ಭಜರಂಗದಳದ ಕಾರ್ಯಕರ್ತರ ಮೇಲೆ ಹಲ್ಲೆ: ಪ್ರಕರಣ ದಾಖಲು

| Published : Jul 01 2025, 12:47 AM IST

ಸಾರಾಂಶ

ಜಾನುವಾರುಗಳ ಸಂತೆಯಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿದ್ದ ವಾಹನವನ್ನು ನಿಲ್ಲಿಸಿದ ಭಜರಂಗದಳದ ಕಾರ್ಯಕರ್ತರ ಮೇಲೆ ಜಾನುವಾರು ವ್ಯಾಪಾರಿಗಳು ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಸಿಂಧನೂರು

ಜಾನುವಾರುಗಳ ಸಂತೆಯಲ್ಲಿ ಜಾನುವಾರುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಿದ್ದ ವಾಹನವನ್ನು ನಿಲ್ಲಿಸಿದ ಭಜರಂಗದಳದ ಕಾರ್ಯಕರ್ತರ ಮೇಲೆ ಜಾನುವಾರು ವ್ಯಾಪಾರಿಗಳು ಹಲ್ಲೆ ನಡೆಸಿರುವ ಘಟನೆ ಸೋಮವಾರ ನಡೆದಿದೆ.

ಪ್ರತಿ ಮಂಗಳವಾರ ಇಲ್ಲಿನ ಕುಷ್ಟಗಿ ರಸ್ತೆಯಲ್ಲಿ ಜಾನುವಾರುಗಳ ಸಂತೆ ನಡೆಯುತ್ತದೆ. ಮುನ್ನಾ ದಿನ ವಿವಿಧ ಕಡೆಯಿಂದ ವ್ಯಾಪಾರ ಮಾಡಲು ಜಾನುವಾರುಗಳನ್ನು ಇಲ್ಲಿಗೆ ತರುತ್ತಾರೆ. ಹೀಗೆ ತಂದ ಜಾನುವಾರುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುತ್ತಾರೆಂಬ ಖಚಿತ ಮಾಹಿತಿಯ ಮೇರೆಗೆ ಭಜರಂಗದಳದ ತಾಲೂಕು ಘಟಕದ ಸಂಚಾಲಕ ಮನೋಹರ, ನಗರ ಘಟಕದ ಸಂಚಾಲಕ ಶಿವಕುಮಾರ, ಕಾರ್ಯಕರ್ತರಾದ ಅನಿಲ್‌ಕುಮಾರ, ದೇವರಾಜ ಸೇರಿದಂತೆ 8 ಜನರು ಕಸಾಯಿಖಾನೆಗೆ ಹೊರಟಿದ್ದ ವಾಹವನ್ನು ತಡೆಯಲು ಯತ್ನಿಸಿದಾಗ ಜಾನುವಾರು ವ್ಯಾಪಾರಿಗಳು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸಾರ್ವಜನಿಕರು ಈ ಘಟನೆಯ ಕುರಿತು ಪೊಲೀಸ್ ಇಲಾಖೆಯ ದೂರವಾಣಿ ಸಂಖ್ಯೆ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಡಿವೈಎಸ್ಪಿ ಬಿ.ಎಸ್.ತಳವಾರ, ಪೊಲೀಸ್ ಇನ್ಸ್ಪೆಕ್ಟರ್ ದುರುಗಪ್ಪ ಡೊಳ್ಳಿನ್ ಹಾಗೂ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದರು. ಹಲ್ಲೆಗೊಳಗಾದ ಭಜರಂಗದಳದ ಕಾರ್ಯಕರ್ತರನ್ನು ಆಸ್ಪತ್ರೆಗೆ ದಾಖಲು ಮಾಡಿದರು.

ವಿಷಯ ತಿಳಿಯುತ್ತಿದ್ದಂತೆ ಬಿ.ಜೆ.ಪಿ.ಮುಖಂಡರಾದ ಕೆ.ರಾಜಶೇಖರ, ಹಂಸರಾಜ ಮಾಡಸಿರವಾರ, ನಿರುಪಾದೆಪ್ಪ ಜೋಳದರಾಶಿ ವಕೀಲ, ರವಿಕುಮಾರ ಉಪ್ಪಾರ, ಅಕ್ಷಯಗೌಡ, ಜೆ.ಡಿ.ಎಸ್.ಯುವ ಮುಖಂಡ ಅಭಿನಾಡಗೌಡ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಭಜರಂಗದಳದ ಕಾರ್ಯಕರ್ತರಿಗೆ ಸಾಂತ್ವನ ಹೇಳಿದರು. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.