ನರಗುಂದ ಪಟ್ಟಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನ ಪ್ರಮುಖ ಶಾಖೆಗಳು ಮಹಡಿ ಮೇಲೆ ಇರುವುದರಿಂದ ಅಂಗವಿಕಲರು, ವೃದ್ಧರು ಪರದಾಡುವಂತಾಗಿದೆ. ನೆಲಮಹಡಿಗೆ ಶಾಖೆ ಸ್ಥಳಾಂತರಿಸಿ ಎಂದು ಒತ್ತಾಯಿಸುತ್ತಿದ್ದಾರೆ.
ಎಸ್.ಜಿ. ತೆಗ್ಗಿನಮನಿ
ನರಗುಂದ: ಪಟ್ಟಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ನ ಪ್ರಮುಖ ಶಾಖೆಗಳು ಮಹಡಿ ಮೇಲೆ ಇರುವುದರಿಂದ ಅಂಗವಿಕಲರು, ವೃದ್ಧರು ಪರದಾಡುವಂತಾಗಿದೆ.ಇಂಡಿಯನ್ ಒವರ್‌ಸೀಸ್ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಶಾಖೆಗಳು ಮಹಡಿಯ ಮೇಲಿವೆ. ಪಿಂಚಣಿ, ವೇತನ, ಪರಿಹಾರ ಮತ್ತಿತರ ಸಾರ್ವಜನಿಕರ ಪ್ರಮುಖ ವ್ಯವಹಾರಗಳು ಇಲ್ಲಿ ನಡೆಯುತ್ತವೆ. ಪ್ರತಿಯೊಬ್ಬರೂ ಬ್ಯಾಂಕ್ ಖಾತೆ ಹೊಂದಿರುವುದರಿಂದ ಒಂದಲ್ಲ ಒಂದು ಕಾರ್ಯ ನಿಮಿತ್ತ ಬ್ಯಾಂಕ್‌ಗೆ ಭೇಟಿ ನೀಡಲೇಬೇಕಾಗುತ್ತದೆ.
ಗರ್ಭಿಣಿಯರು, ವೇತನ, ಪಿಂಚಣಿ ಪಡೆಯಲು ಬರುವ ಅಂಗವಿಕಲರು, ವಯೋವೃದ್ಧರಿಗೆ ಮಹಡಿ ಮೇಲೇರುವುದು ಕಷ್ಟವಾಗುತ್ತಿದೆ. ಈ ಕುರಿತು ಹಲವು ಬಾರಿ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಕೆಲವು ಗ್ರಾಹಕರು ದೂರಿದ್ದಾರೆ.ಕೆಲವು ಬ್ಯಾಂಕ್ ಶಾಖೆಗಳ ಎದುರು ವಾಹನ ಪಾರ್ಕಿಂಗ್ ಸ್ಥಳಾವಕಾಶವೂ ಇಲ್ಲ. ದ್ವಿಚಕ್ರ ವಾಹನಗಳು ಕಟ್ಟಡದ ಮುಂದೆ ತುಂಬಿ, ಜನರಿಗೆ ಸಂಚರಿಸಲು ಜಾಗವೇ ಇಲ್ಲದಂತಾಗುತ್ತಿದೆ. ತ್ರಿಚಕ್ರ ವಾಹನದಲ್ಲಿ ಬರುವ ಅಂಗವಿಕಲರಿಗೆ ವಾಹನ ನಿಲ್ಲಿಸಲು ಸ್ಥಳವಿರುವುದಿಲ್ಲ, ಜತೆಗೆ ಮಹಡಿ ಏರಲೂ ಸಾಧ್ಯವಾಗುವುದಿಲ್ಲ.
ಹಲವು ಬಾರಿ ಅಂಗವಿಕಲರು, ವೃದ್ಧರು ಬ್ಯಾಂಕ್ ಶಾಖೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಕುರಿತು ಅಳಲು ತೋಡಿಕೊಂಡಿದ್ದಾರೆ. ಬ್ಯಾಂಕ್ ಶಾಖೆ ನೆಲ ಅಂತಸ್ತಿಗೆ ಸ್ಥಳಾಂತರಿಸುವಂತೆ ಕೋರಿದ್ದಾರೆ. ಬ್ಯಾಂಕ್ ಅಧಿಕಾರಿಗಳು ಅಸಹಾಯಕ ಸ್ಥಿತಿಯಲ್ಲಿರುವ ಗ್ರಾಹಕರ ಕುರಿತು ಕಾಳಜಿ ವಹಿಸುವ ಅಗತ್ಯವಿದೆ ಎಂದು ಗ್ರಾಹಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪಟ್ಟಣದ 1ನೇ ಅಂತಸ್ತಿನಲ್ಲಿರುವ ಇಂಡಿಯನ್ ಒವರ್‌ಸೀಸ್, ಯೂನಿಯನ್, ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆಗಳನ್ನು ನೆಲಅಂತಸ್ತಿಗೆ ಸ್ಥಳಾಂತರಿಸಬೇಕು. ಮೇಲಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಂಡು ಅಂಗವಿಕಲರಿಗೆ, ವೃದ್ಧರಿಗೆ ಅನುಕೂಲ ಕಲ್ಪಿಸಬೇಕು ಎಂದು ವಿಶೇಷಚೇತನ ಬ್ಯಾಂಕ್ ಗ್ರಾಹಕ ರಮೇಶ ಶೆಳಕೆ ಹೇಳಿದರು.
ಪಟ್ಟಣದ ಮಹಡಿಯ ಮೇಲಿರುವ ಬ್ಯಾಂಕ್‌ಗಳಲ್ಲಿ ವ್ಯವಹಾರ ಮಾಡಲು ಮಹಿಳೆಯರು, ವೃದ್ಧರು, ಅಂಗವಿಕಲರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳನ್ನು ನೆಲಅಂತಸ್ತಿಗೆ ಸ್ಥಳಾಂತರಿಸಬೇಕು ಎಂದು ಜಯ ಕರ್ನಾಟಕ ಜಿಲ್ಲಾ ಮುಖಂಡ ಬಸವರಾಜ ತಾವರೆ ಹೇಳಿದರು.