ಸಾರಾಂಶ
ರಸಗೊಬ್ಬರಕ್ಕಾಗಿ ಅನ್ನದಾತರ ಪರದಾಟ ಇನ್ನೂ ನಿಂತಿಲ್ಲ. ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯ ಕೂಡ ಪೂರ್ಣಗೊಂಡಿದೆ. ರೈತರು ಒಂದನೇ ಗೊಬ್ಬರ ಹಾಕಿ, ಎರಡನೇ ಗೊಬ್ಬರ ಅಥವಾ ಮೂರನೇ ಗೊಬ್ಬರ ಹಾಕಲು ಸಿದ್ಧತೆಯಲ್ಲಿರುವಾಗಲೇ ಯೂರಿಯಾ ರಸಗೊಬ್ಬರ ಸಿಗದೆ ಅಂಗಡಿ ಮತ್ತು ಕೃಷಿ ಇಲಾಖೆ ಹಾಗೂ ಎಪಿಎಂಸಿಗಳ ಮುಂದೆ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಅಂಗಡಿಗಳೆದುರು ಕಿಕ್ಕಿರಿದು ನಿಂತ ರೈತಸಮೂಹ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಈ ವೇಳೆ ರೈತರೊಬ್ಬರಿಗೆ ಪೊಲೀಸ್ ಬೀಸಿದ ಲಾಠಿ ಕೆಲಕಾಲ ಅನ್ನದಾತ ಆಕ್ರೋಶಕ್ಕೆ ಕಾರಣವಾಗಿತ್ತು.
ಕನ್ನಡಪ್ರಭ ವಾರ್ತೆ ಸುರಪುರ
ರಸಗೊಬ್ಬರಕ್ಕಾಗಿ ಅನ್ನದಾತರ ಪರದಾಟ ಇನ್ನೂ ನಿಂತಿಲ್ಲ. ಪ್ರಸಕ್ತ ಸಾಲಿನಲ್ಲಿ ನಿರೀಕ್ಷೆಗೂ ಮೀರಿ ಉತ್ತಮ ಮಳೆಯಾಗಿದ್ದು, ಬಿತ್ತನೆ ಕಾರ್ಯ ಕೂಡ ಪೂರ್ಣಗೊಂಡಿದೆ. ರೈತರು ಒಂದನೇ ಗೊಬ್ಬರ ಹಾಕಿ, ಎರಡನೇ ಗೊಬ್ಬರ ಅಥವಾ ಮೂರನೇ ಗೊಬ್ಬರ ಹಾಕಲು ಸಿದ್ಧತೆಯಲ್ಲಿರುವಾಗಲೇ ಯೂರಿಯಾ ರಸಗೊಬ್ಬರ ಸಿಗದೆ ಅಂಗಡಿ ಮತ್ತು ಕೃಷಿ ಇಲಾಖೆ ಹಾಗೂ ಎಪಿಎಂಸಿಗಳ ಮುಂದೆ ನಿಲ್ಲುವಂತಹ ಪರಿಸ್ಥಿತಿ ಎದುರಾಗಿದೆ. ಅಂಗಡಿಗಳೆದುರು ಕಿಕ್ಕಿರಿದು ನಿಂತ ರೈತಸಮೂಹ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಈ ವೇಳೆ ರೈತರೊಬ್ಬರಿಗೆ ಪೊಲೀಸ್ ಬೀಸಿದ ಲಾಠಿ ಕೆಲಕಾಲ ಅನ್ನದಾತ ಆಕ್ರೋಶಕ್ಕೆ ಕಾರಣವಾಗಿತ್ತು.ರೈತರು ಮುಂಗಾರು ಹಂಗಾಮಿನಲ್ಲಿ 1.61 ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಿದ್ದು, 1.28 ಲಕ್ಷ ಹೆಕ್ಟೇರ್ ಬಿತ್ತನೆಯಾಗಿದೆ. ಖುಷ್ಕಿ ಅಥವಾ ಮಳೆಯಾಶ್ರಿತ ಜಮೀನಿನಲ್ಲಿ ಹತ್ತಿ, ತೊಗರಿ, ಹೆಸರು, ಶೇಂಗಾವನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಇದರಿಂದಾಗಿ ಗೊಬ್ಬರದ ಅಭಾವ ಎದುರಾಗಿದೆ. ನೀರಾವರಿಯಲ್ಲಿ 56 ಸಾವಿರ ಹೆಕ್ಟೇರಿನಲ್ಲಿ ಭತ್ತ ಬಿತ್ತನೆ ಮಾಡಲಾಗಿದೆ. ಭತ್ತ ಬೆಳೆಗೆ ಇನ್ನೂ ಗೊಬ್ಬರ ಹಾಕಿಲ್ಲ. ಇನ್ನೊಂದು ವಾರದಲ್ಲಿ ಅದಕ್ಕೂ ಗೊಬ್ಬರ ಅಗತ್ಯವಿದೆ.ರೈತರಿಂದ 35 ರು.ಗಳ ಹೆಚ್ಚಿಗೆ ವಸೂಲಿ !:
