ಕಾಂಗ್ರೆಸ್ ಪರ ಜನಾಭಿಪ್ರಾಯವಿರುವುದು ಸ್ಪಷ್ಟ: ಚಲುವರಾಯಸ್ವಾಮಿ

| Published : Dec 01 2024, 01:33 AM IST

ಸಾರಾಂಶ

ಜನವರಿಯಲ್ಲಿ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಎಲ್ಲ ಕಾರ್ಯಕರ್ತರೂ ಒಗ್ಗೂಡಿ ಕೆಲಸ ಮಾಡಬೇಕು. ನಾವು ೧೨ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಯಾರು ಎಷ್ಟೇ ಭಾಷಣ ಬಿಗಿದು, ಅಪಪ್ರಚಾರ ಮಾಡಿದರೂ, ಚುನಾವಣೆಯಲ್ಲಿ ಬರುವ ಫಲಿತಾಂಶವೇ ಜನಾಭಿಪ್ರಾಯವಾಗಿದ್ದು, ಉಪ ಚುನಾವಣೆಯ ಮೂರೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆಲ್ಲುವುದರೊಡನೆ ರಾಜ್ಯದ ಜನರ ಅಭಿಪ್ರಾಯ ಕಾಂಗ್ರೆಸ್ ಪರವಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಕಾಂಗ್ರೆಸ್ ಪಕ್ಷದ ವತಿಯಿಂದ ಹಾಸನದಲ್ಲಿ ನಡೆಯಲಿರುವ ಬೃಹತ್ ಸಮಾವೇಶದ ಕುರಿತಂತೆ ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರವೇ ಇಲ್ಲದ ಮುಡಾದಲ್ಲಿ ಪ್ರತಿನಿತ್ಯ ಒಂದಿಲ್ಲೊಂದು ಹೇಳಿಕೆ ನೀಡುತ್ತಾ ಗೊಂದಲ ಸೃಷ್ಟಿಸಿದರು. ಆದರೆ, ಜನರು ಅದಕ್ಕೆ ತಕ್ಕ ಉತ್ತರ ನೀಡಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನೀವು ತೆಪ್ಪಗಿರಿ ಎಂಬ ಸಂದೇಶ ನೀಡಿದ್ದಾರೆ. ಅದನ್ನು ಅವರು( ಬಿಜೆಪಿ- ಜೆಡಿಎಸ್ ) ಪಾಲಿಸಬೇಕಷ್ಟೆ ಎಂದು ಕುಟುಕಿದರು.

ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಿರಂತರವಾಗಿ ನೀಡುತ್ತಿದೆ. ಬೆಂಗಳೂರಿನ ೫೦ ಲಕ್ಷ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಿದೆ. ಎತ್ತಿನ ಹೊಳೆ ಯೋಜನೆ ಪೂರ್ಣಗೊಳಿಸಿ ನಾಲ್ಕೈದು ಜಿಲ್ಲೆಗಳಿಗೆ ನೀರು ಪೂರೈಸುತ್ತಿದೆ. ಇಂತಹ ಹತ್ತು ಹಲವಾರು ಯೋಜನೆಗಳನ್ನು ರೂಪಿಸಿದ್ದರೂ ಕುಮಾರಸ್ವಾಮಿ, ಅಶೋಕ್, ವಿಜಯೇಂದ್ರ, ಸಿ.ಟಿ. ರವಿ ಇತರರು ನಮ್ಮ ನಾಯಕರ ವಿರುದ್ಧ ನಾಲಿಗೆ ಹರಿಬಿಡುತ್ತಲೇ ಇದ್ದರು. ಇನ್ನಾದರೂ ಇದಕ್ಕೆ ಬ್ರೇಕ್ ಹಾಕಿ ಎಂದು ತಾಕೀತು ಮಾಡಿದರು.

ಡಿ. ೪ರಂದು ಕೆ.ಆರ್.ಪೇಟೆಯಲ್ಲಿ ನಡೆಯುವ ಕೃಷಿ ಪತ್ತಿನ ಸಹಕಾರ ಸಂಘದ ಬ್ಯಾಂಕಿಂಗ್ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಗಿಯಾಗಲಿದ್ದಾರೆ ಎಂದು ಹೇಳಿದರು.

ಜಿಲ್ಲೆಯಿಂದ ೩೦ ಸಾವಿರ ಮಂದಿ ಭಾಗಿ:

ಡಿ. ೫ರಂದು ಹಾಸನದಲ್ಲಿ ನಡೆಯುವ ಸ್ವಾಭಿಮಾನಿ ಸಮಾವೇಶಕ್ಕೆ ಜಿಲ್ಲೆಯಿಂದ ೩೦ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ. ಈಗಾಗಲೇ ಪ್ರತಿ ತಾಲೂಕಿನ ಶಾಸಕರೊಟ್ಟಿಗೆ ಮಾತುಕತೆ ನಡೆಸಿದ್ದು, ಪ್ರತಿ ತಾಲೂಕಿನಿಂದ ಕನಿಷ್ಠ ೩ ಸಾವಿರ, ಇನ್ನು ಕೆಲವು ಕಡೆಗಳಿಂದ ಹೆಚ್ಚಿನ ಜನರು ತೆರಳುವ ನಿರೀಕ್ಷೆ ಇದೆ ಎಂದು ಹೇಳಿದರು.

೧೨ ಸ್ಥಾನಗಳಲ್ಲೂ ಗೆಲುವು:

ಜನವರಿಯಲ್ಲಿ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಎಲ್ಲ ಕಾರ್ಯಕರ್ತರೂ ಒಗ್ಗೂಡಿ ಕೆಲಸ ಮಾಡಬೇಕು. ನಾವು ೧೨ ಕ್ಷೇತ್ರಗಳಲ್ಲೂ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಂಡ್ಯ ಕ್ಷೇತ್ರದಿಂದ ಮೂರು, ಮದ್ದೂರು, ನಾಗಮಂಗಲ, ಕೆ.ಆರ್. ಪೇಟೆ ತಾಲೂಕಿನಿಂದ ತಲಾ ಇಬ್ಬರು, ಪಾಂಡವಪುರ, ಶ್ರೀರಂಗಪಟ್ಟಣ, ಮಳವಳ್ಳಿ ತಾಲೂಕಿನಿಂದ ತಲಾ ಒಬ್ಬರು ಸೇರಿದಂತೆ ೧೨ ಮಂದಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗುವುದು ನಿಶ್ಚಿತ ಎಂದು ಭವಿಷ್ಯ ನುಡಿದರು.

ಮೈಷುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಶಾಸಕ ಪಿ. ರವಿಕುಮಾರ್, ಮಾಜಿ ಶಾಸಕರಾದ ಎಚ್.ಬಿ. ರಾಮು, ಕೆ.ಬಿ. ಚಂದ್ರಶೇಖರ್, ರಾಮಕೃಷ್ಣ, ಸುರೇಶ, ಬಿ.ಎಸ್.ಶಿವಣ್ಣ ದಡದಪುರ, ತ್ಯಾಗರಾಜು, ರೇವಣ್ಣ, ಎಂ.ಎಸ್.ಚಿದಂಬರ್, ಅಶೋಕ್, ಎಚ್.ಕೆ. ರುದ್ರಪ್ಪ ಇತರರಿದ್ದರು.