ಸಾರಾಂಶ
ದಾವಣಗೆರೆ : ರಾಜ್ಯಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರಿಸ್ ಪಿಒಪಿ ಗಣೇಶ ವಿಗ್ರಹಗಳ ಮಾರಾಟ, ಉತ್ಪಾದನೆ ಹಾಗೂ ವಿಸರ್ಜನೆ ನಿಷೇಧಿಸಲಾಗಿದೆ. ಗೌರಿ-ಗಣೇಶ ಹಬ್ಬದಲ್ಲಿ ಸಾರ್ವಜನಿಕರು ಪರಿಸರಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಸಂಭ್ರಮ, ಸಡಗರದಿಂದ ಹಬ್ಬ ಆಚರಿಸುವಂತೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.
ಗೌರಿ ಗಣೇಶ ಹಬ್ಬ ಸಂದರ್ಭದಲ್ಲಿ ಸಾರ್ವಜನಿಕರು ಬಣ್ಣರಹಿತ, ಮಣ್ಣಿನ ಅಥವಾ ಇತರೇ ಪರಿಸರಸ್ನೇಹಿ ಗಣೇಶ ಮೂರ್ತಿಗಳ ಪ್ರತಿಷ್ಠಾಪಿಸಿ, ಹಬ್ಬ ಆಚರಿಸಬೇಕು. ಬಳಿಕ ಸ್ಥಳೀಯ ಸಂಸ್ಥೆಗಳು ನಿಗದಿಪಡಿಸಿದ ಸ್ಥಳಗಳಲ್ಲಿಯೇ ಮೂರ್ತಿಗಳನ್ನು ವಿಸರ್ಜಿಸಬೇಕು. ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಉಳಿದಿರುವ ಪಿಒಪಿ, ರಾಸಾಯನಿಕ ಬಣ್ಣದ ವಿಗ್ರಹಗಳನ್ನು ತನಿಖೆ ಮಾಡಿ ವಶಕ್ಕೆ ಪಡೆದು, ಒಂದೇ ಸ್ಥಳದಲ್ಲಿ ವಿಲೇವಾರಿ ಮಾಡುವಂತೆ ಸೂಕ್ತ ಕ್ರಮ ವಹಿಸಬೇಕು ಎಂದು ಸೂಚಿಸಿದ್ದಾರೆ.
ಅನುಮತಿ ಪಡೆಯಬೇಕು:
ಗಣೇಶ ಉತ್ಸವ ಆಚರಿಸುವ ಸಾರ್ವಜನಿಕರಿಗೆ ಹಾಗೂ ಸ್ಥಳೀಯ ಸಮಿತಿಗಳಿಗೆ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಲು ಸ್ಥಳೀಯ ಸಂಸ್ಥೆಗಳು ಮಾಹಿತಿ ನೀಡಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನಾ ಸಮಿತಿಯವರು ಉತ್ಸವಕ್ಕೆ ಸಂಬಂಧಿಸಿದ ಅನುಮತಿ, ಧ್ವನಿವರ್ಧಕ ಬಳಕೆ ಹಾಗೂ ಇತರೆ ಅನುಮತಿಗಳನ್ನು ಪಡೆದುಕೊಳ್ಳಬೇಕು. ಗಣೇಶ ಪೆಂಡಾಲಗಳಲ್ಲಿ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ವಸ್ತುಗಳಾದ ಬಲೂನ್, ಪ್ಲಾಸ್ಟಿಕ್ ಸ್ಟಿಕ್‌ಗಳು, ಪ್ಲಾಸ್ಟಿಕ್ ಕ್ಯಾಂಡಿ ಸ್ಟಿಕ್‌ಗಳು, ಪ್ಲಾಸ್ಟಿಕ್ ಐಸ್ ಕ್ರೀಮ್ ಸ್ಟಿಕ್‌ಗಳು, ಅಲಂಕಾರಕ್ಕಾಗಿ ಬಳಸುವ ಪಾಲಿಸ್ಟೈರೀನ್ (ಥರ್ಮೋಕೋಲ್) ಬಳಸದಂತೆ ನಿಗಾ ವಹಿಸಬೇಕು.
