ಚಾಮರಾಜೇಶ್ವರ ದೇಗುಲದಿಂದ ಮೆರವಣಿಗೆ । ಧಿಕ್ಕಾರ ಘೋಷಣೆ
ಕನ್ನಡಪ್ರಭ ವಾರ್ತೆ ಚಾಮರಾಜನಗರಬಿಡದಿ ಟೌನ್‌ಶಿಪ್‌ಗಾಗಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಶಾಂತಿಯುತ ಪ್ರತಿಭಟನೆಯ ಮೇಲೆ ಪೊಲೀಸ್ ದೌರ್ಜನ್ಯ, ದಬ್ಬಾಳಿಕೆ ಹಾಗೂ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕುರುಬೂರು ಶಾಂತಕುಮಾರ್ ಬಣದ ಜಿಲ್ಲಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಅಲ್ಲಿಂದ ಭುವನೇಶ್ವರಿ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಕೆಲಕಾಲ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಂಚಾಲಕ ಮೂಕಹಳ್ಳಿ ಮಹದೇವಸ್ವಾಮಿ, ಯೋಜನೆಯನ್ನು ವಿರೋಧಿಸಿ ಬಿಡದಿ ಭೂ ಸ್ವಾಧೀನ ಹೋರಾಟ ಸಮಿತಿಯ ನೇತೃತ್ವದಲ್ಲಿ ಕಳೆದ ೪೬೦ಕ್ಕೂ ಹೆಚ್ಚು ದಿನಗಳಿಂದ ನಿರಂತರವಾಗಿ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಸೋಮವಾರ ಜಂಟಿ ಅಳತೆ ಸಮಿತಿಯ ಕಂದಾಯ ಅಧಿಕಾರಿಗಳು ರೈತರ ಅನುಮತಿ ಪಡೆಯದೇ ಏಕಪಕ್ಷೀಯವಾಗಿ ಮಂಡಲಹಳ್ಳಿ ಗ್ರಾಮದಲ್ಲಿ ಭೂ ಸರ್ವೇ ಕಾರ್ಯ ನಡೆಸಲು ಬಂದಾಗ ಪ್ರತಿಭಟನಾನಿರತ ರೈತರು, ತಮ್ಮ ಜೀವನಾಧಾರವಾಗಿರುವ ಜಮೀನನ್ನು ಉಳಿಸಿಕೊಳ್ಳಲು ಮಹಿಳೆಯರು ಮತ್ತು ಹಿರಿಯ ರೈತರು ಸೇರಿದಂತೆ ನೂರಾರು ಹೋರಾಟಗಾರರು ಅಧಿಕಾರಿಗಳ ವಾಹನವನ್ನು ತಡೆದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಪೊಲೀಸರು, ಪ್ರತಿಭಟನಾನಿರತರನ್ನು ಚದುರಿಸುವ ನೆಪದಲ್ಲಿ ಲಾಠಿ ಚಾರ್ಜ್ ಮಾಡಿ ವಯೋವೃದ್ಧರು ಮತ್ತು ಮಹಿಳೆಯರ ಮೇಲೂ ದಯೆಯಿಲ್ಲದೆ ಬಲಪ್ರಯೋಗ ಮಾಡಿದ್ದಾರೆ. ಪೊಲೀಸರ ಈ ದೌರ್ಜನ್ಯ, ದಬ್ಬಾಳಿಕೆ ಖಂಡನೀಯ ಎಂದರು.
ಹಲವು ರೈತರು ಹಾಗೂ ಮಹಿಳಾ ಪ್ರತಿಭಟನಾಕಾರರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ. ಹೋರಾಟಗಾರರನ್ನು ಬಲವಂತವಾಗಿ ಬಂಧಿಸಲು ಯತ್ನಿಸಲಾಗಿದೆ. ಹಲವರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದರು.ರಾಜ್ಯದಲ್ಲಿ ಮಳೆ ಇಲ್ಲದ ಕಾರಣ ಬರಗಾಲ ಎಂದು ಘೋಷಣೆ ಮಾಡಿ ರೈತರ ಸಾಲ ಮನ್ನಾ ಮಾಡಬೇಕು. ರೈತರು ಬೆಳೆದಂತಹ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಬೇಕು. ಶಾಂತಿಯುತವಾಗಿ ಹಕ್ಕೊತ್ತಾಯ ಮಂಡಿಸುತ್ತಿದ್ದ ಅನ್ನದಾತರ ಮೇಲೆ ಮತ್ತು ಮಹಿಳೆಯರ ಮೇಲೆ ಅಮಾನವೀಯವಾಗಿ ಲಾಠಿ ಬೀಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸಬೇಕು.
ಪ್ರತಿಭಟನೆಯ ವೇಳೆ ವಶಕ್ಕೆ ಪಡೆದಿರುವ ಎಲ್ಲಾ ರೈತ ಮುಖಂಡರನ್ನು ಮತ್ತು ಹೋರಾಟಗಾರರನ್ನು ಬೇಷರತ್ತಾಗಿ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಉಡಿಗಾಲ ರೇವಣ್ಣ, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ನಂಜೇದೇವನಪುರ ಸತೀಶ್, ಯಳಂದೂರು ತಾಲೂಕು ಅಧ್ಯಕ್ಷ ಗೌಡಳ್ಳಿ ಷಡಕ್ಷರಿಸ್ವಾಮಿ, ಮೆಲ್ಲಳ್ಳಿ ಚಂದ್ರಶೇಖರ ಮೂರ್ತಿ, ಹಿರಿಯೂರು ಮಹೇಶ್, ಅಮಚವಾಡಿ ವಿಜಯ ಕುಮಾರ್, ವೀರನಪುರ ನವೀನ್, ಶ್ರೀಕಂಠ ಮೂರ್ತಿ ಬಿಸಲವಾಡಿ, ನಾಗರಾಜ್, ಸಿದ್ದಪ್ಪ ಇತರರು ಭಾಗವಹಿಸಿದ್ದರು.
---೧೪ಸಿಎಚ್‌ಎನ್೨
ಬಿಡದಿ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಶಾಂತಿಯುತ ಪ್ರತಿಭಟನೆಯ ಮೇಲೆ ಪೊಲೀಸ್ ದೌರ್ಜನ್ಯ. ದಬ್ಬಾಳಿಕೆ ಹಾಗೂ ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರ ಸಂಘದ ಕುರುಬೂರು ಶಾಂತಕುಮಾರ್ ಬಣದದ ಜಿಲ್ಲಾ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.-------