ಕರಾವಳಿ ಉತ್ಸವದ ಅಂಗವಾಗಿ ಕಾರವಾರದ ಮಾಲಾದೇವಿ ಮೈದಾನದಲ್ಲಿ, ಶನಿವಾರ ಆಯೋಜಿಸಲಾಗಿದ್ದ ಶ್ವಾನ ಪ್ರದರ್ಶನಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಷ್ ಚಾಲನೆ ನೀಡಿದರು.

ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ಕಾರವಾರದ ಮಾಲಾದೇವಿ ಮೈದಾನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಇಲಾಖೆ ವತಿಯಿಂದ ಶನಿವಾರ ಆಯೋಜಿಸಲಾಗಿದ್ದ ಶ್ವಾನ ಪ್ರದರ್ಶನವನ್ನು ಜಿಲ್ಲಾ ಪಂಚಾಯತ್ ಸಿಇಒ ಡಾ. ದಿಲೀಷ್ ಸಸಿ ಪ್ರದರ್ಶನ ಆವರಣದ ರಿಬ್ಬನ್ ತೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಲ್ಯಾಬ್ರಾಡರ್, ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರಿವರ್, ಮುಧೋಳ ಹೌಂಡ್, ಪೊಮೇರಿಯನ್, ವೇನಸ್ ಕಾರ್ಗಿ, ರಾಜ ಪಾಳ್ಯಮ್, ಬೆಲ್ಜಿಯನ್ ಮೆಲಿನಯ್ಸ್ ಸೇರಿದಂತೆ ವಿವಿಧ ತಳಿಯ ನಾಯಿಗಳು ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಮತ್ತು ಕೈಗಾದ ಕೈಗಾರಿಕಾ ಭದ್ರತಾ ಪಡೆಯ ಶ್ವಾನಗಳು ತಮ್ಮ ಸಾಹಸ, ಬುದ್ಧಿವಂತಿಕೆ ಮತ್ತು ಕೌಶಲ್ಯವನ್ನು ಪ್ರದರ್ಶಿಸಿ, ನೆರೆದಿದ್ದ ನೂರಾರು ಸಂಖ್ಯೆಯ ಸಾರ್ವಜನಿಕರನ್ನು ಆಶ್ಚರ್ಯಚಕಿತಗೊಳಿಸಿದವು.

ಪೊಲೀಸ್ ಇಲಾಖೆಯ ಶೈನಿ, ಮಾರ್ವೆಲ್ ಮತ್ತು ಅಖಿರ ಹೆಸರಿನ ಶ್ವಾನಗಳು ಶಿಸ್ತಿನ ಆದೇಶಗಳನ್ನು ಪ್ರದರ್ಶಿಸಿದರೆ ಮತ್ತು ಕೈಗಾರಿಕಾ ಭದ್ರತಾ ಪಡೆಯ ಐರಾ, ಅಭಯ್ ಮತ್ತು ಭೈರವ ಶ್ವಾನಗಳು ರೋಮಾಂಚಕ ಸಾಹಸ ಚಟುವಟಿಕೆಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾದವು, ಈ ಎರಡೂ ಇಲಾಖೆಗಳ ಶ್ವಾನಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ₹10,000 ನಗದು ಬಹುಮಾನ ನೀಡಿ, ಅಭಿನಂದಿಸಿದರು.

