ಕನ್ನಡಪ್ರಭ ವಾರ್ತೆ ಮದ್ದೂರು
ಪೌರ ಕಾರ್ಮಿಕರು ಸಮಾಜದ ಸ್ವಚ್ಛತೆ ಕಾಪಾಡುವ ವೈದ್ಯರಾಗಿದ್ದಾರೆ. ಈ ಮಹತ್ವದ ಕಾರ್ಯದಲ್ಲಿ ಸಮಾಜವು ಕೈಜೋಡಿಸಬೇಕು ಎಂದು ನಗರಸಭೆ ಪೌರಾಯುಕ್ತೆ ರಾಧಿಕಾ ಸೋಮಶೇಖರ್ ಮಂಗಳವಾರ ಹೇಳಿದರು.ಪಟ್ಟಣದ ನಗರಸಭಾ ಕಚೇರಿಯಲ್ಲಿ ಕೇಂದ್ರ ಪುರಸ್ಕೃತ ನಮಸ್ತೆ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ, ರಾಜ್ಯ ಸರ್ಕಾರಿ ಸಫಾಯಿ ಕರ್ಮಚಾರಿಗಳ ಆಯೋಗ ಸಹಯೋಗದಲ್ಲಿ ಪೌರಕಾರ್ಮಿಕರಿಗೆ ಸುರಕ್ಷತಾ ಆರೋಗ್ಯ ಕವಚವನ್ನು ವಿತರಿಸಿ ಮಾತನಾಡಿದರು.
ಪ್ರತಿನಿತ್ಯ ನಗರವನ್ನು ಸ್ವಚ್ಛಗೊಳಿಸುವ ಮೂಲಕ ನಾಗರಿಕರ ಆರೋಗ್ಯ ಕಾಪಾಡುವ ಪೌರಕಾರ್ಮಿಕರಿಗೆ ಆರೋಗ್ಯ ಮುಖ್ಯವಾಗಿದೆ. ಈ ವಿಚಾರದಲ್ಲಿ ನಿರ್ಲಕ್ಷ ತೋರದೆ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.ಪೌರಕಾರ್ಮಿಕರು ನಮ್ಮ ನಗರವನ್ನು ಸ್ವಚ್ಛವಾಗಿಸುತ್ತಿರುವ ಕಾರಣದಿಂದಾಗಿ ಇಂದು ನಮ್ಮೆಲ್ಲರ ಆರೋಗ್ಯ ಉತ್ತಮವಾಗಿದೆ. ಇವರ ಸ್ವಚ್ಛತಾ ಕಾರ್ಯಕ್ಕೆ ಸಮಾಜವು ಕೈಜೋಡಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯುವ ಪ್ರವೃತ್ತಿಗೆ ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು. ಇದರಿಂದ ನಗರ ಸ್ವಚ್ಛವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಪರಿಸರ ಅಭಿಯಂತರೆ ಅರ್ಚನಾ ಆರಾಧ್ಯ ಮಾತನಾಡಿ, ವೈಯಕ್ತಿಕ ಸ್ವಚ್ಛತೆಗೆ ಪೌರಕಾರ್ಮಿಕರು ಹೆಚ್ಚಿನ ಗಮನ ಹರಿಸಬೇಕು. ದುಶ್ಚಟಗಳಿಂದ ದೂರ ಉಳಿದು ಉತ್ತಮ ಆಹಾರ ಸೇವಿಸುವುದರಿಂದ ಆರೋಗ್ಯವಂತ ಜೀವನ ನಡೆಸಬಹುದು. ದಿನ ನಿತ್ಯದ ಜೀವನದಲ್ಲಿ ಕುಟುಂಬದ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡಬೇಕು. ಅಲ್ಲದೇ, ಮಕ್ಕಳ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ನಗರಸಭೆ ಸ್ವಚ್ಛತಾ ವಾಹನಗಳ ಚಾಲಕರು, ಸಹಾಯಕರು ಮತ್ತು ಪೌರ ಕಾರ್ಮಿಕರು ಸೇರಿದಂತೆ ಸುಮಾರು 100 ಮಂದಿಗೆ ಕಾರ್ಯಕ್ರಮದ ಅಂಗವಾಗಿ ಸರ್ಕಾರಿ ಆಸ್ಪತ್ರೆ ವೈದ್ಯರಿಂದ ಆರೋಗ್ಯ ತಪಾಸಣೆ ಶಿಬಿರ ನಡೆಯಿತು. ಡಾ.ಅನಿತಾ ಹಾಗೂ ಸಿಬ್ಬಂದಿ ಆರೋಗ್ಯ ತಪಾಸಣೆ ನಡೆಸಿ ಸಲಹೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ವ್ಯವಸ್ಥಾಪಕ ಶ್ರೀಧರ್, ಆರೋಗ್ಯ ನಿರೀಕ್ಷಕರಾದ ಕೀರ್ತಿ ಕುಮಾರ್, ಭರತ್ ಕುಮಾರ್, ಶ್ರೀನಿವಾಸ್, ಮೇಲ್ವಿಚಾರಕ ರಾದ ಮಹಾದೇವಿ ಮತ್ತಿತರರು ಭಾಗವಹಿಸಿದ್ದರು.