ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಆರೋಗ್ಯಕ್ಕೆ ಮಾರಕವಾಗಿರುವ ಮಾದಕ ದ್ರವ್ಯ, ಧೂಮಪಾನ, ತಂಬಾಕು ಸೇವನೆಯಂತಹ ಚಟಗಳನ್ನು ತ್ಯಜಿಸಬೇಕು. ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಲಹೆ ನೀಡಿದರು.ನಗರದ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಪೊಲೀಸ್ ಘಟಕದ ವತಿಯಿಂದ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪ್ರೌಢಶಾಲಾ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು. ಮಾದಕ ದ್ರವ್ಯ, ಧೂಮಪಾನ, ತಂಬಾಕು ಇನ್ನಿತರ ಕೆಟ್ಟ ಚಟಗಳಿಂದ ಚಿಕ್ಕ ವಯಸ್ಸಿನಲ್ಲಿಯೇ ಸಾವಿಗೀಡಾಗುವುದನ್ನು ಇಂದು ನಾವು ಕಾಣುತ್ತಿದ್ದೇವೆ. ಇದರಿಂದ ಕುಟುಂಬ ತೊಂದರೆ ಅನುಭವಿಸುವುದನ್ನು ನೋಡುತ್ತಿದ್ದೇವೆ. ಮಾದಕ ವಸ್ತುಗಳು ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬೀರುತ್ತಿದ್ದು, ಚಿಕ್ಕವಯಸ್ಸಿನವರಲ್ಲಿ ರೋಗನಿರೋಧಕ ಶಕ್ತಿ ಕುಂದುತ್ತಿದೆ. ದುಶ್ಚಟಗಳಿಂದ ದೂರವಾದರೆ ಉತ್ತಮ ಬದುಕು ಸಾಗಿಸಬಹುದು ಎಂದರು.
ವಿದ್ಯಾರ್ಥಿಗಳಿಗೆ ಮಾದಕ ವಸ್ತು ಸೇವನೆಯ ದುಷ್ಪರಿಣಾಮಗಳ ಕುರಿತು ಭಾಷಣ ಸ್ಪರ್ಧೆ ಏರ್ಪಡಿಸುವ ಮೂಲಕ ಜಿಲ್ಲಾ ಪೊಲೀಸ್ ಇಲಾಖೆ ಮುಂದಾಗಿರುವುದು ಪ್ರಶಂಸನೀಯ. ಇಡೀ ದಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ಸಂತಸದ ಸಂಗತಿಯಾಗಿದೆ. ತಾಳ್ಮೆಯಿಂದ ತೀರ್ಪುಗಾರರು ವಿದ್ಯಾರ್ಥಿಗಳ ಭಾಷಣ ಆಲಿಸಿ ತೀರ್ಪು ನೀಡಿರುವುದು ಸಹ ಶ್ಲಾಘನೀಯ ಎಂದು ಹೇಳಿದರು. ಮಕ್ಕಳಲ್ಲಿರುವ ಸಾಮರ್ಥ್ಯ ಗುರುತಿಸಿ ಹಲವಾರು ಶಿಕ್ಷಕರು ನಿಸ್ವಾರ್ಥದಿಂದ ಮಕ್ಕಳ ಪ್ರತಿಭೆಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ತಮಗೆ ಒದಗಿರುವ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಳ್ಳಬೇಕು. ಎಷ್ಟೇ ದೊಡ್ಡ ವ್ಯಕ್ತಿಯಾದರೂ ತಾವು ಇದ್ದ ಗ್ರಾಮ, ಜಿಲ್ಲೆ, ಶಾಲೆ ಮರೆಯಬಾರದು ಎಂದರು.ಜಿಪಂ ಸಿಇಒ ಮೋನಾರೋತ್ ಮಾತನಾಡಿ, ಭಾಷಣ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಿದ್ದಾರೆ. ಮುಂಬರುವ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಜಿಲ್ಲೆಗೆ ಕೀರ್ತಿ ತರಬೇಕು ಎಂದರು. ಇದಕ್ಕೂ ಮೊದಲು ನಡೆದ ಸ್ಪರ್ಧೆಯ ಉದ್ಘಾಟನೆ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ತೃಪ್ತಿ ತಂದಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಹಾದಿ ಯಾವುದು ಎಂಬುದನ್ನು ತಿಳಿಸಬೇಕು. ಪ್ರೌಢಶಾಲಾ, ಪಿಯುಸಿ ಹಂತದ ವಿದ್ಯಾರ್ಥಿಗಳು ತಿಳಿಸಿದ ವಿಷಯವನ್ನು ಗ್ರಹಿಸಿ ಜೀವನದಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆ ಹೆಚ್ಚು ಇರುತ್ತದೆ. ಹೀಗಾಗಿ ಮಾದಕ ವಸ್ತುಗಳ ಸೇವನೆಯ ದುಷ್ಪರಿಣಾಮಗಳ ಕುರಿತ ಭಾಷಣ ಸ್ಪರ್ಧೆಯ ಮೂಲಕ ಜಾಗೃತಿ ಮೂಡಿಸುವ ವಿಶೇಷ ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಂದರು.
ಪ್ರಥಮ, ದ್ವಿತೀಯ ವಿಜೇತರನ್ನು ಮಾತ್ರ ಗುರುತಿಸುತ್ತಿಲ್ಲ. ಪ್ರತಿ ವಿಭಾಗದಲ್ಲಿ ೧೦ ಪ್ರಶಂಸನಾ ಬಹುಮಾನಗಳನ್ನು ನೀಡುತ್ತಿದ್ದೇವೆ. ಸಮಾಜ ಮತ್ತು ಆರೋಗ್ಯಕ್ಕೆ ಹಾನಿಕಾರಕವಾದ ಮಾದಕ ವಸ್ತುಗಳಿಂದ ದೂರವಿರಬೇಕು ಎಂಬ ಸಂದೇಶವನ್ನು ವಿದ್ಯಾರ್ಥಿಗಳ ಮೂಲಕ ಕೊಡಲಾಗುತ್ತಿದೆ. ಇದಕ್ಕಾಗಿ ಬೋಧಕರು, ಶಿಕ್ಷಕರು, ಇಲಾಖೆಗಳು ಸಹಕರಿಸಿವೆ ಎಂದು ಎಸ್ಪಿ ಡಾ.ಕವಿತಾ ತಿಳಿಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಜುನಾಥ ಪ್ರಸನ್ನ ಮಾತನಾಡಿ, ಸ್ವಾಸ್ತ್ಯ ಸಮಾಜ ನಿರ್ಮಾಣವಾಗಬೇಕಾದರೆ ಮಾದಕ ವಸ್ತುಗಳ ಸೇವನೆಯಿಂದ ಮುಕ್ತರಾಗಬೇಕು. ಹದಿ ಹರೆಯದ ವಯಸ್ಸಿನಲ್ಲಿ ಮಾದಕ ವಸ್ತು ಸೇವನೆ ಚಟಕ್ಕೆ ಬಲಿಯಾಗದಂತೆ ಅರಿವು ಮೂಡಿಸಬೇಕು. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದನ್ನು ಮುಖ್ಯ ಗುರಿಯಾಗಿಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಡಿವೈಎಸ್‌ಪಿ ಲಕ್ಷ್ಮಯ್ಯ, ತೀರ್ಪುಗಾರ ಉಪನ್ಯಾಸಕರಾದ ಜಿ.ಶಾಲಿನಿ ಕುಮಾರಿ, ಸಹ ಪ್ರಾಧ್ಯಪಕರಾದ ಎಂ.ಕೆ. ಮಂಜುನಾಥ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.