ಮಂಗಳೂರು: ಆಟೋರಿಕ್ಷಾ ಕನಿಷ್ಠ ಮೀಟರ್‌ ದರವನ್ನು 50 ರು.ಗೆ ಹೆಚ್ಚಿಸುವಂತೆ ಹಾಗೂ ಕಾಯುವಿಕೆ (ವೇಟಿಂಗ್‌) ಸಮಯವನ್ನು 15ರಿಂದ 10 ನಿಮಿಷಕ್ಕೆ ಇಳಿಸುವಂತೆ ಆಟೋ ರಿಕ್ಷಾ ಸಂಘಟನೆಗಳ ಸದಸ್ಯರು ಒತ್ತಾಯಿಸಿದ್ದಾರೆ.

ಆಟೋರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿ ಸಾರಿಗೆ ಪ್ರಾಧಿಕಾರದ ಸಭೆ ದ.ಕ. ಜಿಲ್ಲಾಧಿಕಾರಿ ಹಾಗೂ ಸಾರಿಗೆ ಪ್ರಾಧಿಕಾರದ ಅಧ್ಯಕ್ಷ ದರ್ಶನ್‌ ಎಚ್‌.ವಿ. ಅಧ್ಯಕ್ಷತೆಯಲ್ಲಿ ಗುರುವಾರ ನಗರದ ಪಡೀಲ್‌ನ ಪ್ರಜಾಸೌಧದಲ್ಲಿ ನಡೆದ ಸಭೆಯಲ್ಲಿ ದರ ಏರಿಕೆಗೆ ಒತ್ತಾಯ ಮಾಡಲಾಗಿದೆ.

ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ತೈಲ ಹಾಗೂ ಎಲ್‌ಪಿಜಿ (ಇಂಧನ) ದರ ಏರಿಕೆಯ ಹಿನ್ನೆಲೆಯಲ್ಲಿ ಆಟೋರಿಕ್ಷಾ ಕನಿಷ್ಟ ಮೀಟರ್‌ ದರವನ್ನು 35 ರು. ನಿಂದ 50 ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ಬಳಿಕದ 1 ಕಿ.ಮೀ. ಸಂಚಾರ ದರವನ್ನು 20 ರು.ನಿಂದ 30 ರು.ಗಳಿಗೆ ಹೆಚ್ಚಿಸಬೇಕು. ಆಟೋರಿಕ್ಷಾಗಳಲ್ಲಿ ವೇಯ್ಟಿಂಗ್‌ (ಕಾಯುವಿಕೆ) ಸಮಯವನ್ನು 15ರಿಂದ 10 ನಿಮಿಷಗಳಿಗೆ ಇಳಿಕೆ ಮಾಡಬೇಕು ಎಂದು ಅಟೋರಿಕ್ಷಾ ಸಂಘಟನೆಯವರು ಆಗ್ರಹಿಸಿದರು.

ರಿಕ್ಷಾ ಚಾಲಕ ಮತ್ತು ಮಾಲೀಕರ ವಿವಿಧ ಸಂಘಟನೆಗಳ ಮುಖಂಡರಾದ ಅಬ್ದುಲ್‌ ಜಲೀಲ್‌, ಅರುಣ್‌ ಕುಮಾರ್‌, ರೆಹಮಾನ್‌ ಬೋಳಿಯಾರ್‌, ಭರತ್‌ ಕುಮಾರ್‌, ಶೇಖರ್‌ ದೇರಳಕಟ್ಟೆ, ವಿಶ್ವನಾಥ್‌, ಮೋಹನ್‌, ಅಬೂಬಕರ್‌ ಸುರತ್ಕಲ್‌, ವಿಷ್ಣುಮೂರ್ತಿ, ಅನಿಲ್‌ ಕುಮಾರ್‌, ದೀಪಕ್‌ರಾಜ್‌ ಮತ್ತಿತರರು ಮಾತನಾಡಿ, ಆಟೋರಿಕ್ಷಾ ಪ್ರಯಾಣ ದರ ಪರಿಷ್ಕರಣೆಗೆ ಒತ್ತಾಯಿಸಿದರು.