ಪ್ಲಾಸ್ಟಿಲ್ ವಸ್ತುಗಳು ನಿಷೇಧ:
ಎಲ್ಲ ರೀತಿಯ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳು, ಡೈನಿಂಗ್ ಟೇಬಲ್‌ನಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಗಳು, ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳು, ಪ್ಲಾಸ್ಟಿಕ್ ಪ್ಲೇಟ್- ಕಪ್‌ಗಳು ಮತ್ತು ಲೋಟಗಳು, ಫೋರ್ಕ್, ಚಮಚ, ಚಾಕುಗಳು ಪ್ಲಾಸ್ಟಿಕ್ ಟ್ರೇಗಳು, ಸ್ವೀಟ್ ಬಾಕ್ಸ್‌ಗಳು, ಆಮಂತ್ರಣ ಪತ್ರಗಳು, ಸ್ಟ್ರೀಟ್ ಪ್ಯಾಕೆಟ್‌ಗಳ ಸುತ್ತ ಸುತ್ತುವ ಪದರ ಅಥವಾ ಪ್ಯಾಕಿಂಗ್ ಫಿಲ್ಡ್‌ಗಳು ಮತ್ತು ಪ್ಲಾಸ್ಟಿಕ್ ಸ್ಪೀಕರ್‌ಗಳನ್ನು ಬಳಸುವಂತಿಲ್ಲ.
ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡ, ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಯಾವುದೇ ರೀತಿಯ ಗಣೇಶ ವಿಗ್ರಹಗಳು ಹಾಗೂ ಭಾರಲೋಹ ಮಿಶ್ರಿತ ರಾಸಾಯನಿಕಯುಕ್ತ ಬಣ್ಣದಿಂದ ಅಲಂಕೃತಗೊಂಡಂತಹ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಾದ ಯಾವುದೇ ರೀತಿಯ ಇತರೇ ವಿಗ್ರಹಗಳ ಉತ್ಪಾದನೆ, ಮಾರಾಟ ಮತ್ತು ಯಾವುದೇ ನೀರಿನ ಮೂಲಗಳಲ್ಲಿ ವಿಸರ್ಜಿಸುವುದನ್ನು ಜಿಲ್ಲೆಯ ಎಲ್ಲ ನಗರಗಳ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗಳಲ್ಲಿ ನಿಷೇಧಿಸಲಾಗಿದೆ ಎಂದು ಡಿಸಿ ಆದೇಶಿಸಿದ್ದಾರೆ.
ಬಾಕ್ಸ್ * ಮಾಹಿತಿ ಸಂಗ್ರಹಕ್ಕೆ ಸೂಚನೆ ನಾವೀನ್ಯತೆಯುಳ್ಳ ಪರಿಸರಸ್ನೇಹಿ ಗೌರಿ-ಗಣೇಶ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ವಿಸರ್ಜನಾ ವಿಧಾನಗಳ ಕುರಿತು ಸಾರ್ವಜನಿಕರಿಗೆ ಸ್ಥಳೀಯ ಸಂಸ್ಥೆಗಳಿಂದ ಹೆಚ್ಚಿನ ಪ್ರಚಾರ ಕೈಗೊಳ್ಳಲು ಮತ್ತು ಸಾರ್ವಜನಿಕವಾಗಿ ಅನಧಿಕೃತ ಪ್ಲೆಕ್ಸ್, ಪ್ಲಾಸ್ಟಿಕ್ ಬ್ಯಾನರ್‌ಗಳ ಹಾವಳಿ ಕುರಿತಂತೆ ಮತ್ತು ಪಿಒಪಿ ಗೌರಿ- ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಮಾಡುವವರ ಮಾಹಿತಿ ಸಂಗ್ರಹಿಸಲು ಡಿಸಿ ಜಿ.ಎಂ.ಗಂಗಾಧರ ಸ್ವಾಮಿ ತಿಳಿಸಿದ್ದಾರೆ.