ಸ್ವಾಮೀಜಿ ಮೇಲೆ ಕ್ರಮಕ್ಕೆ ಮುಂದಾದರೆ ಗಂಭೀರ ಪರಿಣಾಮ: ಹಾಡ್ಯ ರಮೇಶ್ ರಾಜು ಖಂಡನೆ

| Published : Dec 01 2024, 01:33 AM IST

ಸಾರಾಂಶ

ಅಲ್ಪಸಂಖ್ಯಾತರಲ್ಲಿ ಜೈನರು, ಬೌದ್ಧರು, ಪಾರ್ಸಿಗಳು, ಸಿಖ್ಖರು ಇವರಿಗಿಲ್ಲದ ವಿಶೇಷ ಕಾಳಜಿ ಕೇವಲ ಮತ ಬ್ಯಾಂಕ್ ಗೋಸ್ಕರ ಮುಸಲ್ಮಾನರನ್ನೇ ವೈಭವೀಕರಿಸುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ವಿರೋಧಿ ಸರ್ಕಾರಗಳಿರುವಾಗ ಸ್ವಾಮೀಜಿ ಮಾತೆ ದೊಡ್ಡದಾಯಿತೇ ಎಂದು ಹರಿಹಾಯ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ವಿಶ್ವ ಒಕ್ಕಲಿಗ ಸಂಸ್ಥಾನ ಮಠದ ಸಂಸ್ಥಾಪಕ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಅವರ ಮೇಲೆ ಕ್ರಮಕ್ಕೆ ಮುಂದಾದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಭಾರತೀಯ ಕಿಸಾನ್ ಸಂಘದ ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಎಚ್ಚರಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸ್ವಾಮೀಜಿಗಳ ಮೇಲೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ಖಾಸಗಿ ವ್ಯಕ್ತಿಯ ದೂರಿನ ಮೇಲೆ ಎಫ್ ಐ ಆರ್ ದಾಖಲಿಸಿಕೊಂಡು ಸ್ವಾಮೀಜಿ ವಿಚಾರಣೆಗೆ ಸಿದ್ಧತೆ ನಡೆಸುತ್ತಿರುವುದು ಅತ್ಯಂತ ವಿಷಾದನೀಯ ಎಂದಿದ್ದಾರೆ.

ಸ್ವಾಮೀಜಿಯವರು ರೈತರ ಹಿತಾಸಕ್ತಿಗೆ ತೊಂದರೆ ಆಗಿದ್ದರಿಂದ ಮಾತಿನ ಬರದಲ್ಲಿ ಆ ಹೇಳಿಕೆ ಕೊಟ್ಟಿರುವುದು ಮತ್ತು ಅದಕ್ಕೆ ತಕ್ಷಣ ಸ್ವಷ್ಟೀಕರಣ ಕೊಟ್ಟಿರುವುದು ಸಂವಿಧಾನ ವಿರೋಧಿ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ರಾಜಕಾರಣಿಗಳು, ಸಮಾಜದ ಮುಖಂಡರು, ಇತರೆ ವ್ಯಕ್ತಿಗಳು ಇದಕ್ಕಿಂತಲೂ ಸಂವಿಧಾನ ವಿರೋಧಿ ಮಾತುಗಳನ್ನು ಆಡುತ್ತಾರೆ. ಇದಕ್ಕೆ ಹಲವು ಉದಾಹರಣೆಗಳು ನಮ್ಮ ಮುಂದಿವೆ. ಅವರ ಮೇಲೆ ಯಾವುದೇ ತರಹ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೇಶ ವಿರೋಧಿ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿದವರಿಗೆ ಯಾವ ಶಿಕ್ಷೆಯಾಗಿಲ್ಲ. ರಾಜಕೀಯ ಪಕ್ಷಗಳು ಜಾತ್ಯಾತೀತ ಹೆಸರಿನಲ್ಲಿ ಒಂದು ಕೋಮಿನ ಬಗ್ಗೆ ಒಲೈಸಿಕೊಂಡು ವಕ್ಫ್ ತಿದ್ದುಪಡಿ ಮಾಡಿದ್ದಾರೆ. ಇದಕ್ಕಿಂತಲೂ ಸ್ವಾಮೀಜಿ ಮಾತನಾಡಿದ್ದು ಘೋರವಾಗಿದೆಯೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಅಲ್ಪಸಂಖ್ಯಾತರಲ್ಲಿ ಜೈನರು, ಬೌದ್ಧರು, ಪಾರ್ಸಿಗಳು, ಸಿಖ್ಖರು ಇವರಿಗಿಲ್ಲದ ವಿಶೇಷ ಕಾಳಜಿ ಕೇವಲ ಮತ ಬ್ಯಾಂಕ್ ಗೋಸ್ಕರ ಮುಸಲ್ಮಾನರನ್ನೇ ವೈಭವೀಕರಿಸುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಬರೆದ ಸಂವಿಧಾನ ವಿರೋಧಿ ಸರ್ಕಾರಗಳಿರುವಾಗ ಸ್ವಾಮೀಜಿ ಮಾತೆ ದೊಡ್ಡದಾಯಿತೇ ಎಂದು ಹರಿಹಾಯ್ದಿದ್ದಾರೆ.

ಒಂದು ವೇಳೆ ಪೊಲೀಸರು ಸ್ವಾಮೀಜಿ ಅವರನ್ನು ವಿಚಾರಣೆ ನೆಪದಲ್ಲಿ ಬಂಧಿಸಿದರೆ ನಮ್ಮಲ್ಲೂ ಕೂಡ ಇದಕ್ಕಿಂತಲೂ ದೇಶ ವಿರೋಧಿ ಮಾತನಾಡಿರುವವರ ಬಗ್ಗೆ ಸಾಕ್ಷ್ಯಗಳಿವೆ. ಅವರ ಮೇಲೂ ನಾವು ಕೇಸನ್ನು ದಾಖಲಿಸುತ್ತೇವೆ. ಪೊಲೀಸರು ಕ್ರಮ ಕೈಗೊಳ್ಳುತ್ತಾರಾ? ತಮ್ಮ ಹೇಳಿಕೆ ಕುರಿತು ಸ್ವಾಮೀಜಿಗಳು ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ. ಇದಾದ ಮೇಲು ಕ್ರಮ ಕೈಗೊಂಡರೆ ಮುಂದಿನ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.