ಮುಖ್ಯ ಮಂತ್ರಿ ಸಿದ್ದರಾಮಯ್ಯ ಎನ್.ಆರ್.ಪುರಕ್ಕೆ ಬಂದಿದ್ದಾಗ ರಸ್ತೆ ಅಭಿವೃದ್ಧಿಗೆ ಮನವಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಎನ್.ಆರ್.ಪುರ- ಚಿಕ್ಕಮಗಳೂರು ಹಳೇ ರಸ್ತೆ ಅಭಿವೃದ್ಧಿಗೆ ಸರ್ಕಾರ ಒಪ್ಪಿಗೆ ನೀಡಿದ್ದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿ ಹೊಳಿ ₹50 ಕೋಟಿ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ ಎನ್.ಆರ್.ಪುರಕ್ಕೆ ಬಂದಿದ್ದಾಗ ಚಿಕ್ಕ ಮಗಳೂರು ಹಳೇ ರಸ್ತೆ ಅಭಿವೃದ್ಧಿಗೆ ಮನವಿ ಮಾಡಿದ್ದೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಆ ಪುರಾತನ ರಸ್ತೆಯಲ್ಲಿ ಭದ್ರಾ ಹಿನ್ನೀರು ನಿಂತಿರುವುದರಿಂದ ಸಂಪರ್ಕ ನಿಂತು ಹೋಗಿತ್ತು. ಕೂಸ್ಗಲ್ ಸಮೀಪದ ಭದ್ರಾ ಹಿನ್ನೀರಿಗೆ ಸೇತುವೆ ನಿರ್ಮಿಸಿ ದರೆ ಚಿಕ್ಕಮಗಳೂರಿಗೆ ಹೋಗಲು ಹತ್ತಿರವಾಗಲಿದೆ. ಈಗಾಗಲೇ ಮುಖ್ಯ ಮಂತ್ರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕಾಮಗಾರಿ ನಡೆಸಲು ಸೂಚನೆ ನೀಡಿದ್ದಾರೆ ಎಂದರು.

ಕಾಫಿ ಬೆಳೆಗಾರರು ಒತ್ತುವರಿ ಮಾಡಿ ಕಾಫಿ ಬೆಳೆದ ಜಮೀನನ್ನು ಮಾಲೀಕರಿಗೆ ಲೀಜ್ ಮೇಲೆ ನೀಡುವ ಬಗ್ಗೆ ಕಂದಾಯ ಇಲಾಖೆಯಲ್ಲಿ ತಿದ್ದುಪಡಿ ಮಾಡಬೇಕು ಎಂದು ಮುಖ್ಯ ಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಈ ಹಿಂದೆ ಪಾರಂ ನಂ. 57 ರಲ್ಲಿ ಕಾಫಿ ಬೆಳೆಗಾರರು ಅರ್ಜಿ ಸಲ್ಲಿಸಿದ್ದರೂ ಮಂಜೂರು ಮಾಡಲು ಈಗಿನ ಕಾನೂನಿನಂತೆ ಸಾಧ್ಯವಾಗಿಲ್ಲ. ನಮ್ಮ ಪ್ರಸ್ತಾವನೆಗೆ ಮುಖ್ಯ ಮಂತ್ರಿಗಳು ಒಪ್ಪಿಗೆ ನೀಡಿದ್ದಾರೆ. ಈಗಾಗಲೇ ಅರಣ್ಯ ಹಾಗೂ ಕಂದಾಯ ಭೂಮಿ ಗಡಿ ಗುರುತಿಸಲು ಜಂಟಿ ಸರ್ವೆ ಕಾರ್ಯ ನಡೆಯುತ್ತಿದೆ. ಸರ್ವೆ ಆದ ನಂತರ ಮೀಸಲು ಅರಣ್ಯ ಬಿಟ್ಟು ಉಳಿದ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿ ಕೊಂಡವರಿಗೆ ಹಕ್ಕು ನೀಡಲಾಗುವುದು ಎಂದರು.


-- ಬಾಕ್ಸ್ --

ಹೈಕೋರ್ಟು ಆದೇಶಕ್ಕೆ ಬದ್ಧ

ವಿಧಾನ ಸಭೆಯ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿ ಡಿ.ಎನ್.ಜೀವರಾಜ್ ನನ್ನ ಮೇಲೆ ಕೆಲವು ಸುಳ್ಳು ಆರೋಪ ಮಾಡಿ ನ್ಯಾಯಾಲಯಕ್ಕೆ ಹೋಗಿದ್ದರು. ನ್ಯಾಯಾಲಯದಲ್ಲಿ ಈ ಆರೋಪ ಸುಳ್ಳು ಎಂದು ಸಾಬೀತಾಗಿದೆ. ನ್ಯಾಯಾಲಯದಲ್ಲಿ ನನಗೆ ನ್ಯಾಯ ಸಿಕ್ಕಿದೆ. ಡಿ.ಎನ್.ಜೀವರಾಜ್ ತಿರಸ್ಕೃತ ಅಂಚೆ ಮತಗಳ ಎಣಿಕೆ ಮಾಡಲು ನ್ಯಾಯಾಲಯಕ್ಕೆ ಹೋಗಿದ್ದರು. ಈ ವಿಷಯದಲ್ಲಿ ಮೇ 2 ರಂದು ತಿರಸ್ಕೃತ ಅಂಚೆ ಮತಗಳ ಮರು ಪರಿಶೀಲನೆ ಹಾಗೂ ಮರು ಎಣಿಕೆ ಮಾಡಲು ಹೈಕೋರ್ಟು ಆದೇಶಿಸಿದೆ. ಆದೇಶಕ್ಕೆ ನಾನು ಬದ್ದನಾಗಿದ್ದೇನೆ. ಅಂತಿಮವಾಗಿ ಸತ್ಯಕ್ಕೆ ಜಯ ಸಿಗಲಿದೆ ಎಂದರು.