ದಾಬಸ್‍ಪೇಟೆ: ಶಾಲೆಗಳಲ್ಲಿ ಉತ್ತಮ ಕಲಿಕಾ ಪರಿಸರಕ್ಕೆ ವಾತಾವರಣವೂ ಪೂರಕ ಎಂಬ ಘೋಷವಾಕ್ಯದೊಂದಿಗೆ ನಮ್ಮ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸಹಕರಿಸುತ್ತಿದ್ದೇವೆ ಎಂದು ಕೆಎಲ್‍ಇ ಕಾಲೇಜ್ ಆಫ್ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜಮ್ಮ ತಿಳಿಸಿದರು.
ಬೆಂಗಳೂರಿನ ಕೆಎಲ್‍ಇ ಕಾಲೇಜ್ ಆಫ್ ಫಾರ್ಮಸಿಯ ಎನ್‍ಎಸ್‍ಎಸ್ ಘಟಕ ಹಾಗೂ ಸ್ಕೂಲ್ ಬೆಲ್ ಯುವಕ ಸಂಘದ ಸಹಯೋಗದಲ್ಲಿ ಬೂದಿಹಾಲ್ ಗ್ರಾಮದ ಸರ್ಕಾರಿ ಶಾಲೆಗೆ ಶಾಲಾಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮ್ಮ ಕಾಲೇಜಿನಿಂದ ಇದು 8ನೇ ಕಾರ್ಯಕ್ರಮ. ಈ ಚಟುವಟಿಕೆಯ ಉದ್ದೇಶ ಸರ್ಕಾರಿ ಶಾಲಾ ಮಕ್ಕಳಿಗೆ ಸಕಾರಾತ್ಮಕ, ಪ್ರೇರಣಾದಾಯಕ ಹಾಗೂ ಆಸಕ್ತಿದಾಯಕ ಕಲಿಕಾ ವಾತಾವರಣವನ್ನು ನಿರ್ಮಿಸುವುದು. ಯೋಜನೆಯ ಅಂಗವಾಗಿ ನಮ್ಮ ಕಾಲೇಜಿನ ಎನ್ನೆಸ್ಸೆಸ್ ಸ್ವಯಂಸೇವಕರು ಶಾಲೆಯ ಗೋಡೆಗಳ ಮೇಲೆ ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಸ್ವಚ್ಛತೆ ಜಾಗೃತಿ, ದೇಶಭಕ್ತಿ ಹಾಗೂ ವಿದ್ಯಾರ್ಥಿಗಳ ಪಠ್ಯಕ್ರಮಕ್ಕೆ ಸಂಬಂಧಿಸಿದ ವಿಷಯಾಧಾರಿತ ಆಕರ್ಷಕ ಹಾಗೂ ಅರ್ಥಪೂರ್ಣ ಚಿತ್ರಕಲೆಗಳನ್ನು ಬಿಡಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರುಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಡಾ.ಮಮತಾ ಮಾತನಾಡಿ, ಈ ಯೋಜನೆಯಡಿ ನಲಿ ಕಲಿ ತರಗತಿಗಳಾದ ನರ್ಸರಿ, ಎಲ್‍ಕೆಜಿ ಹಾಗೂ ಯುಕೆಜಿ ಕೊಠಡಿಗಳನ್ನು ಮಕ್ಕಳ ಮನಸ್ಸಿಗೆ ಹತ್ತಿರವಾಗುವಂತೆ ಬಣ್ಣಬಣ್ಣದ ಹಾಗೂ ಮನರಂಜನಾತ್ಮಕ ಚಿತ್ರಗಳಿಂದ ಅಲಂಕರಿಸಲಾಗಿದೆ. ಮಕ್ಕಳಲ್ಲಿ ಸಂತೋಷದಾಯಕ ಕಲಿಕಾ ವಾತಾವರಣವನ್ನು ಉಂಟು ಮಾಡಲಾಗಿದೆ. ಹಿರಿಯ ತರಗತಿಗಳ ಕೊಠಡಿಗಳಲ್ಲಿ ಪಠ್ಯಾಧಾರಿತ ಮತ್ತು ಜಾಗೃತಿ ಮೂಡಿಸುವ ವಿಷಯಗಳನ್ನು ಒಳಗೊಂಡ ಚಿತ್ರಗಳನ್ನು ಅಳವಡಿಸಿ ಶಿಕ್ಷಣದತ್ತ ಆಸಕ್ತಿ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಟಿ.ಮಂಜುನಾಥ್, ಬೂದಿಹಾಳ್ ವಿಎಸ್‌ಎಸ್‌ಎನ್ ಅಧ್ಯಕ್ಷ ಮಧುಕುಮಾರ್, ಯುವಕ ಸಂಘದ ಗುರು ಪ್ರಸಾದ, ಕಲಾವಿದ ಪವನ್ ರಾವ್ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪೋಟೋ 3 : ಬೆಂಗಳೂರಿನ ಕೆಎಲ್‍ಇ ಕಾಲೇಜ್ ಆಫ್ ಫಾರ್ಮಸಿಯ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಸರ್ಕಾರಿ ಶಾಲಾಭಿವೃದ್ಧಿ ಮತ್ತು ಸೌಂದರ್ಯೀಕರಣ ಕಾರ್ಯಕ್ರಮದ ಪ್ರಯುಕ್ತ ಬೂದಿಹಾಲ್ ಸರ್ಕಾರಿ ಶಾಲೆಗೆ ಸುಣ್ಣಬಣ್ಣ ಹಚ್ಚಿ ಚಿತ್ರ ಬಿಡಿಸಿ ಅಲಂಕರಿಸಿರುವುದು.