ಗೋಕರ್ಣ: ಸ್ವೀಟ್ ಅಂಗಡಿಯ ಸಹೋದರರ ನಡುವೆ ವಾಗ್ವಾದ ನಡೆದು ಚಾಕುನಿಂದ ಇರಿದ ಘಟನೆ ಬುಧವಾರ ಮುಂಜಾನೆ ಮಹಾಬಲೇಶ್ವರ ಮಂದಿರದ ಪಶ್ಚಿಮ ದ್ವಾರದಿಂದ ಮುಖ್ಯಕಡಲತೀರಕ್ಕೆ ಸಾಗುವ ಮಾರ್ಗದಲ್ಲಿ ನಡೆದಿದೆ.

ಅಂಗಡಿಯ ಮಾಲಕ ಮಹಾರಾಷ್ಟ್ರ ಮೂಲದ ಪ್ರಸಾದ ದಾದಾಸಾಹೇಬ್ ಯಾದವ (೨೪) ಎಂಬುವರ ಜೊತೆ ಇವರ ಅಣ್ಣ ( ದೊಡ್ಡಪ್ಪನ ಮಗ) ಯಾವುದೋ ಕಾರಣಕ್ಕೆ ಗಲಾಟೆ ಮಾಡಿದ್ದು, ನಂತರ ಚಾಕುವಿನಿಂದ ಇರಿದಿದ್ದಾನೆ. ದೇವಾಲಯಕ್ಕೆ ತೆರಳುವ ಭಕ್ತರು, ಅಕ್ಕಪಕ್ಕದಲ್ಲಿರುವ ಅಂಗಡಿಗಾರರು, ಜನರು ಏಕಾಏಕಿ ಈ ಘಟನೆ ನೋಡಿ ವಿಚಲಿತರಾಗಿದ್ದಾರೆ.

ತಕ್ಷಣ ಪ್ರಸಾದರವನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದ್ದು, ಅಲ್ಲಿ ಚಿಕಿತ್ಸೆ ನೀಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕುತ್ತಿಗೆ, ಕೈ , ಹೊಟ್ಟೆ, ಹಾಗೂ ಬೆನ್ನಿಗೆ ಭಾಗಕ್ಕೆ ಗಾಯವಾಗಿದೆ. ಚಾಕು ತುಂಡಾದ ಪರಿಣಾಮ ದೊಡ್ಡಮಟ್ಟದ ಗಾಯವಾಗಿಲ್ಲ ಎನ್ನಲಾಗಿದ್ದು, ಚಾಕು ಇರಿದ ಭಗವಾನ್ ಪಾಟೀಲ್ ಸ್ಥಳದಿಂದ ಪರಾರಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಾರಿಯಾದ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಟ್ಯಾಟೋ ಅಂಗಡಿಯವನ ಗಾಂಜಾ ಮಾರಾಟದ ಪ್ರಕರಣ ಮಾಸುವ ಮುನ್ನವೇ ಸ್ವೀಟ್ ಅಂಗಡಿಯವರ ಚಾಕು ಇರಿತದ ಘಟನೆ ಬುಧವಾರ ನಡೆದಿದ್ದು, ಹೊರ ಊರಿನಿಂದ ಉದ್ಯೋಗದ ನೆಪದಲ್ಲಿ ಬಂದ ಕೆಲವರು ಅಹಿತಕರ ಚಟುವಟಿಕೆ ನಡೆಸುತ್ತಿರುವುದರಿಂದ ಧಾರ್ಮಿಕ ಕ್ಷೇತ್ರಕ್ಕೆ ಅಪಾಯ ಎದುರಾಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ.


ಮೌರ್ಯ ಬಾರ್ ಎದುರು ರೌಡಿ ಗಲಾಟೆ: ಹಳಿಯಾಳ ಪಿಎಸೈ ಅಮಾನತು

ಹಳಿಯಾಳ: ಪಟ್ಟಣದ ಮೌರ್ಯ ಬಾರ್ ರೆಸ್ಟೋರೆಂಟ್ ಕ್ಲಬ್ ಬಳಿ ಭಾನುವಾರ ರಾತ್ರಿ ರೌಡಿಯೊರ್ವ ಕುಡಿದ ಮತ್ತಿನಲ್ಲಿ ಮಾಡಿದ ಗಲಾಟೆ ಹಾಗೂ ಪೊಲೀಸ್ ಸಿಬ್ಬಂದಿಗೆ ಅವಾಚ್ಯವಾಗಿ ಬೈಯ್ದು ಹಲ್ಲೆ ನಡೆಸಿದ್ದರೂ ಘಟನೆಯನ್ನು ನಿಯಂತ್ರಿಸಲು ವಿಫಲವಾದ ಹಳಿಯಾಳ ಪಿಎಸ್‌ಐ ಸೇರಿದಂತೆ 8 ಪೊಲೀಸ್ ಸಿಬ್ಬಂದಿ ಮೇಲೆ ಉತ್ತರಕನ್ನಡ ಎಸ್ಪಿ ಶಿಸ್ತಿನ ಕ್ರಮ ಕೈಗೊಂಡು ಆದೇಶ ಹೊರಡಿಸಿದ್ದಾರೆ ಎಂದು ತಿಳಿದು ಬಂದಿದೆ.ಹಳಿಯಾಳ ಠಾಣೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪಿಎಸೈ ಬಸವರಾಜ ಮಬನೂರ ಅವರನ್ನು ಅಮಾನತ್ತುಗೊಳಿಸಲಾಗಿದ್ದು, ಇನ್ನೂಳಿದ 8 ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ಮದ್ಯೆ ಘಟನೆಗೆ ಮೂಲ ಕಾರಣಿಕರ್ತನಾದ ನಿರಲಗಾ ಗ್ರಾಮದ ಹಳೆಯ ರೌಡಿಶೀಟರ್ ಮಂಜುನಾಥ (ಮಚ್ಚ್ ಮಂಜ್ಯಾ) ಸುಬ್ರಾಯ್ ಬೇಕನಿ ತಲೆಮರೆಸಿಕೊಂಡಿದ್ದಾರೆ.ಕುಡಿದು ಗಲಾಟೆ:

