ಸಾರಾಂಶ
ಚಿಕ್ಕಬಳ್ಳಾಪುರ : ಕ್ಷೇತ್ರದ ಗ್ರಾಮಾಂತರ ಭಾಗದ ರಸ್ತೆಗಳಿಗೆ ಸುಮಾರು 30 ಕೋಟಿಗೂ ಅಧಿಕ ಹಣ ಬಿಡುಗಡೆಯಾಗಿದ್ದು ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.
ತಾಲೂಕಿನ ಡೊಡ್ಡಪೈಲಗುರ್ಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ರೆಡ್ಡಿಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡಕ್ಕೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿ, ರೆಡ್ಡಿಹಳ್ಳಿ ಗ್ರಾಮದ ಅಂಗನವಾಡಿ ಕಟ್ಟಡವು 20 ಲಕ್ಷ ಅನುದಾನದಲ್ಲಿ ನಿರ್ಮಾಣ ವಾಗುತ್ತಿದ್ದು, ಗ್ರಾಮೀಣ ಭಾಗದ ಬಡವರು ದಲಿತ,ಹಿಂದುಳಿದ, ಅಲ್ಪಸಂಖ್ಯಾತರು ಸಮಾಜದಲ್ಲಿ ಮುಂದೆ ಬರಬೇಕು ಎಂದರು.
ಗ್ಯಾರಂಟಿಯಿಂದ ಅರ್ಥಿಕ ಸಬಲತೆ
ಈ ಗಾಗಲೇ ಪಂಚ ಗ್ಯಾರಂಟಿಗಳನ್ನು ನಮ್ಮ ಸರ್ಕಾರ ನೀಡಿದ್ದು ಇದರಲ್ಲಿ ಮಹಿಳೆಯರು ಅರ್ಥಿಕವಾಗಿ ಸಬಲರಾಗಲು ಗೃಹಲಕ್ಷ್ಮಿ ಯೋಜನೆಯಡಿ ವಾರ್ಷಿಕ 24 ಸಾವಿರ ಮತ್ತು ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದೆ. ಅದೇರೀತಿ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಹಾಗೂ ವಿದ್ಯಾವಂತ ನಿರುದ್ಯೋಗಿಗಳಿಗೆ ಯುವ ನಿಧಿ ನೀಡುತ್ತಿದ್ದೇವೆ ಎಂದರು.
ಕ್ಷೇತ್ರದ ಎಲ್ಲಾ 20 ಸಾವಿರ ವಿದ್ಯಾರ್ಥಿಗಳಿಗೆ ದೀಪಾವಳಿ ಹಬ್ಬಕ್ಕೆ ಒಂದು ಜೊತೆ ಬಟ್ಟೆಗಳನ್ನು ಮತ್ತು ಅಂಗನವಾಡಿ ವಿದ್ಯಾರ್ಥಿಗಳಿಗೆ ಸಹಾ ಹೊಸ ಬಟ್ಟೆ ನೀಡಲಾಗುವುದು. ಎಸ್ ಎಸ್ ಎಲ್ ಸಿ, ಪಿಯುಸಿ,ಪದವಿ ವಿದ್ಯಾರ್ಥಿಗಳಿಗೆ ತಲಾ ಸಾವಿರ ರೂಗಳ ವಿದ್ಯಾರ್ಥಿ ವೇತನ , ಇಂಜನೀಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ತಲಾ ಐದು ಸಾವಿರ ರೂಗಳ ವಿದ್ಯಾರ್ಥಿ ವೇತನವನ್ನು ಈ ಬಾರಿಯೂ ನೀಡಲಾಗುವುದು ಎಂದರು..
ಸೌಲಭ್ಯಕ್ಕಾಗಿ ವಾಟ್ಸ್‌ಅಪ್
ಗ್ರಾಮಗಳಲ್ಲಿ ವಾಟ್ಸ್ ಅಪ್ ಗ್ರೂಪ್ ಮಾಡಿ ಗ್ರಾಮಕ್ಕೆ ಬೇಕಾದ ಅಗತ್ಯತೆಗಳನ್ನು ಮತ್ತು ತಮಗೆ ಶಾಸಕರಿಂದ ಆಗಬೇಕಾದ ಕೆಲಸಗಳ ಬಗ್ಗೆ ಅದರಲ್ಲಿ ನಮೂದಿಸಿದರೆ ಶೀಘ್ರದಲ್ಲೇ ಪರಿಹಾರಕ್ಕೆ ಪ್ರಯತ್ನಿಸಲಾಗುವುದು. ಗ್ರಾಮಗಳಲ್ಲಿ ಚುನಾವಣೆ ಬಂದಾಗ ಮಾತ್ರ ಒಂದುವಾರ ರಾಜಕೀಯ ಮಾಡಿ, ಚುನಾವಣೆಯ ನಂತರ ಪರಸ್ಪರ ಸಹ ಬಾಳ್ವೆಯಿಂದ ಇರಬೇಕು. ದ್ವೇಶದಿಂದ ಎನೂ ಸಾಧಿಸಲಾಗದು ಎಂದರು. ಈ ವೇಳೆ ಸಿಡಿಪಿಓ ಗಂಗಾಧರ್,ಡೊಡ್ಡಪೈಲಗುರ್ಕಿ ಗ್ರಾಪಂ ಅಧ್ಯಕ್ಷೆ ಗಾಯತ್ರಿ, ಉಪಾಧ್ಯಕ್ಷ ನಾಗರಾಜ್, ಸದಸ್ಯ ವಸಂತ್, ಪಿಡಿಓ ಮುನಿರಾಜು, ಮುಖಂಡರಾದ ಜೋಳದ ಕಿಟ್ಟಿ, ಅಡ್ಡಗಲ್ ಶ್ರೀಧರ್,ಲಾಯರ್ ನಾರಾಯಣಸ್ವಾಮಿ, ಎಸ್.ಪಿ.ಶ್ರೀನಿವಾಸ್, ಹಳ್ಳಿ ಮಕ್ಕಳ ಸಂಘದ ರಾಜ್ಯಾಧ್ಯಕ್ಷ ವೆಂಕಟರೋಣಪ್ಪ, ನಾಗಭೂಷಣ್, ಪಿಎಸ್ಐಗಳಾದ ಜಗದೀಶ್ ರೆಡ್ಡಿ, ಗುಣವತಿ, ಮತ್ತಿತರರು ಇದ್ದರು.