ರೈತರಿಗೆ ಯೂರಿಯಾ ಅವಶ್ಯಕತೆ ಹೆಚ್ಚಾಗಿದೆ, ಇದರಿಂದ ನೂರಾರು ಸಂಖ್ಯೆಯಲ್ಲಿ ಬಂದ ರೈತರಿಗೆ ಕೃಷಿ ಇಲಾಖೆಯ ಅಧಿಕಾರಿಗಳಾದ ರಾಮನಗೌಡ, ಡಾ. ಭೀಮರಾವ್, ವಿನಾಯಕ ಸೇರಿದಂತೆ ಇತರರು ಗುರುತಿನ ಚೀಟಿ ವಿತರಿಸಿದರು. ಇದರಲ್ಲಿ ಕೇವಲ ನಂಬರ್ ಮಾತ್ರವಿದೆ, ಎರಡು ಬ್ಯಾಗುಗಳ ಯೂರಿಯಾಕ್ಕೆ 540 ರು.ಗಳು, 500 ಎಂಎಲ್ ನ್ಯಾನೋ ಎಣ್ಣೆಗೆ 225 ರು. ಒಟ್ಟು 765 ಆಗುತ್ತದೆ. ಆದರೆ 35 ರು. ಹೆಚ್ಚಿಗೆ ಪಡೆಯುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಬಿಲ್ ಹಾಕಿ ಕೊಡುತ್ತಿದ್ದಾರೆ ಎಂದು ರೈತರು ಚೀಟಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದರು.ಲಾಠಿ ಏಟಿಗೆ ಕುಸಿದು ಬಿದ್ದ ರೈತ !
ಸುರಪುರ ತಾಲೂಕಿನ ಬೊಮ್ಮನಹಳ್ಳಿಯ ರೈತ ಗುಡುದಪ್ಪ ಅವರಿಗೆ ಪೊಲೀಸ್ ಬೀಸಿದ ಲಾಠಿ ಏಟು ಜೋರಾಗಿ ಬಿದ್ದಿದ್ದರಿಂದ ಸ್ಥಳದಲ್ಲೇ ಕುಸಿದು ಬಿದ್ದಾಗ, ಪಕ್ಕದಲ್ಲೇ ಇದ್ದ ರೈತರು ಅವರನ್ನು ಹಿಡಿದು ನಿಲ್ಲಿಸಿದರು. "ಗೊಬ್ಬರಕ್ಕಾಗಿ ಜೀವವನ್ನು ಪೊಲೀಸರು ತೆಗೆಯುತ್ತಿದ್ದಾರೆ. ದನಕ್ಕೆ ಹೊಡೆಯುವ ಹಾಗೆ ಹೊಡೆಯುತ್ತಿದ್ದಾರೆ.. " ಎಂದು ನೊಂದು ನುಡಿದರು. ಪೊಲೀಸರು ರೈತರ ಮೇಲೆ ಲಾಠಿ ಬೀಸುತ್ತಾರೆ. ಪೊಲೀಸರು ಹೊಡೆಯುವುದು ನ್ಯಾಯವಲ್ಲ ಎಂದು ದೇವರಗೋನಾಲದ ರೈತ ಹಣಮಂತ್ರಾಯ ಆಕ್ರೋಶ ವ್ಯಕ್ತಪಡಿಸಿದರು.---------
ಸುರಪುರ ಹುಣಸಗಿ ಸೇರಿ ಯೂರಿಯಾ 14,147 ಮೆಟ್ರಿಕ್ ಟನ್ ಬೇಡಿಕೆಯಿದೆ. ಈವರೆಗೆ 11,186 ಮೆಟ್ರಿಕ್ ಟನ್ ಸರಬರಾಜಾಗಿದ್ದು, 11,136 ಮೆಟ್ರಿಕ್ ಟನ್ ಮಾರಾಟವಾಗಿದೆ. ಇವತ್ತು (ಆ.6) ಉಳಿದ 50 ಮೆ.ಟನ್ ಹಾಗೂ ರಾತ್ರಿ ಬರುವ 175 ಮೆ. ಟನ್ ದಾಸ್ತಾನು ಸೇರಿ ಒಟ್ಟು 225 ಮೆ. ಟನ್ ದಾಸ್ತಾನನ್ನು ನಾಳೆ (ಆ.7) ಹಂಚಿಕೆ ಮಾಡಲಾಗುವುದು. ರೈತರು ಆತಂಕ ಪಡಬೇಕಿಲ್ಲ: ರಾಮನಗೌಡ, ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ, ಸುರಪುರ.