ಜೂನ್ 14ರಂದು ಮೌರ್ಯ ಬಾರ್ ರೆಸ್ಟೋರೆಂಟ್‌ನಲ್ಲಿ ಕುಡಿದ ಅಮಲಿನಲ್ಲಿ ಮಂಜುನಾಥ ಗಲಾಟೆ ಆರಂಭಿಸಿದ್ದ. ಸುದ್ದಿ ತಿಳಿದು ಪೋಲಿಸರು ಆಗಮಿಸಿದ್ದನ್ನು ಕಂಡು ಮತ್ತಷ್ಟು ಕೆರಳಿದ ಮಂಜುನಾಥ ಅವರ ಮೇಲೆಯೇ ಸಾರ್ವಜನಿಕರೆದುರೇ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ತದನಂತರ ರೆಸ್ಟೋರೆಂಟ್ ಎದುರಿನ ರಾಜ್ಯ ಹೆದ್ದಾರಿಯ ಮೇಲೆ ಇಳಿದು ಅವಾಚ್ಯವಾಗಿ ಬೈಯುತ್ತ ರಂಪಾಟ ನಡೆಸಿದ್ದ ಎನ್ನಲಾಗಿದೆ. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪಿಎಸೈ ಬಸವರಾಜ ಮಬನೂರ ಆಗಮಿಸಿದ್ದರೂ ಮಂಜುನಾಥ ತನ್ನ ಬಟ್ಟೆ ಕಳಚಿ ಅರ್ಭಟ ಮುಂದುವರಿಸಿದ್ದ. ಅಲ್ಲದೇ, ಪಿಎಸೈ ವಾಹನದ ಮುಂದೇ ಅಡ್ಡ ಮಲಗಿದ್ದೆ ಎನ್ನಲಾಗಿದೆ. ರಸ್ತೆಯ ಮೇಲೆ ನಡೆದಿರುವ ಗಲಾಟೆ ಹಾಗೂ ನಿಸ್ಸಹಾಯಕರಾಗಿ ನಿಂತ ಪೊಲೀಸರನ್ನು ನೋಡಲು ಪಟ್ಟಣದ ಜನಜಾತ್ರೆಯೇ ಸೇರಿದ್ದರೇ ಹಲವರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.ಎರಡು ಪ್ರಕರಣ ದಾಖಲು: ಈ ಘಟನೆಗೆ ಸಂಬಂಧಿಸಿದಂತೆ ಹಳಿಯಾಳ ಠಾಣೆಯಲ್ಲಿ ಭಾನುವಾರ ರಾತ್ರಿಯೇ ರೆಸ್ಟೋರೆಂಟ್-ಕ್ಲಬ್ ಮ್ಯಾನೇಜರ್ ದೂರು ದಾಖಲಿಸಿದ್ದರು. ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಬಾರ್-ಗಲಾಟೆಯ ವಿಡಿಯೋ ವೈರಲ್ ಆದರೆ, ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆದರೂ ಯಾವುದೇ ಕ್ರಮವಾಗಿಲ್ಲ ಎಂಬ ಆರೋಪ ಸಾರ್ವಜನಿಕವಾಗಿ ಕೇಳಿ ಬಂದಿತ್ತು. ಇದನ್ನು ನೋಡಿ, ಎಚ್ಚೆತ್ತುಕೊಂಡ ಹಳಿಯಾಳ ಪಿಎಸೈ ಮಬನೂರ ಅವರು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ದೂರನ್ನು ದಾಖಲಿಸಿದರು.

ಶಾಸಕರಿಗೂ ದೂರು: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೌರ್ಯ ಬಾರ್ ರೆಸ್ಟೋರೆಂಟ್ ಗಲಾಟೆಯು ಬೆಂಗಳೂರಿನಲ್ಲಿರುವ ಹಿರಿಯ ಶಾಸಕ ಆರ್.ವಿ. ದೇಶಪಾಂಡೆಯವರ ಗಮನಕ್ಕೂ ಬಂದು ಅವರು ತಮ್ಮ ಆಪ್ತ ವಲಯದಲ್ಲಿ ಈ ಘಟನೆಯ ಮಾಹಿತಿ ಪಡೆದು, ಎಸ್ಪಿಗೆ ಕರೆ ಮಾಡಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದು ಬಂದಿದೆ. ಇದರಿಂದ ಮಂಗಳವಾರ ಸಂಜೆ ಹಳಿಯಾಳಕ್ಕೆ ಭೇಟಿ ನೀಡಿದ ಎಸ್ಪಿ ದೀಪನ್ ಘಟನೆಯ ಪರಿಶೀಲನೆ ನಡೆಸಿದರು ಎನ್ನಲಾಗಿದ್ದು, ಗಲಾಟೆಯ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಿಸಿ ಮಾಹಿತಿಯನ್ನು ಕಲೆಹಾಕಿ, ಬುಧವಾರ ಶಿಸ್ತಿನ ಕ್ರಮ ಕೈಗೊಂಡಿದ್ದಾರೆ.