2022ರ ಬಳಿಕ ಆಟೋರಿಕ್ಷಾ ದರ ಪರಿಷ್ಕರಣೆ ಮಾಡಲಾಗಿಲ್ಲ. ಮದ್ಯಪ್ರಾಚ್ಯ ಯುದ್ಧದ ಕಾರಣದಿಂದಾಗಿ ಇಂಧನ ಬೆಲೆ ಏರಿಕೆಯಾಗಿದೆ. ವಾಹನಗಳ ಬಿಡಿ ಭಾಗಗಳ ಬೆಲೆಯಲ್ಲೂ ಹೆಚ್ಚಳವಾಗಿದ್ದು, ದಿನನಿತ್ಯದ ವಸ್ತುಗಳ ಬೆಲೆಯೂ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಇದರಿಂದಾಗಿ ಈಗಿರುವ ದರದಲ್ಲಿ ರಿಕ್ಷಾ ಚಾಲಕ ಮಾಲೀಕರು ಜೀವನ ಸಾಗಿಸುವ ದುಸ್ತರವಾಗಿದೆ. ಆದ್ದರಿಂದ ದರ ಏರಿಕೆ ಆಗಲೇಬೇಕು ಎಂದು ಪ್ರಸ್ತಾಪಿಸಿದರು.


ಕೊರೋನಾ ಸಂದರ್ಭದಲ್ಲಿ ಕಷ್ಟದಲ್ಲಿರುವ ರಿಕ್ಷಾ ಚಾಲಕರಿಗೆ ಪರಿಹಾರ ಮೊತ್ತವನ್ನು ರಾಜ್ಯ ಸರ್ಕಾರ ಒದಗಿಸಿತ್ತು. ಅದೇ ಮಾದರಿಯಲ್ಲಿ ಪರಿಹಾರವನ್ನು ಯುದ್ಧದ ಈ ಸಂದರ್ಭದಲ್ಲಿ ಒದಗಿಸಬೇಕು ಎಂದು ರೆಹಮಾನ್‌ ಬೋಳಿಯಾರ್‌ ಒತ್ತಾಯಿಸಿದರು. ಗ್ರಾಮಾಂತರ ಮತ್ತು ನಗರ ಪ್ರದೇಶದ ಆಟೋ ರಿಕ್ಷಾಗಳ (ವಲಯ 1 ಮತ್ತು ವಲಯ 2ರಲ್ಲಿ) ಸಂಚಾರ ನಿಯಮ ಪಾಲನೆಗೆ ಕಟ್ಟು ನಿಟ್ಟಾಗಿ ಸೂಚನೆ ನೀಡಬೇಕು ಎಂದು ಅಬೂಬಕ್ಕರ್‌ ಸುರತ್ಕಲ್‌ ಪ್ರಸ್ತಾಪಿಸಿದರು.ಸಿಎನ್‌ಜಿ ಹಾಗೂ ಎಲ್‌ಪಿಜಿ ಪಂಪ್‌ಗಳಲ್ಲಿ ಮೀಟರ್‌ ರೀಡಿಂಗ್‌ ಸರಿಯಾಗಿ ಆಗುತ್ತಿಲ್ಲ ಎಂಬ ಅನುಮಾನವಿದೆ ಎಂದು ಆಟೋರಿಕ್ಷಾ ಚಾಲಕರ ಸಂಘಟನೆಯ ಮುಖಂಡ ಭರತ್‌ ಕುಮಾರ್‌ ಪ್ರಸ್ತಾಪಿಸಿದರು. ತೂಕ ಮತ್ತು ಮಾಪನ ಅಧಿಕಾರಿಗಳು ಕಳೆದ ಮೂರು ತಿಂಗಳಿನಿಂದ ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಅಂತಹ ಯಾವುದೇ ಪ್ರಕರಣ ಈವರೆಗೆ ವರದಿಯಾಗಿಲ್ಲ. ನಿರ್ದಿಷ್ಟ ಪ್ರಕರಣವಿದ್ದಲ್ಲಿ ತಿಳಿಸಿದರೆ ಕ್ರಮ ವಹಿಸುವುದಾಗಿ ಜಿಲ್ಲಾಧಿಕಾರಿ ದರ್ಶನ್‌ ತಿಳಿಸಿದರು.

