ಕನ್ನಡಪ್ರಭ ವಾರ್ತೆ ಹಲಗೂರು
ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ನೀಡುತ್ತಿದ್ದು, ಉತ್ತಮ ಶಿಕ್ಷಣ ಪಡೆದು ಸಾಧನೆ ಮಾಡಬೇಕು ಎಂದು ಶಿಕ್ಷಕ ಎನ್.ಎಂ.ಪುಟ್ಟಸ್ವಾಮಿ ಕರೆ ನೀಡಿದರು.ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ 8ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ ಮತ್ತು ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ 8 ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಸನ್ಮಾನ ಮತ್ತು 2026-27ನೇ ಸಾಲಿನ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಪಿಎಸ್ ಶಾಲೆಗೆ ದೂರದ ಊರುಗಳಿಂದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಬರುತ್ತಿದ್ದಾರೆ. ಕಳೆದ ಬಾರಿ ನೂರರಷ್ಟು ಫಲಿತಾಂಶ ಬಂದಿದೆ. ಪೋಷಕರು ನಿಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸಿದರೆ ಮುಂದಿನ ದಿನಗಳಲ್ಲಿ ನಿಮಗೆ ಮುಳ್ಳಾಗುತ್ತದೆ. ವಿದ್ಯಾರ್ಥಿಗಳು ಸಾಧಕರಾಗಿ ನಿಮ್ಮ ತಂದೆ-ತಾಯಿಗೆ ಕೀರ್ತಿ ತರುವ ನಿಟ್ಟಿನಲ್ಲಿ ವ್ಯಾಸಂಗ ಮಾಡಿ ಉತ್ತಮ ಪ್ರಜೆಯಾಗಬೇಕು ಎಂದರು.ಉಪನ್ಯಾಸಕ ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಪರಿಶ್ರಮ, ಶ್ರದ್ಧೆ, ಆಸಕ್ತಿಯಿಂದ ವ್ಯಾಸಂಗ ಮಾಡಿ ಶಿಕ್ಷಕರು ನೀಡುವ ಬೋಧನೆ ಅರಿತು ಉನ್ನತ ಶಿಕ್ಷಣ ಪಡೆಯಿರಿ ಎಂದರು.
ಕನ್ನಡ ವಿಭಾಗದ ಉಪನ್ಯಾಸಕ ರವಿ ಮಾತನಾಡಿ, ಪಟ್ಟಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ಹೋಗಿ ಬರಬೇಕು ಟ್ಯೂಷನ್, ಮನೆಗೆ ಬಂದಾಗ ಹೋಂವರ್ಕ್ ಎಂಬುದಷ್ಟೇ ಸೀಮಿತವಾಗಿದ್ದು, ಶಿಕ್ಷಣದ ಜೊತೆಗೆ ಗ್ರಾಮೀಣ ಮಕ್ಕಳಿಗೆ ಕಷ್ಟ ಸುಖಗಳ ಅರಿವಿದ್ದು, ಬದುಕುವುದನ್ನು ಕಲಿಸುತ್ತದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಸೋಮಣ್ಣ ಮಾತನಾಡಿ, ಕಾಲೇಜಿನಲ್ಲಿ ಕಲಾ ವಿಭಾಗ, ವಿಜ್ಞಾನ ವಿಭಾಗ, ವಾಣಿಜ್ಯ ವಿಭಾಗ ವಿಷಯಗಳಿದ್ದು, ಮಕ್ಕಳು ಕಾಲೇಜಿಗೆ ಸೇರಿಸಲು ಪೋಷಕರು ಮುಂದಾಗಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅತಿಥಿ ಶಿಕ್ಷಕರು, ವಿದ್ಯಾರ್ಥಿಗಳ ಪೋಷಕರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಉಪ ಪ್ರಾಂಶುಪಾಲೆ ಅನುರಾಧ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ಎಸ್ಡಿಎಂಸಿ ಉಪಾಧ್ಯಕ್ಷ ಮಹಾದೇವ ಉದ್ಘಾಟಿಸಿದರು. ವಿವೇಕ್, ಕಿರಣ್, ಶಿಕ್ಷಕಿ ಬಿ.ಕೆ.ಕೆಂಪು, ಭರತ್ ರಾಜ್ ಸೇರಿದಂತೆ ಇತರರು ಇದ್ದರು.