ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅರಣ್ಯ ಸಂಪತ್ತನ್ನು ಉಳಿಸುವುದು ಮತ್ತು ಬೆಳೆಸುವುದು ಇಂದಿನ ತುರ್ತಾಗಿದ್ದು, ದೇಶದ ಗಡಿಯನ್ನು ಕಾಯಲು ಸೈನಿಕರು ಎಷ್ಟು ಮುಖ್ಯವೋ, ದೇಶದ ಒಳಗಿರುವ ಅರಣ್ಯ ಸಂಪತ್ತನ್ನು ರಕ್ಷಿಸಲು ಪ್ರತಿಯೊಬ್ಬ ನಾಗರಿಕನೂ ‘ಊರ ಒಳಗಿನ ಸೈನಿಕ’ ಆಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎ.ಮಂಜುನಾಥ ತಿಳಿಸಿದರು.ನಗರದ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾಡಳಿತ, ಜಿಪಂ, ಅರಣ್ಯ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಶಿವಮೊಗ್ಗ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಅರಣ್ಯೀಕರಣ ಹಾಗೂ ಕೆರೆಗಳ ಪುನಶ್ಚೇತನ ಅಭಿಯಾನ-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಲು ಅರಣ್ಯ ಸಂಪತ್ತನ್ನು ಉಳಿಸಲೇಬೇಕಿದೆ ಎಂದರು.
ಪ್ರಕೃತಿಯಲ್ಲಿ ಅರಣ್ಯ ಮತ್ತು ಜಲ ಸಂರಕ್ಷಣೆ ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಶುದ್ಧವಾದ ಗಾಳಿ ಮತ್ತು ನೀರು ಸಿಗುವುದು ಕಷ್ಟಸಾಧ್ಯ.ಆದ್ದರಿಂದ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದರು.ದೇಶದ ಗಡಿ ರಕ್ಷಣೆಗಾಗಿ ನಾವು ಸೈನ್ಯವನ್ನು ನಿಯೋಜಿಸುತ್ತೇವೆ. ಆ ಗಡಿ ಭದ್ರತೆ ಎಷ್ಟು ಮುಖ್ಯವೋ, ದೇಶದ ಒಳಗಿನ ಅರಣ್ಯ ಪ್ರದೇಶಗಳನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವಾಗಿದೆ.ಗಡಿಯಾಚೆಗಿನ ಆಕ್ರಮಣ ತಡೆಯಲು ಸೈನಿಕರಿದ್ದರೆ, ನಮ್ಮ ಒಳಗಿನ ಪರಿಸರವನ್ನು ರಕ್ಷಿಸಲು ನಾವೇ ಸೈನಿಕರಂತೆ ಕೆಲಸ ಮಾಡಬೇಕಾಗಿದೆ ಎಂದರು.
ನಮ್ಮ ನಗರ ಮತ್ತು ಪರಿಸರವನ್ನು ನಾವೇ ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆ ಇಂದಿನ ದಿನಗಳಲ್ಲಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಯೂ ಬಾಲ್ಯದಿಂದಲೇ ಅರಣ್ಯ ಬೆಳೆಸುವ ಮತ್ತು ಪರಿಸರ ಉಳಿಸುವ ಬಗ್ಗೆ ಸಾಮಾಜಿಕ ಪ್ರಜ್ಞೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅರಣ್ಯ ಇಲಾಖೆಗಳ ಸಮನ್ವಯದೊಂದಿಗೆ ರಾಜ್ಯಾದ್ಯಂತ ಅತ್ಯಂತ ವ್ಯವಸ್ಥಿತವಾಗಿ ಬೃಹತ್ ಪ್ರಮಾಣದಲ್ಲಿ ಸಸಿ ನೆಡುವ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದಕ್ಕೆ ಅರಣ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಕೈಜೋಡಿಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ.ಹನುಮಂತಪ್ಪ ಮಾತನಾಡಿ, ಕೆರೆಗಳು ಮತ್ತು ಹಸಿರೀಕರಣಕ್ಕೆ ಆದ್ಯತೆ ನೀಡಲೇಬೇಕಿದೆ. ‘ಕೆರೆಗಳು ಹಾಗೂ ಹಸಿರೀಕರಣ’ ಎಂಬ ಶೀರ್ಷಿಕೆಯಡಿಯಲ್ಲಿ ಇಂದಿನ ಕಾರ್ಯಕ್ರಮ ನಡೆದಿದ್ದು, ಪ್ರಸ್ತುತ ದಿನಗಳಲ್ಲಿ ಇದು ಅತ್ಯಂತ ಅಗತ್ಯವಾದ ವಿಷಯವಾಗಿದೆ. ಮಾನವನ ಬದುಕಿಗೆ ಮುಖ್ಯವಾಗಿ ಬೇಕಾಗಿರುವ ಅಂಶಗಳೆಂದರೆ ಶುದ್ಧವಾದ ನೀರು, ಮಾಲಿನ್ಯಮುಕ್ತ ಗಾಳಿ ಮತ್ತು ಉತ್ತಮ ಪರಿಸರ ಎಂದರುನ್ಯಾಯಾಧೀಶರು, ಅಧಿಕಾರಿಗಳು, ವಿವಿಧ ಇಲಾಖೆಯ ಮುಖ್ಯಸ್ಥರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಸಸಿಗಳನ್ನು ನೆಡುವ ಮೂಲಕ ಹಸಿರು ಆಂದೋಲನಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ನ್ಯಾಯಾಂಗ ಇಲಾಖೆ, ಅರಣ್ಯ ಇಲಾಖೆಯ ಅಧಿಕಾರಿಗಳು ಹಾಜರಿದ್ದರು
ವೇದಿಕೆ ಕಾರ್ಯಕ್ರಮ:ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ಸಂತೋಷ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಮಾತನಾಡಿ, ಅರಣ್ಯ ಇಲಾಖೆ ಸಹಯೋಗದಲ್ಲಿ 25 ಲಕ್ಷ ಗಿಡಗಳನ್ನು ನೆಡುವ ಮಹೋನ್ನತ ಕಾರ್ಯ ಆಗುತ್ತಿದೆ. ಅರಣ್ಯ ಇಲಾಖೆಯ ಇಂತಹ ಉತ್ತಮ ಕಾರ್ಯಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು ಎಂದರು.
ಸತ್ವನಿಧಿ ಪ್ರೈ.ಲಿ ನಿರ್ದೇಶಕ ಪ್ರಕಾಶ್ ಎ.ಎನ್. ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ಬದಲು ಬಳಸಬಹುದಾದ ಪೂರಕವಾದ ವಸ್ತುಗಳ ಬಗ್ಗೆ ತಿಳಿಸಿಕೊಟ್ಟರು.ವನ್ಯ ಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನ ಕೃಷ್ಣ ಪಟಗಾರ್, ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಮಾತನಾಡಿದರು, ಎಸಿಎಫ್ ವಿಜಯಕುಮಾರ್, ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ರಘುರಾಜ್, ವಿಭಾಗದ ಮುಖ್ಯಸ್ಥರು, ಸಿಬ್ಬಂದಿ ಹಾಜರಿದ್ದರು.