ವಿದ್ಯುತ್ ಇಲಾಖೆಯ ಖಾಸಗೀಕರಣವನ್ನು ವಿರೋಧಿಸಿ ಉತ್ತರ ಕನ್ನಡ ರೈತ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಸಿದ್ದಾಪುರ: ವಿದ್ಯುತ್ ಇಲಾಖೆಯ ಖಾಸಗೀಕರಣವನ್ನು ವಿರೋಧಿಸಿ ಉತ್ತರ ಕನ್ನಡ ರೈತ ಕ್ಷೇಮಾಭಿವೃದ್ಧಿ ಸಂಘದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಉತ್ತರ ಕನ್ನಡ ರೈತ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೀರಭದ್ರ ನಾಯ್ಕ ಮಾತನಾಡಿ, ನಮ್ಮನ್ನು ಆಳುವ ನಾಯಕರು ಅವರ ಆಡಳಿತ ವೈಫಲ್ಯದಿಂದ ಹಿರಿಯರು ಹುಟ್ಟುಹಾಕಿದ ಸರ್ಕಾರದ ಇಲಾಖೆಗಳನ್ನು ಖಾಸಗೀಕರಣ ಮಾಡುತ್ತಿದ್ದಾರೆ. ಖಾಸಗಿ ಕಂಪನಿಯವರು ಜನರ ಸಹಾಯಕ್ಕೆ ಯಾವುದೇ ಕೆಲಸ ಮಾಡುವುದಿಲ್ಲ. ಅವರು ಹಣ ಮಾಡಿಕೊಳ್ಳಲು ಈ ಹುನ್ನಾರ ನಡೆಸಿದ್ದಾರೆ. ವಿದ್ಯುತ್ ಇಲಾಖೆಯ ಸಿಬ್ಬಂದಿ ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ಖಾಸಗೀಕರಣದಿಂದ ಉದ್ಯೋಗ ಸೃಷ್ಟಿ ಆಗುವುದಿಲ್ಲ. ಹೊರ ರಾಜ್ಯದಿಂದ ಸಿಬ್ಬಂದಿಗಳನ್ನು ಕರೆತರುತ್ತಾರೆ. ನಮ್ಮವರಿಗೆ ಅನ್ಯಾಯವಾಗುತ್ತದೆ. ಮುಖ್ಯಮಂತ್ರಿಗಳು ಯಾವುದೇ ಕಾರಣಕ್ಕೂ ಖಾಸಗೀಕರಣಕ್ಕೆ ಅನುಮತಿ ನೀಡಬಾರದು. ಇದು ಕೇವಲ ಸಾಂಕೇತಿಕ ಪ್ರತಿಭಟನೆ ಆಗಿದ್ದು, ನಮ್ಮ ಹೋರಾಟಕ್ಕೆ ನ್ಯಾಯ ಸಿಗದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟದ ಅನಿವಾರ್ಯತೆ ಎದುರಾಗುತ್ತದೆ ಎಂದರು.

ಕೆಪಿಟಿಸಿಎಲ್ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಆಂಥೋನಿ ಮಾತನಾಡಿ, ಇಂದು ವಿದ್ಯುತ್ ಎನ್ನುವುದು ಒಂದು ಮೂಲಭೂತ ಸೌಲಭ್ಯ ಆಗಿದೆ. ಲಕ್ಷಾಂತರ ಜನರ ಶ್ರಮದಿಂದ ಈ ಸಂಸ್ಥೆ ಬೆಳೆದು ಬಂದಿದೆ. ಆದರೆ ಈಗ ಕೇವಲ ಲಾಭದ ಉದ್ದೇಶಕ್ಕಾಗಿ ಖಾಸಗಿ ಕಂಪನಿ ಅದನ್ನು ಹತೋಟಿಗೆ ತೆಗೆದುಕೊಳ್ಳಲು ಪ್ರಯತ್ನಿಸುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ಎಲ್ಲರಿಗೂ ತೊಂದರೆ ಉಂಟಾಗುತ್ತದೆ ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ ನಾಯ್ಕ ಕುಂಬ್ರಿಗದ್ದೆ, ಕರವೇ ಜನಧ್ವನಿಯ ಹೇಮಂತ ಗೋಳಗೊಡು, ರವಿ ಕೊಠಾರಿ, ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಉಪಾಧ್ಯಕ್ಷ ವಿಠ್ಠಲ ನಾಯ್ಕ, ಹೊಳಿಯಪ್ಪ ಕೆ., ಪಿ.ಬಿ. ಹೊಸೂರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು, ಹೆಸ್ಕಾಂ ಸಿಬ್ಬಂದಿ ಮತ್ತು ಸಾರ್ವಜನಿಕರು ಇದ್ದರು.

