ಹುಕ್ಕೇರಿಮಠದ ನಮ್ಮೂರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ನಗರದಲ್ಲಿ ಸುಮಾರು ಆರು ಸಾವಿರಕ್ಕೂ ಅಧಿಕ ಮಹಿಳೆಯರಿಂದ ಶಿವಬಸವ ಬುತ್ತಿ ಮೆರವಣಿಗೆ ಸಂಭ್ರಮದಿಂದ ನಡೆಯಿತು.
ಹಾವೇರಿ: ಹುಕ್ಕೇರಿಮಠದ ನಮ್ಮೂರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ನಗರದಲ್ಲಿ ಸುಮಾರು ಆರು ಸಾವಿರಕ್ಕೂ ಅಧಿಕ ಮಹಿಳೆಯರಿಂದ ಶಿವಬಸವ ಬುತ್ತಿ ಮೆರವಣಿಗೆ ಸಂಭ್ರಮದಿಂದ ನಡೆಯಿತು.ನಗರದ ಹುಕ್ಕೇರಿಮಠ ಆವರಣದಿಂದ ಆರಂಭವಾದ ಶಿವಬಸವ ಬುತ್ತಿ ಮೆರವಣಿಗೆಯು ಗುತ್ತಲ ರಸ್ತೆ ಮಾರ್ಗವಾಗಿ ಸಂಗೂರ ಕರಿಯಪ್ಪ ವೃತ್ತ, ಜಿಲ್ಲಾಸ್ಪತ್ರೆ ಮುಂಭಾಗ, ಕಾಗಿನೆಲೆ ವೃತ್ತ, ಹೊಸಮನಿ ಸಿದ್ದಪ್ಪ ವೃತ್ತ, ಕಿತ್ತೂರ ರಾಣಿ ಚೆನ್ನಮ್ಮ ವೃತ್ತ ಮಾರ್ಗವಾಗಿ ವಿದ್ಯಾನಗರ ಎರಡನೇ ಕ್ರಾಸ್ ಮೂಲಕ ಕಾರ್ಯಕ್ರಮ ನಡೆಯುವ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣವನ್ನು ತಲುಪಿತು. ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರು ಶೇಂಗಾ ಹೋಳಿಗೆ ಇರುವ ಬಸವ ಬುತ್ತಿ ಗಂಟಿಗೆ ರಾಷ್ಟ್ರಧ್ವಜ ಮಾದರಿಯಲ್ಲಿ ಕೇಸರಿ, ಬಿಳಿ, ಹಸಿರು ಬಣ್ಣದ ಹೊದಿಕೆಗಳನ್ನು ಕಟ್ಟಿಕೊಂಡು ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ಮಹಿಳೆಯರ ಉತ್ಸಾಹಕ್ಕೆ ಪಾರವೇ ಇರಲಿಲ್ಲ. ಶಿವಬಸವೇಶ್ವರ ಮಹಾರಾಜ್ ಕೀ ಜೈ, ಶಿವಲಿಂಗೇಶ್ವರ ಮಹಾರಾಜ ಕೀ ಜೈ, ಸದಾಶಿವ ಮಹಾಸ್ವಾಮೀಜಿ ಕೀ ಜೈ ಎನ್ನುವ ಜಯಘೋಷಣೆಗಳು ಮೊಳಗಿದವು.ಈ ವೇಳೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ, ಶೇಗುಣಸಿಯ ಡಾ.ಮಹಾಂತಪ್ರಭು ಸ್ವಾಮೀಜಿ, ವಿರೂಪಾಕ್ಷ ದೇವರು, ರಾವೂರಿನ ಸಿದ್ದಲಿಂಗೇಶ್ವರ ಸ್ವಾಮೀಜಿ, ಅಕ್ಕಿಆಲೂರಿನ ಶಿವಬಸವ ಸ್ವಾಮೀಜಿ, ಕೂಡಲದ ಗುರುಮಹೇಶ್ವರ ಸ್ವಾಮೀಜಿ, ಅಭಿನವ ಷಣ್ಮುಖರೂಢ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು, ಜಾತ್ರಾ ಮಹೋತ್ಸವ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.