ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಎಂಬ ಪಾದಯಾತ್ರೆ ಒಂದು ತಿಂಗಳಿನಿಂದ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸಂಚರಿಸುತ್ತಿದೆ. ಈ ಸಂದೇಶಕ್ಕೆ ಕಲಾತ್ಮಕ ಆಯಾಮ ಕೊಡುವ ರೀತಿಯಲ್ಲಿ ಪರಸಪ್ಪನ ಕಥೆ ಎಂಬ ಬೀದಿ ನಾಟಕ ನಗರದ ದುಂಡಿಬಸವೇಶ್ವರ ದೇವಸ್ಥಾನದ ವೃತ್ತದಲ್ಲಿ ಪ್ರದರ್ಶನವಾಯಿತು.
ಹಾವೇರಿ: ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ ಎಂಬ ಪಾದಯಾತ್ರೆ ಒಂದು ತಿಂಗಳಿನಿಂದ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸಂಚರಿಸುತ್ತಿದೆ. ಈ ಸಂದೇಶಕ್ಕೆ ಕಲಾತ್ಮಕ ಆಯಾಮ ಕೊಡುವ ರೀತಿಯಲ್ಲಿ ಪರಸಪ್ಪನ ಕಥೆ ಎಂಬ ಬೀದಿ ನಾಟಕ ನಗರದ ದುಂಡಿಬಸವೇಶ್ವರ ದೇವಸ್ಥಾನದ ವೃತ್ತದಲ್ಲಿ ಪ್ರದರ್ಶನವಾಯಿತು.ಕಿಕ್ಕಿರಿದು ಸೇರಿದ್ದ ಜನಸಂದಣಿಯ ನಡುವೆ ಪರಸಪ್ಪ ಎಂಬ ಕಾರ್ಮಿಕ ಕಬ್ಬಿನ ಕಾರ್ಖಾನೆಯೊಂದರ ಆವರಣದಲ್ಲಿ ನಡೆಯುತ್ತಿರುವ ಕಾರ್ಮಿಕ ದಿನಾಚರಣೆಯ ಸಮಾರಂಭದಲ್ಲಿ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ಪಡೆಯುತ್ತಿರುವ ಸನ್ನಿವೇಶದೊಂದಿಗೆ ನಾಟಕ ಆರಂಭವಾಗುತ್ತದೆ.ಬಂಗಾರದ ಪದಕ, ನಗದು ಪಡೆದ ಪರಸಪ್ಪ ನಂತರ ದುಷ್ಟ ಮಿತ್ರರ ಪಾರ್ಟಿ ನೆಪದಲ್ಲಿ ಕುಡಿತಕ್ಕೆ ಬೀಳುತ್ತಾನೆ. ಕ್ರಮೇಣ ಅಧಃಪತನಕ್ಕೆ ಬೀಳುವ ಪರಸಪ್ಪ ತನ್ನ ಬಂಗಾರದ ಪದಕ ಮಾರಲು ಸಾರಾಯಿ ಅಂಗಡಿಗೆ ಬಂದಾಗ ಏನಿದ್ದಿ, ಏನಾದ್ಯೋ, ಹಾದಿ ಬಿಟ್ಟೆಲ್ಲೊ ನೀ ಹಾದಿ ಬಿಟ್ಟೆಲ್ಲೋ.. ಎಂದು ಅಂಗಡಿ ಮಾಲೀಕ ಹೀಯಾಳಿಸುತ್ತಾನೆ.ಪ್ರಾಯಶ್ಚಿತೆಗೆ ಗುರಿಯಾಗುವ ಪರಸಪ್ಪ ಮರು ವರ್ಷದ ಕಾರ್ಮಿಕ ದಿನಾಚರಣೆಯ ಸಮಾರಂಭಕ್ಕೆ ಬಂದು ನಾನು ತಪ್ಪು ಮಾಡಿದೆ, ನನ್ನ ಹೆಸರನ್ನು ಉಳಿಸಿ ಕೊಳ್ಳುತ್ತೇನೆ ದುಶ್ಚಟಗಳನ್ನು ಬಿಡುತ್ತೇನೆ ಎಂದು ಎಲ್ಲರೆದರು ಪ್ರತಿಜ್ಞೆ ಮಾಡುತ್ತಾನೆ. ವಿಶೇಷವೆಂದರೆ ನಾಟಕವನ್ನು ವೀಕ್ಷಿಸಿದ ಸದಾಶಿವ ಸ್ವಾಮಿಗಳ ಜೋಳಿಗೆಗೆ ತನ್ನ ದುಶ್ಚಟಗಳನ್ನು ಹಾಕುವ ಸನ್ನಿವೇಶದೊಂದಿಗೆ ಪರಸಪ್ಪನ ಕಥೆ ನಾಟಕ ಮುಕ್ತಾಯವಾಗುತ್ತದೆ.ಮುಖ್ಯ ಪಾತ್ರ ಪರಸಪ್ಪನಾಗಿ ಶಂಕರ ತುಮ್ಮಣ್ಣನವರ, ಶಶಿಕಲಾ ಅಕ್ಕಿ, ದಾರಿ ತಪ್ಪಿಸುವ ಗೆಳೆಯರಾಗಿ ಮುತ್ತುರಾಜ ಹಿರೇಮಠ ಮತ್ತು ಶಂಕರ ಮಡಿವಾಳರ ಗಮನ ಸೆಳೆದರು. ಇನ್ನುಳಿದಂತೆ ಬಸವರಾಜ ಪೂಜಾರ, ತಿಪ್ಪೇಸ್ವಾಮಿ, ಈರಣ್ಣ ಬೆಳವಡಿ, ಸಿ.ಎಸ್. ಚಿಕ್ಕಮಠ, ಸೋಮಣ್ಣ ಡೊಂಬರಮತ್ತೂರ, ಬಸವರಾಜ ಮುಂತಾದವರು ಅಭಿನಯಿಸಿದ್ದರು.ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಸುರೇಶ ಜಂಗಮಶೆಟ್ಟಿ ನಾಟಕಕ್ಕೆ ಚಾಲನೆಯನ್ನು ನೀಡಿದರು. ಪ್ರಗತಿ ಕಲಾ ತಂಡ, ಭಾರತ ಜ್ಞಾನವಿಜ್ಞಾನ ಸಮಿತಿ ಹಾಗೂ ಜಿಲ್ಲಾ ಕಲಾ ಬಳಗದ ಕಲಾವಿದರು ಅಭಿನಯಿಸಿದ್ದರು.