ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ಕಳೆದ ೫೦ ವರ್ಷಗಳಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ವಿಶೇಷ ಆಸಕ್ತಿ ಮತ್ತು ಕಾಳಜಿ ವಹಿಸಿ ನಮ್ಮ ದೇಶದ ಭವ್ಯ ಇತಿಹಾಸ, ಕಲೆ, ಸಂಸ್ಕೃತಿ ಮತ್ತು ಪರಂಪರೆಗೆ ಸಂಬಂಧಿಸಿದ ಅಪೂರ್ವ ಶಾಸನಗಳು, ಕಲಾಕೃತಿಗಳು, ತಾಳೆಗರಿಗ್ರಂಥಗಳು, ವಿಂಟೇಜ್ ಕಾರುಗಳ ಸಂಗ್ರಹ ಇತ್ಯಾದಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸಿ, ಪ್ರದರ್ಶನಕ್ಕಿಟ್ಟಿರುವುದು ಒಂದು ವಿಶೇಷ ಸಾಧನೆಯಾಗಿದೆ. ಈ ವಿಶಿಷ್ಟ ಸಾಧನೆ ಮನ್ನಿಸಿ ಹೆಗ್ಗಡೆಯವರಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮಾನ್ಯತೆ ನೀಡಲಾಗಿದೆ ಎಂದು ನವದೆಹಲಿಯ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನ ಮುಖ್ಯಸ್ಥ ಡಾ. ಪ್ರದೀಪ್ ಭಾರಧ್ವಾಜ್ ಹೇಳಿದರು.
ಅವರು ಶನಿವಾರ ಧರ್ಮಸ್ಥಳದಲ್ಲಿ ಮಂಜೂಷಾ ವಸ್ತುಸಂಗ್ರಹಾಲಯದಲ್ಲಿ ದಂತದ ಶಿಲ್ಪಕಲೆ ಮತ್ತು ಕಲಾಕೃತಿಗಳ ಅದ್ಭುತ ಸಂಗ್ರಹವಿಭಾಗದ ಉದ್ಘಾಟನಾ ಸಮಾರಂಭದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.‘ಮಂಜೂಷಾ’ದಲ್ಲಿ ೭೫೦೦ ತಾಳೆಗರಿ ಹಸ್ತಪ್ರತಿಗಳು, ೨೧,೦೦೦ ಕಲಾತ್ಮಕ ವಸ್ತುಗಳು, ೨೫,೦೦೦ ಅಪೂರ್ವ ಪ್ರಾಚೀನ ಗ್ರಂಥಗಳು ಹಾಗೂ ನೂರಕ್ಕೂ ಹೆಚ್ಚು ವಿಂಟೇಜ್ ಕಾರುಗಳ ಸಂಗ್ರಹ ಇದೆ. ಇಷ್ಟೊಂದು ಅಪೂರ್ವ ಸಂಗ್ರಹವನ್ನು ಒಬ್ಬರೇ ವ್ಯಕ್ತಿ ಮಾಡಿರುವುದು ದೇಶದಲ್ಲೇ ವಿಶಿಷ್ಟ ದಾಖಲೆಯಾಗಿದೆ. ಇದು ನಮ್ಮ ದೇಶಕ್ಕೆ ಹೆಮ್ಮೆ ಹಾಗೂ ಅಭಿಮಾನದ ಸಂಗತಿಯಾಗಿದೆ.
ಇದನ್ನು ಜಾಗತಿಕ ಮಟ್ಟದ ಗಿನ್ನೆಸ್ ದಾಖಲೆಗೂ ಸೇರಿಸಲು ತಾವು ಪ್ರಯತ್ನಿಸುವುದಾಗಿ ಡಾ. ಪ್ರದೀಪ್ ಭಾರಧ್ವಾಜ್ ತಿಳಿಸಿದರು.ದಂತಶಿಲ್ಪಕಲೆ ಮತ್ತು ಕಲಾಕೃತಿಗಳ ಸಂಗ್ರಹದಲ್ಲಿ ದಂತದ ಕೆತ್ತನೆಯಲ್ಲಿ ರೂಪಿಸಿದ ಶಿವಸಹಸ್ರ ನಾಮ, ಎರಡು ಅಡಿ ಉದ್ದದ ದಂತದ ಮೂರ್ತಿಗಳು, ಅತಿಸೂಕ್ಷ್ಮದ ಆನೆಯ ಕೆತ್ತನೆ ನೂರು ದಂತದ ಆನೆಗಳ ಸಮೂಹ, ಆನೆಯ ದಂತದ ಮೇಲೆ ಕೆತ್ತನೆ ಮಾಡಿದ ವಿಷ್ಣುಪುರಾಣದ ಚಿತ್ರಕಥೆ ಪ್ರೇಕ್ಷಕರ ಕಣ್ಮನ ಸೆಳೆಯುತ್ತವೆ.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಡಾ. ಪ್ರದೀಪ್ ಭಾರದ್ವಾಜ್ ತಿಳಿಸಿದಂತೆ ಮಂಜೂಷಾ ವಸ್ತುಸಂಗ್ರಹಾಲಯವು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದಲ್ಲಿ ಇನ್ನೂ ಹೆಚ್ಚಿನ ಸಂತೋಷ ಮತ್ತು ಅಭಿಮಾನವಾಗುತ್ತದೆ ಎಂದರು.ಇಂದು ಉದ್ಘಾಟನೆಗೊಂಡ ದಂತದ ಶಿಲ್ಪಕಲೆ ಮತ್ತು ಕಲಾಕೃತಿಗಳ ಅಪೂರ್ವ ಸಂಗ್ರಹದಲ್ಲಿರುವ ಆಕರ್ಷಕ ವಸ್ತುಗಳ ದಾಖಲೀಕರಣದ ಕಾರ್ಯ ನಡೆಯುತ್ತಿದೆ. ವಿಶೇಷವಾಗಿ ಪಾಂಡಿಚೇರಿ, ತಮಿಳುನಾಡು ಮೊದಲಾದ ಕಡೆಗಳಲ್ಲಿ ದಂತದ ಬಾಚಣಿಕೆಗೆ, ದಂತದ ಟೂತ್ ಬ್ರಶ್‌ಗಳನ್ನು ಬಳಸುತ್ತಿದ್ದು ಅಂತಹ ವಿಶಿಷ್ಟ ವಸ್ತುಗಳನ್ನು ಸಂಗ್ರಹಿಸಲಾಗಿದೆ ಎಂದು ಹೆಗ್ಗಡೆಯವರು ಮಾಹಿತಿ ನೀಡಿದರು.
ಮಂಜೂಷಾದ ಕ್ಯುರೇಟರ್ ಪುಷ್ಪದಂತ ಮತ್ತು ರಿತೇಶ್‌ಶರ್ಮ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.