ಹಣ ಹೊರಬರುವ ಜಾಗಕ್ಕೆ ಒಂದು ಸಾಧನವನ್ನು ಅಳವಡಿಸಿದ್ದ. ಗ್ರಾಹಕರು ಹಣ ಡ್ರಾ ಮಾಡಿದಾಗ, ನೋಟುಗಳು ಹೊರಬರುವ ಬದಲು ಆ ಸಾಧನದೊಳಗೆ ಸಿಲುಕಿಕೊಳ್ಳುತ್ತಿದ್ದವು. ಹಣ ಬರಲಿಲ್ಲವೆಂದು ತಿಳಿದು ಗ್ರಾಹಕರು ಅಲ್ಲಿಂದ ಹೊರಟುಹೋದ ನಂತರ, ಕಳ್ಳ ಎಟಿಎಂಗೆ ಬಂದು ಸಾಧನದಲ್ಲಿ ಸಿಕ್ಕಿಹಾಕಿಕೊಂಡಿದ್ದ ಅಂದಾಜು 2 ಲಕ್ಷ ರುಪಾಯಿ ಹಣವನ್ನು ದೋಚಿ ಪರಾರಿಯಾಗಿದ್ದ. ಈ ಕುರಿತು ಕೆನರಾ ಬ್ಯಾಂಕಿನ ಮುಖ್ಯ ಶಾಖಾ ವ್ಯವಸ್ಥಾಪಕ ಬಿ.ಸುಧೀರ್ ಎಸ್ ರಾವ್ ದೂರು ನೀಡಿದ್ದರು.

ಕೆನರಾ ಬ್ಯಾಂಕ್ ಎಟಿಎಂ ಕಳ್ಳತನ ಪ್ರಕರಣದ ದೂರಿನ ಅನ್ವಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ.ಜಗನ್ನಾಥ್ ರಾಯ್, ಪೊಲೀಸ್ ಉಪಾಧೀಕ್ಷಕ ಎಸ್.ಶಿವಕುಮಾರ್ ರ ಮಾರ್ಗದರ್ಶನದಲ್ಲಿ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಎಂ.ಮಂಜುನಾಥ ನೇತೃತ್ವದಲ್ಲಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ಪಿ.ಎಸ್.ಐ ಅಮರ್ ಎಸ್.ಎಂ., ಮಹಿಳಾ ಠಾಣಾ ಪಿ.ಎಸ್.ಐ ಬಿ.ರತ್ನಬಾಯಿ , ಸಿಬ್ಬಂದಿ ಲೋಕೇಶ್, ಪಕ್ಕೀರಜ್ಞ ಗೊಂದಿ, ಮಧುಸೂದನ್, ಆಯುಬ್ ಮೌಲಾ, ಲಕ್ಷ್ಮಣ್ ಹಾಗೂ ತಾಂತ್ರಿಕ ಸಿಬ್ಬಂದಿ ರವೀಂದ್ರ, ಮುನಿಕೃಷ್ಣರವರ ವಿಶೇಷ ತಂಡ ರಚಿಸಿ ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ತನಿಖೆ ಕೈಗೊಂಡಾಗ, ಆರೋಪಿಯು ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿರುವುದು ಪತ್ತೆಯಾಗಿತ್ತು. ವಿಶೇಷ ತಂಡ ಬೆಂಗಳೂರಿಗೆ ತೆರಳಿ, ಬೆಂಗಳೂರಿನ ಬೊಮ್ಮನಹಳ್ಳಿ, ಎಸ್.ಎನ್ ರಾಜ್ ಅಪಾರ್ಟ್ ಮೆಂಟ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದ ತ್ರಿಪುರ ಮೂಲದ ನಿಯಾಜ್ ಉದ್ದೀನ್ ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.