ದಾಬಸ್‍ಪೇಟೆ: ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಿಗದಿತ ಸಮಯಕ್ಕೆ ವೈದ್ಯರು, ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗದ ಕಾರಣ ರೋಗಿಗಳು ಪರದಾಡುವಂತಾಗಿದೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ 9 ಗಂಟೆಗೆ ಬರಬೇಕಾದ ವೈದ್ಯರು 11 ಗಂಟೆಯಾದರೂ ಬರಲ್ಲ. ರೋಗಿಗಳು 8.30ಕ್ಕೆ ಬಂದು ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಎದುರಾಗಿದೆ. ಶನಿವಾರ ಬೆಳಗ್ಗೆ ಬರಬೇಕಿದ್ದ ವೈದ್ಯರು ಪೋನ್ ಮಾಡಿದರೂ ಉತ್ತರಿಸದೆ, ಕರ್ತವ್ಯಕ್ಕೂ ಹಾಜರಾಗದೆ ಕಳ್ಳಾಟ ಆಡುತ್ತಿದ್ದಾರೆ. ಆಡಳಿತಾಧಿಕಾರಿಗಳು ರಜೆಯಲ್ಲಿದ್ದೇನೆ ಎನ್ನುತ್ತಾರೆ. ವೈದ್ಯರ ನಿರ್ಲಕ್ಷದಿಂದ ಪ್ರತಿನಿತ್ಯ ತ್ಯಾಮಗೊಂಡ್ಲು ಭಾಗದ ರೋಗಿಗಳು ಅಲೆದಾಡುವಂತಾಗಿದೆ.

ಆಸ್ಪತ್ರೆಯಲ್ಲಿ ಆರು ವೈದ್ಯರ ಪೈಕಿ ಒಬ್ಬರೇ ಒಬ್ಬ ವೈದ್ಯರು ಸಮಯಕ್ಕೆ ಸರಿಯಾಗಿ ಬರುವುದಿಲ್ಲ, ರೋಗಿಗಳು ಮತ್ತು ಅವರ ಸಂಬಂಧಿಕರೂ ಗಂಟೆಗಟ್ಟಲೆ ಕಾದರೂ ವೈದ್ಯರು ಬಾರದೇ ಇದ್ದ ಕಾರಣ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

ವಾರದ ಕೊನೆಯಲ್ಲಿ ಇದೇ ಗೋಳು: ಪ್ರತಿ ವಾರದ ಶನಿವಾರ ಹಾಗೂ ಭಾನುವಾರ ವೈದ್ಯರು ಮತ್ತು ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡಬೇಕಿದೆ. ಬಹುತೇಕ ವೈದ್ಯರು 11 ಗಂಟೆಗೆ ಕರ್ತವ್ಯಕ್ಕೆ ಹಾಜರಾಗುತ್ತಾರೆ, ದಂತ ವೈದ್ಯರು ಶನಿವಾರವಂತೂ ಸಿಗುವುದೇ ಇಲ್ಲ, ತ್ಯಾಮಗೊಂಡ್ಲು ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿಯನ್ನು ಹೇಳುವವರೂ ಇಲ್ಲ ಕೇಳುವವರೂ ಇಲ್ಲದಂತಾಗಿದೆ ಎಂದು ರೋಗಿಗಳು ದೂರಿದರು.

ಬಾಕ್ಸ್.............


ಬಿಸಿ ನೀರು ಬಿದ್ದು ನರಳುತ್ತಿದ್ದ ಮಗು

ಮುಂಜಾನೆ ಮಗು ಬಿಸಿ ನೀರನ್ನು ಮೈಮೇಲೆ ಹಾಕಿಕೊಂಡು ಮೈತುಂಬಾ ಬೊಬ್ಬೆಗಳು ಎದ್ದು ನೋವು ತಡೆಯಲಾರದೇ ಬೆಳಗ್ಗೆ 8.30ಕ್ಕೆ ಆಸ್ಪತ್ರೆಗೆ ಬಂದರೂ 11 ಗಂಟೆ ಆದರೂ ವೈದ್ಯರು ಬರಲಿಲ್ಲ. ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತೇವೆ, ಖಾಸಗಿ ಆಸ್ಪತ್ರೆಗೆ ಹೋಗಲು ದುಡ್ಡಿಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂದು ಮಗುವಿನ ತಂದೆ ರಾಜೇಂದ್ರ ತಮ್ಮ ಅಳಲು ತೋಡಿಕೊಂಡರು.

ಕೋಟ್...............

ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ 6 ವೈದ್ಯರಿದ್ದಾರೆ, ಶನಿವಾರ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ವೈದ್ಯರ ಸಮನ್ವಯದ ಕೊರತೆಯಿಂದ ಸಮಸ್ಯೆ ಉಂಟಾಗಿದೆ. ವೈದ್ಯಾಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನಿಸುತ್ತೇನೆ. ಸಮಯಕ್ಕೆ ಸರಿಯಾಗಿ ಬಾರದ ವೈದ್ಯರಿಗೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುತ್ತೇನೆ.

-ಡಾ.ಪದ್ಮಿನಿ, ತಾಲೂಕು ವೈದ್ಯಾಧಿಕಾರಿ

ಪೋಟೋ 8 :

ತ್ಯಾಮಗೊಂಡ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಸಿಬ್ಬಂದಿ ಸಮಯಕ್ಕೆ ಬಾರದೆ ರೋಗಿಗಳು ಕಾದು ಕುಳಿತಿರುವುದು.