ಯಲ್ಲಾಪುರ: ಬ್ಯಾಂಕ್ ಗೆ ಪರ್ಯಾಯ ಹೆಸರೇ ವಿಶ್ವಾಸ. ಬ್ಯಾಂಕ್ ಮತ್ತು ಗ್ರಾಹಕರ ನಡುವೆ ಇರುವ ಸೇತುವೆ ವಿಶ್ವಾಸ. ಅದುವೇ ಬ್ಯಾಂಕಿನ ಪ್ರಗತಿಗೆ ಕಾರಣವಾಗುತ್ತದೆ. ಯಾವಾಗ ತನ್ನ ವಿಶ್ವಾಸವನ್ನು ಬ್ಯಾಂಕ್ ಕಳೆದುಕೊಳ್ಳುತ್ತದೋ, ಪುನಃ ಗಳಿಸಲಸಾಧ್ಯ. ಆ ನಿಟ್ಟಿನಲ್ಲಿ ಆಡಳಿತ ಮಂಡಳಿ, ಸಿಬ್ಬಂದಿ ವಿಶ್ವಾಸಕ್ಕೆ ಧಕ್ಕೆ ಬರದಂತೆ ಕಾರ್ಯನಿರ್ವಹಿಸಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನುಡಿದರು.

ಪಟ್ಟಣದಲ್ಲಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ ನ ಶಾಖೆಯ ನೂತನ ಕಟ್ಟಡ ಹಾಗೂ ಎಟಿಎಂ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಎಲ್ಲ ಬ್ಯಾಂಕ್‌ಗಳನ್ನು ನಿಯಂತ್ರಣ ಮಾಡುವುದೇ ಆರ್‌ಬಿಐ. ಅಂತಹ ಆರ್‌ಬಿಐಗಿಂತ ಮೂವತ್ತು ವರ್ಷಗಳ ಹಿಂದೆಯೇ ಶಿರಸಿ ಅರ್ಬನ್ ಬ್ಯಾಂಕ್ ಸ್ಥಾಪನೆಯಾಗಿದೆ. ಜನರಿಗೆ ಆರ್ಥಿಕ ನೆರವಾಗಲೆಂಬ ಸದುದ್ದೇಶದಿಂದ ೧೨೦ ವರ್ಷಗಳ ಹಿಂದೆಯೇ ಪೂರ್ವಜರು ಈ ಬ್ಯಾಂಕ್ ಸ್ಥಾಪಿಸಿರುವುದು ಅವರ ದೂರದೃಷ್ಟಿಯ ಪ್ರತೀಕ ಎಂದರು.

ಜ್ಯೋತಿಷ್ಯಶಾಸ್ತ್ರದ ಪ್ರಕಾರ ವಿಜಯಾ ತಿಥಿ, ಪುಷ್ಯ ನಕ್ಷತ್ರದ ಶುಭ ಮುಹೂರ್ತದಲ್ಲಿ ಆರಂಭವಾದ ಕಟ್ಟಡದಲ್ಲಿ ಆಡಳಿತ ಮಂಡಳಿಯ ಎಲ್ಲ ಸಂಕಲ್ಪಗಳು ಈಡೇರುತ್ತದೆ ಎಂದು ಆಶೀರ್ವದಿಸಿದರು.

ಠೇವುದಾರರಿಗೆ ಬಡ್ಡಿಯ ಆಸೆ ತೋರಿಸಿ ಠೇವೂ ಸಿಗದಂತಹ ಸ್ಥಿತಿಗೆ ಕೆಲವು ಆರ್ಥಿಕ ಸಂಸ್ಥೆಗಳು ತಲುಪಿವೆ. ಹಾಗಾಗಿ ಬಡ್ಡಿ ಕಡಿಮೆ ನೀಡಿದರೂ ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳುವುದೇ ಮುಖ್ಯವಾಗಬೇಕು. ಈ ಬ್ಯಾಂಕ್ ಆಡಳಿತ ಮಂಡಳಿಯ ಚಿಂತನೆಯ ಅಂತರ್ ರಾಜ್ಯ ಬ್ಯಾಂಕಿಂಗ್ ವ್ಯವಹಾರ ನಡೆಸುವತ್ತ ಮುಂದಾಗಿ, ಗೋವಾದಲ್ಲಿ ಬ್ಯಾಂಕ್ ಪ್ರಾರಂಭಿಸಬೇಕೆಂಬ ನಮ್ಮ ಸಂಕಲ್ಪಕ್ಕೆ ಬ್ಯಾಂಕ್ ಮುಂದಾಗಬೇಕು ಎಂದರು.


ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಮಾತನಾಡಿ, ಶಿರಸಿ ಅರ್ಬನ್ ಬ್ಯಾಂಕ್ ಹಣಕಾಸಿನ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೇ, ಸಾಮಾಜಿಕ ಸೇವೆಯಲ್ಲೂ ತೊಡಗಿಸಿಕೊಂಡಿರುವುದು ಗಮನಾರ್ಹ ಎಂದರು.

ಬ್ಯಾಂಕ್ ಅಧ್ಯಕ್ಷ ಜಯದೇವ ಯು. ನಿಲೇಕಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ೪೬ ವರ್ಷಗಳ ಹಿಂದೆ ಯಲ್ಲಾಪುರ ಶಾಖೆ ಬಾಡಿಗೆ ಕಟ್ಟಡದಲ್ಲಿ ಆರಂಭವಾಗಿತ್ತು. ಈಗ ಸ್ವಂತ ಸ್ಥಳದಲ್ಲಿ, ಸ್ವಂತ ಕಟ್ಟಡವನ್ನು ಹೊಂದಿ ಅದು ಉದ್ಘಾಟನೆಗೊಂಡಿದೆ. ಗ್ರಾಹಕರಿಗಾಗಿ ಎಟಿಎಂ ಸಹ ಆರಂಭವಾಗಿದೆ ಎಂದರು.

೨೨ ಶಾಖೆಗಳನ್ನು ಹೊಂದಿರುವ ಬ್ಯಾಂಕ್ ೫೦ ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ೨೫೦೦ ಕೋಟಿಗಿಂತ ಹೆಚ್ಚಿನ ವ್ಯವಹಾರ ನಡೆಸುತ್ತಿದೆ. ಸದ್ಯದಲ್ಲೇ ಇನ್ನೂ ೩ ಹೊಸ ಶಾಖೆಗಳನ್ನು ಆರಂಭಿಸುವ ಯೋಜನೆ ಹೊಂದಿದ್ದೇವೆ. ಅಂತರ್ ರಾಜ್ಯ ಬ್ಯಾಂಕ್ ಆಗಿ ಪರಿವರ್ತನೆ ಹೊಂದಬೇಕೆಂಬ ಉದ್ದೇಶವನ್ನೂ ಹೊಂದಿದ್ದೇವೆ ಎಂದರು.

ಪರ್ತಗಾಳಿ ಮಠದ ಪುರೋಹಿತರು ವೇದಘೋಷ. ಶಿರಸಿಯ ನಿವೃತ್ತ ಪ್ರಾಚಾರ್ಯ ಕೆ.ಎನ್. ಹೊಸಮನಿ ನಿರ್ವಹಿಸಿದರು.