ನಗರ-ಗ್ರಾಮೀಣಕ್ಕೆ ಪ್ರತ್ಯೇಕ ದರ ಇರಲಿ:

ದ.ಕ. ಜಿಲ್ಲೆಯಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ತಾಲೂಕುಗಳಿಗೆ ಅನುಗುಣವಾಗಿ ಪ್ರತ್ಯೇಕವಾಗಿ ಮೀಟರ್‌ ದರವನ್ನು ನಿಗದಿಪಡಿಸುವ ಅಗತ್ಯವಿದೆ. ಇದರಿಂದಾಗಿ ಗ್ರಾಮಾಂತರ ಪ್ರದೇಶದ ಆಟೋಗಳು ನಗರ ಪ್ರದೇಶಗಳಲ್ಲಿ ಬಾಡಿಗೆ ಮಾಡುವುದು ತಪ್ಪಲಿದೆ ಎಂದು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.

ಸದ್ಯಕ್ಕೆ ದರ ಏರಿಕೆ ಬೇಡ: ಸಾರ್ವಜನಿಕರ ಪರವಾಗಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌, ಆಟೋರಿಕ್ಷಾ ದರ ಪರಿಷ್ಕರಣೆಗೆ ಸಂಬಂಧಿಸಿ ಮುಖಂಡರು ಬೇಡಿಕೆ ತಪ್ಪು ಎಂದು ಹೇಳುವುದಿಲ್ಲ. ಆದರೆ ಸದ್ಯ ಅಂತಾರಾಷ್ಟ್ರೀಯ ಯುದ್ಧ ಪರಿಸ್ಥಿತಿಯಿಂದಾಗಿ ಇಂಧನ ಬೆಲೆಯಲ್ಲಿ ಏರಿಕೆಯಾಗಿದೆ. ಸದ್ಯ ಎರಡು ತಿಂಗಳಲ್ಲಿ ಈ ಬೆಲೆಗಳಲ್ಲಿ ಇಳಿಕೆಯಾಗಬಹುದು. ಹಾಗಾಗಿ ಅಲ್ಲಿಯವರೆಗೆ ಕಾದು ಬಳಿಕ ದರ ಪರಿಷ್ಕರಣೆಯ ಬಗ್ಗೆ ನಿರ್ಧಾರ ಕೈಗೊಳ್ಳಬೇಕು. ಏಕಾಏಕಿ ದರ ಏರಿಸಿದರೆ ಅದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಮತ್ತು ಇಂಧನ ಬೆಲೆ ಇಳಿಕೆಯಾದಾಗ ಅದನ್ನು ಮತ್ತೆ ಇಳಿಕೆ ಮಾಡಲು ಸಾಧ್ಯವಾಗದು ಎಂದರು.

ಸಾಮಾಜಿಕ ಕಾರ್ಯಕರ್ತ ಜೆರಾಲ್ಡ್‌ ಟವರ್ಸ್‌ ಮಾತನಾಡಿ, ನಾಲ್ಕು ವರ್ಷಗಳ ನಂತರ ಆಟೋರಿಕ್ಷಾದವರು ಬೆಲೆ ಏರಿಕೆಗೆ ಆಗ್ರಹಿಸಿದ್ದಾರೆ. ಜಿಲ್ಲೆಯ ಆಟೋರಿಕ್ಷಾದವರು ನಿಯತ್ತಿನಿಂದ ದುಡಿಯುವವರು. ಹಾಗಾಗಿ ಅವರ ಬೇಡಿಕೆ ಪರಿಗಣಿಸಿ ದರ ಪರಿಷ್ಕರಣೆ ಮಾಡಬೇಕು ಎಂದರು.

ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅರುಣ್‌, ಡಿಸಿಪಿ ರವಿಶಂಕರ್‌, ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಶಿರೋಲ್ಕರ್‌ ಇದ್ದರು.