ಬೆಂಗಳೂರಿನಿಂದ ಆಗಮಿಸಿದ್ದ ಕುಮಾರ್ ಅವರ 2 ಶ್ವಾನಗಳು ವಿವಿಧ ಆಕರ್ಷಕ ಬುದ್ದಿವಂತ ಚಟುವಟಿಕೆಗಳನ್ನು ಪ್ರದರ್ಶಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾದವು. ಪ್ರದರ್ಶನದಲ್ಲಿ ಜಿಲ್ಲೆಯ ಮತ್ತು ಹೊರ ಜಿಲ್ಲೆಯ ಶ್ವಾನಗಳು ಭಾಗವಹಿಸಿದ್ದು, ಚಾಂಪಿಯನ್ ವಿಭಾಗದಲ್ಲಿ ವಿಜೇತವಾದ ಶ್ವಾನಗಳಿಗೆ ಮತ್ತು ಪ್ರತಿ ವಿಭಾಗದಲ್ಲೂ ವಿಜೇತವಾದ ಶ್ವಾನಗಳಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ನಾಯಿಗಳನ್ನು ಆರೋಗ್ಯಕರವಾಗಿ ಪೋಷಣೆ ಮಾಡುವ ಬಗ್ಗೆ, ಅವುಗಳಿಗೆ ಅಗತ್ಯ ಲಸಿಕೆಗಳನ್ನು ನೀಡುವ ಬಗ್ಗೆ ಪಶು ವೈದ್ಯರು ಮಾಹಿತಿ ನೀಡಿದರು. ದೇಶಿ ತಳಿಯ ನಾಯಿ ಮರಿಗಳನ್ನು ಉಚಿತವಾಗಿ ದತ್ತು ನೀಡಲು ಕಾರ್ಯಕ್ರಮದಲ್ಲಿ ಸೌಲಭ್ಯ ಕಲ್ಪಿಸಲಾಗಿತ್ತು.

ಶ್ವಾನಗಳ ಸ್ಪರ್ಧೆಯಲ್ಲಿ ಸುನೀಲ್ ಉಡಾಡಿ ಅವರ ಜರ್ಮನ್ ಶೆಫರ್ಡ್ ಶ್ವಾನಕ್ಕೆ ಪ್ರಥಮ ಬಹುಮಾನ ₹25,000, ವೆಂಕಪ್ಪ ನವಲಗಿ ಮುಧೋಳ ಅವರ ಮುಧೋಳ ತಳಿ ಶ್ವಾನಕ್ಕೆ ದ್ವಿತೀಯ ಬಹುಮಾನ ₹15,000 ಮತ್ತು ಸುಹಾಸ್ ದಾವಣಗೆರೆ ಅವರ ಬೀಗಲ್ ತಳಿ ಶ್ವಾನಕ್ಕೆ ತೃತೀಯ ಬಹುಮಾನವಾಗಿ ₹10,000 ನೀಡಲಾಯಿತು.

ಶ್ವಾನ ಪ್ರದರ್ಶನಕ್ಕಾಗಿ 25 ತಳಿಗಳ ಒಟ್ಟು 118 ಶ್ವಾನಗಳನ್ನು ನೋಂದಣಿ ಮಾಡಲಾಗಿದ್ದು, 21 ತಳಿಗಳ 52 ನಾಯಿಗಳು ಭಾಗವಹಿಸಿದ್ದು, ಶ್ವಾನ ಮರಿಗಳ ವಿಭಾಗದಲ್ಲಿ 11 ಶ್ವಾನಗಳು ಭಾಗವಹಿಸಿದ್ದವು.

ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಪಶುಪಾಲನೆ ಇಲಾಖೆಯ ಉಪನಿರ್ದೇಶಕ ಡಾ. ಮೋಹನ್ ಕುಮಾರ್, ಜಿಪಂ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಹಾಗೂ ಪಶುಪಾಲನಾ ಇಲಾಖೆಯ ಅಧಿಕಾರಿಗಳು ಶ್ವಾನ ಪ್ರದರ್ಶನವನ್ನು ವೀಕ್ಷಿಸಿ, ಬಹುಮಾನ ವಿತರಿಸಿದರು.

ಶ್ವಾನ ತಳಿಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದು ಮತ್ತು ಮನುಷ್ಯನ ಮೊದಲ ಮಿತ್ರನಾಗಿರುವ ಶ್ವಾನಗಳ ಮಹತ್ವ ಸಾರುವುದು ಈ ಪ್ರದರ್ಶನದ ಉದ್ದೇಶವಾಗಿತ್ತು. ಶ್ವಾನಗಳ ತಳಿಯ ವಿಶಿಷ್ಟ ಗುಣಲಕ್ಷಣ ಮತ್ತು ಅವುಗಳ ನಡವಳಿಕೆಯ ಆಧಾರದ ಮೇಲೆ ವಿಜೇತರನ್ನು ನಿರ್ಣಯಿಸಲಾಗಿದೆ ಎಂದು ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಪಶುವೈದ್ಯಾಧಿಕಾರಿ.

ಡಾ. ಲೋಕೇಶ್ ಹೇಳಿದರು.