- ಕರ್ನಾಟಕ ಆರ್‌ಟಿಐ ಮಾನವ ಹಕ್ಕುಗಳ ಸಂಘ ಮುಖಂಡ ಮಹಮ್ಮದ್ ಆಗ್ರಹ
- - -- ಸಿ.ಎಂ. ಶಾಬಾಜ್ ಖಾನ್ ಎಂಬಾತ ಯಂಗ್ ಸ್ಟಾರ್ ಗ್ಯಾರಂಟಿ ಯೋಜನೆಯಡಿ ಡೆಬ್ಟ್ ಪ್ರೀ ಇಂಡಿಯಾದ ಮೂಲಕ ಸಾಲ ಮನ್ನಾ ಆಮಿಷ
- ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯ- - -
ಕನ್ನಡಪ್ರಭ ವಾರ್ತೆ ದಾವಣಗೆರೆ
ಯಂಗ್ ಸ್ಟಾರ್ ಎಂಪವರ್‌ಮೆಂಟ್ ಪಕ್ಷದ ಹೆಸರು ಹೇಳಿಕೊಂಡು, ಸಾಲ ಮನ್ನಾ ಮಾಡಿಸುವುದಾಗಿ ಜನರಿಗೆ ವಂಚಿಸುತ್ತಿರುವ ವ್ಯಕ್ತಿಗಳ ವಿರುದ್ಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಆರ್.ಟಿ.ಐ. ಮಾನವ ಹಕ್ಕುಗಳ ಸಂಘ ಟ್ರಸ್ಟಿನ ಸಂಸ್ಥಾಪಕ ರಾಜ್ಯಾಧ್ಯಕ್ಷ ಮಹಮ್ಮದ್ ವಾಸೀಂ ಖಾದ್ರಿ ಆಗ್ರಹಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ. ಶಾಬಾಜ್ ಖಾನ್ ಎಂಬಾತ ಯಂಗ್ ಸ್ಟಾರ್ ಗ್ಯಾರಂಟಿ ಯೋಜನೆಯಡಿ ಡೆಬ್ಟ್ ಪ್ರೀ ಇಂಡಿಯಾದ ಮೂಲಕ ಜನರ ಸಾಲ ಮನ್ನಾ ಮಾಡಿಸುವುದಾಗಿ ಜನರನ್ನು ವಂಚಿಸುತ್ತಿದ್ದಾರೆ. ಮುಸ್ಲಿಂ ಮುಖಂಡರನ್ನು ಭೇಟಿ ಮಾಡಿ, ಸಾಮಾನ್ಯ ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ. ಬೆಂಗಳೂರು ನಿವಾಸಿ ಆಗಿರುವ ಇವರು, ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಲ್ಲದೇ, ತಮಗೆ ಮತ ನೀಡಿದರೆ ಪ್ರತಿಯೊಬ್ಬರ ಸಾಲ ಮನ್ನಾ ಮಾಡಿಸುವುದಾಗಿ ಮುಸ್ಲಿಂ ಏರಿಯಾಗಳಲ್ಲಿ ಪ್ರಚಾರ ಮಾಡಿದ್ದಾರೆ. ಈ ಬಗ್ಗೆ ಮುಸ್ಲಿಂ ಸಮುದಾಯದವರು ಜಾಗೃತರಾಗಿರಬೇಕು ಎಂದರು.ಈಗಾಗಲೇ ರಾಜ್ಯಾದ್ಯಂತ 50 ಸಾವಿರಕ್ಕೂ ಹೆಚ್ಚು ಮಹಿಳೆಯರಿಂದ ತಲಾ ₹349 ಪಡೆದು ಸದಸ್ಯತ್ವ ನೀಡಿದ್ದು, ಜನರಿಗೆ ಸಾಲ ಕಟ್ಟದಂತೆ ದಾರಿ ತಪ್ಪಿಸುತ್ತಿದ್ದಾರೆ. ಸರ್ಕಾರದ ನಕಲಿ ದಾಖಲೆ ಸೃಷ್ಟಿಸಿಕೊಂಡು, ಜನರನ್ನು ಯಾಮಾರಿಸುತ್ತಿದ್ದಾರೆ. ಇಂತಹ ವ್ಯಕ್ತಿ ಮಾಡುತ್ತಿರುವ ಸಾಲದ ಮಾಫಿಯಾದಿಂದಾಗಿ ಜನರು ಮೋಸ ಹೋಗುತ್ತಿದ್ದಾರೆ. ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ತಾವು ಪಡೆದ ಸಾಲ ಕಟ್ಟದೇ ಆಸ್ತಿ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಂತಹ ವ್ಯಕ್ತಿಯಿಂದ ಅಮಾಯಕ ಜನರು ವಂಚನೆಗೆ ಒಳಗಾಗದಂತೆ ತಕ್ಷಣ ಸರ್ಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಇಲ್ಲವಾದರೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಲೀಂ ಜಾವೀದ್, ಡಿ.ಕೆ.ನಯಾಜ್, ಡಿ.ಕೆ.ಫಯಾಜ್ ಇತರರು ಹಾಜರಿದ್ದರು.- - -
-27ಕೆಡಿವಿಜಿ43:ದಾವಣಗೆರೆಯಲ್ಲಿ ಮಹಮ್ಮದ್ ವಾಸೀಂ ಖಾದ್ರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.