ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇಗುಲದಲ್ಲಿ ಶತಚಂಡಿ- ಮಹಾರುದ್ರ ಯಾಗದ ಪೂರ್ಣಾಹುತಿ
ಕನ್ನಡಪ್ರಭ ವಾರ್ತೆ ಶೃಂಗೇರಿಭಗವಂತನಲ್ಲಿ ನಮಗೆ ಸದಾ ಶ್ರದ್ಧೆ, ಭಕ್ತಿಯಿರಬೇಕು. ಇದರಿಂದ ನಮಗೆ ಭಗವಂತನ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದು ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಹೇಳಿದರು.
ತಾಲೂಕಿನ ಮರ್ಕಲ್ ಪಂಚಾಯಿತಿ ಮಳೆ ದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆದ ಶತಚಂಡಿ ಹಾಗೂ ಮಹಾರುದ್ರ ಯಾಗದ ಪೂರ್ಣಾಹುತಿಯಲ್ಲಿ ಪಾಲ್ಗೊಂಡು ನಂತರ ಆಶೀರ್ವಚನ ನೀಡಿದರು. ನಾವು ಮಾಡಿದ ಒಳ್ಳೆಯ ಕೆಲಸಗಳಿಗೆ, ಭಗವಂತನ ಅನುಗ್ರಹಕ್ಕೆ ತಕ್ಕ ಫಲ ಸಿಕ್ಕೆ ಸಿಗುತ್ತದೆ. ಭಗವಂತ ಒಂದಲ್ಲ ಒಂದು ದಿನ ಉತ್ತಮ ಫಲ ನೀಡುತ್ತಾನೆ ಎಂದರು.ಭಗವಂತ ನಿರಾಕಾರ, ನಿರ್ಗುಣ, ಸರ್ವವ್ಯಾಪಿ.ನಮಗೆ ಭಗವಂತನಲ್ಲಿ ಅಚಲ ನಂಬಿಕೆ, ಭಕ್ತಿ ಇರಬೇಕು.ಪ್ರ ತಿಯೊಬ್ಬರು ಧರ್ಮ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು,ಉನ್ನತಿ ಪ್ರಾಪ್ತಿಯಾಗುತ್ತದೆ. ಲೋಕದಲ್ಲಿ ಚೆನ್ನಾಗಿ ಓದಿದವರಿಗೆ ಪ್ರಶ್ನೆ ಕೇಳುವುದು ಹೆಚ್ಚು. ಕೇಳುವ ಪ್ರಶ್ನೆಗೆ ಉತ್ತರ ನೀಡಲು ಓದಿದವನಿಗೆ ಕಷ್ಟವಾದರೂ ಅವನಿಗೆ ಪರಿಪೂರ್ಣ ಅಂಕ ದೊರೆಯುತ್ತದೆ. ಭಗವಂತ ನಮ್ಮನ್ನು ಸದಾ ಪರೀಕ್ಷಿಸುತ್ತಲೇ ಇರುತ್ತಾನೆ. ಹೆಚ್ಚು ಹೆಚ್ಚು ಪರೀಕ್ಷೆಯಿಂದ ನಮ್ಮೆಲ್ಲ ಸಂಕಷ್ಟ ದೂರಮಾಡುತ್ತಾನೆ.
ಶೃಂಗೇರಿ ಒಂದು ಪವಿತ್ರ ಕ್ಷೇತ್ರ. ಶಿವ ವಿಷ್ಣು ಇಬ್ಬರೂ ಭಗವಂತನ ಸ್ವರೂಪಿಗಳು. ಆದರೆ ಅವರಲ್ಲಿರುವ ಚೈತನ್ಯ ಒಂದೇ ಆಗಿದೆ. ಅದೇ ರೀತಿ ಹರಿ-ಹರ ಸ್ವರೂಪವಾಗಿ ತುಂಗಾ ಮತ್ತು ಭದ್ರಾ ನದಿ ಹರಿಯುತ್ತದೆ. ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಗಳು ಮಹಾಮಹಿಮರು. ಪುಣ್ಯಭೂಮಿ ಶೃಂಗೇರಿ ಮಹಿಮೆ ಪುರಾಣಗಳಲ್ಲಿ ಉಲ್ಲೇಖವಾಗಿದೆ ಎಂದರು. ಜಗದ್ಗುರು ಶ್ರೀ ಋಷ್ಯಶೃಂಗೇಶ್ವರ ಸ್ವಾಮಿಗೆ ವಿಶೇಷ ಅಭಿಷೇಕ ಸಹಿತ ವಿಶೇಷ ಪೂಜೆ ನೆರವೇರಿಸಿದರು.
14 ಶ್ರೀ ಚಿತ್ರ 2-
ಶೃಂಗೇರಿ ತಾಲೂಕಿನ ಮರ್ಕಲ್ ಪಂಚಾಯಿತಿ ಮಳೆದೇವರು ಕಿಗ್ಗಾ ಶ್ರೀ ಋಷ್ಯಶೃಂಗೇಶ್ವರ ಸ್ವಾಮಿ ಸನ್ನಿದಿಯಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥ ಸ್ವಾಮಿಗಳು ವಿಶೇಷ ಪೂಜೆ ನೆರವೇರಿಸಿದರು.