ರೈತ ಸಂಘದಿಂದ ಆಕ್ಷೇಪಣೆ ಸಲ್ಲಿಕೆ

ಜೋಯಿಡಾ: ರಾಜ್ಯದಲ್ಲಿ ವಿದ್ಯುತ್ ವಿತರಣೆ ಪರವಾನಗಿ ಪಡೆಯಲು ಟಾಟಾ ಪವರ್‌ ಕಂಪನಿ ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗಕ್ಕೆ ಅರ್ಜಿ ಸಲ್ಲಿಸುವುದು ರೈತಾಪಿ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಅಪಾಯಕಾರಿ ಸಂಗತಿ. ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜೋಯಿಡಾ ತಾಲೂಕು ಸಮಿತಿ ವತಿಯಿಂದ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜೋಯಿಡಾ ತಾಲೂಕಾಧ್ಯಕ್ಷ ಪ್ರೇಮಾನಂದ ವೇಳಿಪ ತಿಳಿಸಿದ್ದಾರೆ.ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿದ್ಯುತ್‌ ಖಾಸಗೀಕರಣವಾದರೆ ಸರ್ಕಾರದಿಂದ ಅನುಷ್ಠಾನ ಗೊಳ್ಳುತ್ತಿರುವ ವಿವಿಧ ಕಲ್ಯಾಣ ಯೋಜನೆಗಳು ಬಂದ್ ಆಗುವ ಸಾಧ್ಯತೆಗಳಿವೆ. ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಬಂದ ಆಗಲಿದೆ. ಗ್ರಾಹಕರಿಗೆ ವಿದ್ಯುತ್ ದರ ಏರಿಕೆಯಿಂದ ಆರ್ಥಿಕ ಹೊರೆ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಟಾಟಾ ಕಂಪನಿಯು ಉತ್ತರ ಕನ್ನಡ ಜಿಲ್ಲೆ ಸೇರಿ ರಾಜ್ಯದ 19 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಗೆ ಪರವಾನಗಿ ಕೋರಿದೆ. ಈ ಕಂಪನಿಯ ಯಾವುದೇ ವಿಶ್ವಾಸಾರ್ಹ ಅಂಶಗಳನ್ನು ಹೊಂದಿರದೇ ಇರುವದರಿಂದ ಅವರ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಆಕ್ಷೇಪಣೆಯಲ್ಲಿ ತಿಳಿಸಲಾಗಿದೆ.

ಖಾಸಗೀಕರಣ ನೇರ ನಗದು ವರ್ಗಾವಣೆ ಹಾಗೂ ಸ್ಮಾರ್ಟ್ ಮೀಟರ್ ಅಳವಡಿಕೆಯಂತಹ ರೈತ ವಿರೋಧಿ ಕ್ರಮಗಳಿಗೆ ತುತ್ತಾಗಿ ಕೃಷಿ ಕ್ಷೇತ್ರ ಕುಂಠಿತವಾಗಿ ಆಹಾರ ಭದ್ರತೆಗೆ ತೊಂದರೆ ಉಂಟಾಗಬಹುದು. ನೌಕರರ ಭದ್ರತೆಗೆ ಕಂಟಕವಾಗಲಿದೆ ಎಂದು ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗದ ಕಾರ್ಯದರ್ಶಿಗಳಿಗೆ ಅಂಚೆ ಮೂಲಕ ಆಕ್ಷೇಪಣೆ ಸಲ್ಲಿಸಲಾಯಿತು. ಈ ಸಂದರ್ಭ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯದರ್ಶಿ ರಾಜೇಶ ಗಾವಡಾ, ಖಜಾಂಚಿ ಶಾಂತಾ ವೇಳಿಪ, ಹಾಗೂ ಕೃಷ್ಣಾ ಗಾವಡಾ ಉಪಸ್ಥಿತರಿದ್ದರು.